ಶಿಕ್ಷಣ ಕ್ಷೇತ್ರದಲ್ಲಿ ಅರ್ಥಪೂರ್ಣ ಸುಧಾರಣೆ : ಡಿಸಿಎಂ ಅಶ್ವಥ್ ನಾರಾಯಣ್…

ಬೆಂಗಳೂರು,ಸೆಪ್ಟೆಂಬರ್, 05,2020(www.justkannada.in) : ಸರಕಾರ ರಾಜ್ಯದ ಸಮಗ್ರ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಸುಧಾರಣೆ ಮಾಡಲು ದಿಟ್ಟ ಹೆಜ್ಜೆ ಇಟ್ಟಿದ್ದು, ಸರ್ವೆಪಲ್ಲಿ ರಾಧಾಕೃಷ್ಣನ್‌ ಸೇರಿದಂತೆ ಈ ದೇಶ ಕಟ್ಟಿದ ಮಹಾಪುರುಷರ ಸ್ಫೂರ್ತಿಯೊಂದಿಗೆ ಕೆಲಸ ಮಾಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದರು.

jk-logo-justkannada-logo

ಬೆಂಗಳೂರಿನಲ್ಲಿ ಶನಿವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ‘ಶಿಕ್ಷಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲ ದಿನಾಚರಣೆಗಳಿಗಿಂತ ಶಿಕ್ಷಕರ ದಿನಾಚರಣೆ ಅತ್ಯಂತ ಮಹತ್ವದ್ದು ಹಾಗೂ ಅರ್ಥಪೂರ್ಣವಾದದ್ದು. ಶಿಕ್ಷಕರಿಲ್ಲದೆ ಉತ್ತಮ ಮತ್ತು ಸಶಕ್ತ ಸಮಾಜ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಸುಧಾರಣೆಯ ಪರ್ವ :

ಶಿಕ್ಷಣವನ್ನು ಅತ್ಯಂತ ಮಹತ್ವದ ಕ್ಷೇತ್ರ ಎಂದು ಸರಕಾರ ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ಅನೇಕ ಸುಧಾರಣೆಗಳನ್ನು ಕಳೆದ ಒಂದು ವರ್ಷದಲ್ಲಿ ಜಾರಿಗೆ ತರಲಾಗಿದೆ. ಅದರ ಜತೆಯಲ್ಲಿಯೇ, ಇಡೀ ನಾಡಿನ ಶೈಕ್ಷಣಿಕ ವ್ಯವಸ್ಥೆಯ ದಿಕ್ಸೂಚಿಯನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಂತಹಂತವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಮೂಲಕ ಶಿಕ್ಷಕ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಬಲ ತುಂಬಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ನಾವು ಸಾಕಷ್ಟು ಮುಂದೆ ಇದ್ದೇವೆ. ಇನ್ನೂ ಮುಂದೆ ಸಾಗಬೇಕಿದೆ ಕೂಡ. ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಬೋಧನೆ ಹಾಗೂ ಗುಣಮಟ್ಟದ ವಿದ್ಯಾರ್ಥಿಗಳನ್ನು ರೂಪಿಸಲು ಶಿಕ್ಷಣ ನೀತಿಯು ಸಹಕಾರಿ. ಹೀಗಾಗಿ, ದೇಶದಲ್ಲೇ ಈ ನೀತಿಯನ್ನು ಮೊದಲು ಜಾರಿ ಮಾಡಿದ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ ಎಂದು ಹೇಳಿದರು.

Meaningful-improvement-field-education-DCM

ಕೋವಿಡ್‌ ಕಾಲದಲ್ಲಿ ಅವಿರತ ಶ್ರಮ :

ಶಿಕ್ಷಣ ಕ್ಷೇತ್ರ ಅದರಲ್ಲೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವ ಪ್ರಯತ್ನಗಳು ನಡೆಯುತ್ತಿದ್ದ ಬೆನ್ನಲ್ಲೇ, ಕೋವಿಡ್‌ ವೈರಾಣುವಿನಿಂದ ಕಂಗೆಟ್ಟಿದ್ದ ವಿದ್ಯಾರ್ಥಿ ಸಮೂಹದ ನೆರವಿಗೆ ಧಾವಿಸಲಾಯಿತು.

ಸಿಇಟಿ ಬರೆಯಲಿದ್ದ ವಿದ್ಯಾರ್ಥಿಗಳಿಗೆ ಗೆಟ್‌ಸೆಟ್‌ ಗೋ ಮೂಲಕ ಆನ್‌ಲೈನ್‌ ತರಗತಿಗಳನ್ನು ನಡೆಸಲಾಯಿತು. 2 ಲಕ್ಷ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು. ಬಳಿಕ ಕೋವಿಡ್‌ ತೀವ್ರವಾಗಿದ್ದ ಕಾಲದಲ್ಲಿಯೇ ಸರಕಾರ ಸಿಇಟಿ ಪರೀಕ್ಷೆಯನ್ನು ನಡೆಸಿತು. ಇದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಯಿತು.

ಇತರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 70 ಸಾವಿರ ಆನ್‌ಲೈನ್‌ ತರಗತಿಗಳನ್ನು ನಡೆಸಲಾಯಿತು ಹಾಗೂ 12 ಸಾವಿರಕ್ಕೂ ಹೆಚ್ಚು ಉಪನ್ಯಾಸಗಳನ್ನು ಯುಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಯಿತು ಎಂದು ಡಿಸಿಎಂ ಮಾಹಿತಿ ನೀಡಿದರು.

ಶಿಕ್ಷಣ ತಜ್ಞ, ಯುಜಿಸಿ ಸದಸ್ಯ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯ ಪ್ರೊ.ಎಂ.ಕೆ. ಶ್ರೀಧರ್‌ ಮಾತನಾಡಿ, ಹೊಸ ಶಿಕ್ಷಣ ನೀತಿಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಬೆಳಕು ಚೆಲ್ಲಿದರು.

ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್‌‌ ನಾಯಕ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್‌, ಬೆಂಗಳೂರು ಸಿಟಿ ವಿವಿ  ಉಪ ಕುಲಪತಿ ಜಾಫೆಟ್, ಬೆಂಗಳೂರು ಉತ್ತರ ವಿವಿ ಉಪ ಕುಲಪತಿ ಕೆಂಪರಾಜು, ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಷಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತಿತರರು ಹಾಜರಿದ್ದರು.

key words : Meaningful-improvement-field-education-DCM