ಪೊಲೀಸರಿಗೆ ಆಸ್ತಿ ಜಪ್ತಿ ಅಧಿಕಾರ: ಐಎಂಎ ಪ್ರಕರಣ ಬಳಿಕ ಎಚ್ಚೆತ್ತ ಸರ್ಕಾರ, ಬರಲಿದೆ ಹೊಸ ಕಾನೂನು

ಬೆಂಗಳೂರು: ಜುಲೈ-2: ಹೆಚ್ಚಿನ ಬಡ್ಡಿ, ಲಾಭದ ಆಸೆ ತೋರಿಸಿ ಹಣ ಹೂಡಿಕೆ ಮಾಡಿಸಿಕೊಂಡ ಬಳಿಕ ಗ್ರಾಹಕರಿಗೆ ಟೋಪಿ ಹಾಕಿ ಪರಾರಿಯಾಗುವ ವಂಚಕ ಸಂಸ್ಥೆಗಳನ್ನು ಮಟ್ಟಹಾಕಲು ಸರ್ಕಾರ ಕೊನೆಗೂ ಮುಂದಾಗಿದೆ. ಗ್ರಾಹಕರನ್ನು ವಂಚಿಸುವ ಇಂತಹ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ವಿಶೇಷ ಅಧಿಕಾರವನ್ನು ಪೊಲೀಸರಿಗೆ ನೀಡುವ ಮಹತ್ವದ ನಿರ್ಧಾರಕ್ಕೆ ಬಂದಿದೆ.

ಬಹುಕೋಟಿ ಐಎಂಎ ವಂಚನೆ ಪ್ರಕರಣದ ಬಳಿಕ ಬೇರೆ ಬೇರೆ ರಾಜ್ಯಗಳಲ್ಲಿರುವ ಕಾನೂನು ಅಧ್ಯಯನ ಮಾಡಿರುವ ಸರ್ಕಾರ ಅಂತಿಮವಾಗಿ ಪೊಲೀಸರಿಗೇ ಆಸ್ತಿ ಮುಟ್ಟುಗೋಲಿನ ಅಧಿಕಾರ ನೀಡಿದರೆ ಒಳ್ಳೆಯದೆಂಬ ಅಭಿಪ್ರಾಯಕ್ಕೆ ಬಂದಿದೆ. ಗೃಹ, ಕಾನೂನು, ಸಂಸದೀಯ ವ್ಯವಹಾರಗಳ ಇಲಾಖೆಗಳು ಅಧ್ಯಯನ ನಡೆಸಿ ರ್ಚಚಿಸಿದ ಬಳಿಕ ಹಾಗೂ ಸಾಧಕ ಬಾಧಕ ಪರಿಶೀಲನೆ ನಂತರವೇ ಸರ್ಕಾರ ಈ ತೀರ್ಮಾನ ಕೈಗೊಂಡಿರುವುದಾಗಿ ಉನ್ನತ ಮೂಲಗಳು ಖಚಿತಪಡಿಸಿವೆ.

ತಮಿಳುನಾಡು ಮಾದರಿ: ತಮಿಳುನಾಡಿನಲ್ಲಿ ವಂಚಕ ಸಂಸ್ಥೆಗಳ ಆಸ್ತಿ ಮುಟ್ಟುಗೋಲಿನ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿದೆ. ಈ ತೀರ್ವನದಿಂದ ಉತ್ತಮ ಫಲಿತಾಂಶ ಬಂದಿದೆ. ಆದ್ದರಿಂದ ಅದೇ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸಲು ನಿರ್ಧರಿಸಲಾಗಿದೆ. ವಂಚಕ ಸಂಸ್ಥೆಗಳ ವಿರುದಟಛಿ ದೂರುಗಳು ಬಂದ ಕೂಡಲೇ ವಿಶೇಷ ಕಾನೂನಿನನ್ವಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕಾರಣಗಳೇನು?: ವಂಚಕ ಸಂಸ್ಥೆಗಳ ಪ್ರಮಾಣ ಹೆಚ್ಚುತ್ತಿರುವುದರಿಂದ ಆರ್​ಬಿಐ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಸರ್ಕಾರ 2004ರಲ್ಲಿ ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ ರೂಪಿಸಿತ್ತು. ರಾಷ್ಟ್ರಪತಿಗಳ ಒಪ್ಪಿಗೆ ನಂತರ 2005ರಿಂದ ಈ ಅಧಿನಿಯಮ ಜಾರಿಗೆ ಬಂದಿದೆ. ಈ ಕಾಯ್ದೆಯಲ್ಲಿ 10 ವರ್ಷದ ತನಕ ಸಜೆ, ಒಂದು ಲಕ್ಷ ರೂ. ದಂಡ ಎಂಬ ನಿಯಮಗಳಿವೆ. ಆದರೆ ಕಾನೂನು ಜಾರಿಗೆ ಬಂದ ನಂತರವೂ ವಂಚನೆಗೆ ತಡೆ ಬೀಳದೆ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ. ಹಾಲಿ ಇರುವ ಕಾನೂನಿನಲ್ಲಿ ಕ್ರಮ ಕೈಗೊಳ್ಳುವುದು ತಡವಾಗುತ್ತಿದೆ ಎಂಬ ಕಾರಣಕ್ಕೆ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತಿದೆ.

ಈಗಿರುವ ಕಾನೂನೇನು?: ಹಾಲಿ ಕಾನೂನಿನ ಪ್ರಕಾರ ವಂಚನೆ ದೂರು ಬಂದ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟರು ನೋಡಲ್ ಅಧಿಕಾರಿಯೊಬ್ಬರನ್ನು ನೇಮಕ ಮಾಡಿ ಆ ನಂತರ ಆಸ್ತಿಯ ಪ್ರಮಾಣ ಲೆಕ್ಕ ಹಾಕಬೇಕಾಗುತ್ತದೆ. ಆ ಬಳಿಕವಷ್ಟೇ ಸರ್ಕಾರದ ಅನುಮತಿ ಪಡೆದು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಇದಾದ ಬಳಿಕ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿ ಅಲ್ಲಿ ಪ್ರಕರಣದ ವಿಚಾರಣೆ ನಡೆಯಬೇಕು. ಆ ವೇಳೆಗೆ ಆಸ್ತಿ ಉಳಿಯುವುದೇ ಅನುಮಾನ. ಇದರಿಂದ ಹೂಡಿಕೆದಾರರ ಹಿತ ಕಾಯಲು ಸಾಧ್ಯವಾಗುವುದಿಲ್ಲ ಎಂಬ ಆಕ್ಷೇಪ ಕೇಳಿಬಂದಿತ್ತು.

ಹೊಸ ಕಾನೂನಿನಲ್ಲೇನಿದೆ?

ಸಂಸ್ಥೆಯ ಆಸ್ತಿ ಮಾತ್ರವಲ್ಲದೆ ಪ್ರವರ್ತಕರು, ನಿರ್ದೇಶಕರು, ಪಾಲುದಾರರು, ಮ್ಯಾನೇಜರ್ ಹಾಗೂ ಸದಸ್ಯರ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಇವರೆಲ್ಲರ ಸ್ಥಿರ ಹಾಗೂ ಚರಾಸ್ತಿ ಹರಾಜು ಮಾಡಿ ಹೂಡಿಕೆದಾರರಿಗೆ ಹಣ ಪಾವತಿಸಲು ಅವಕಾಶ ಇದ್ದಲ್ಲಿ ಜನರು ವಂಚಕ ಸಂಸ್ಥೆಗಳ ಜತೆ ಕೈಜೋಡಿಸಲು ಹಿಂಜರಿಯುತ್ತಾರೆಂಬುದು ಚಿಂತನೆಯಾಗಿದೆ. ಇಂತಹ ಸಂಸ್ಥೆಗಳಲ್ಲಿ ಬಡ್ಡಿ ಆಸೆಗಾಗಿ ಹೂಡಿಕೆ ಮಾಡುವವರು ಬಡ-ಮಧ್ಯಮ ವರ್ಗದವರೇ ಆಗಿರುತ್ತಾರೆ. ಅವರಿಗೆ ಆಗುವ ಅನ್ಯಾಯ ತಡೆಯಲು ಕಾನೂನು ಬಿಗಿಗೊಳಿಸಲು ಸರ್ಕಾರ ಮುಂದಾಗಿದೆ.

ದುರುಪಯೋಗ ಭೀತಿ

ಪೊಲೀಸ್ ಠಾಣೆಗಳೆಂದರೆ ಸಂಧಾನದ ಕೇಂದ್ರಗಳು, ರಿಯಲ್ ಎಸ್ಟೇಟ್ ಕಚೇರಿಗಳೆಂಬ ಅಪವಾದವಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೂ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ವಂಚಕ ಸಂಸ್ಥೆಗಳ ಆಸ್ತಿ ಮುಟ್ಟುಗೋಲಿನ ಅಧಿಕಾರವನ್ನು ನೀಡಿದಲ್ಲಿ ದುರುಪಯೋಗ ಆಗುವುದಿಲ್ಲವೇ ಎಂಬ ಪ್ರಶ್ನೆಯೂ ಮೂಡಿದೆ. ಆದರೆ ಸರ್ಕಾರ ಎಲ್ಲ ಎಚ್ಚರಿಕೆ ತೆಗೆದುಕೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ಈಗಿರುವ ಕಾನೂನಿನ ಪ್ರಕಾರ ಆಸ್ತಿ ಮುಟ್ಟುಗೋಲು ತಡವಾಗುತ್ತಿದೆ. ತಮಿಳು ನಾಡಿನಲ್ಲಿರುವಂತೆ ಪೊಲೀ ಸರಿಗೆ ಅಧಿಕಾರ ನೀಡಲು ಹೊಸ ಕಾನೂನು ತರುತ್ತೇವೆ. ಅದರಿಂದ ವಂಚಕ ಸಂಸ್ಥೆಗಳಿಗೆ ಕಡಿವಾಣ ಸಾಧ್ಯ.

| ಎಂ.ಬಿ. ಪಾಟೀಲ್ ಗೃಹ ಸಚಿವ

ವಂಚಕ ಸಂಸ್ಥೆಗಳೆಷ್ಟು

ವಿನಿವಿಂಕ್ ನಂತರ 2013 ರಿಂದ 2016ರ ಅವಧಿಯಲ್ಲಿ 10 ಸಂಸ್ಥೆಗಳು 17 ಲಕ್ಷ ಜನರಿಗೆ 3273 ಕೋಟಿ ರೂ.ವಂಚಿಸಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿವೆ. ಇತ್ತೀಚಿಗೆ ಆಂಬಿಡೆಂಟ್, ಖಾಸನೀಸ್, ಐಎಂಎ ವಂಚನೆ ಬೆಳಕಿಗೆ ಬಂದಿವೆ.
ಕೃಪೆ:ವಿಜಯವಾಣಿ

ಪೊಲೀಸರಿಗೆ ಆಸ್ತಿ ಜಪ್ತಿ ಅಧಿಕಾರ: ಐಎಂಎ ಪ್ರಕರಣ ಬಳಿಕ ಎಚ್ಚೆತ್ತ ಸರ್ಕಾರ, ಬರಲಿದೆ ಹೊಸ ಕಾನೂನು
karnataka-police-property-seize-power-m-b-patil-state-govt-police