ಅಪಾರ್ಟ್‌ಮೆಂಟ್‌ ನಿಷೇಧದಿಂದ ಉಪನಗರಗಳಿಗೆ ವರದಾನ?

ಬೆಂಗಳೂರು:ಜುಲೈ-2: ನಗರದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ನಿಷೇಧ ವಿಧಿಸುವ ಚಿಂತನೆ ಬೆನ್ನಲ್ಲೇ ರಾಜ್ಯದ ಎರಡನೇ ಹಂತದ ನಗರಗಳ ಬೆಳವಣಿಗೆಗೊಂದು ಅವಕಾಶದ ಬಾಗಿಲು ತೆರೆದಂತಾಗಿದೆ. ಐಟಿ-ಬಿಟಿಯಿಂದ ಹಿಡಿದು ರಾಜ್ಯಕ್ಕೆ ಬರುವ ಬಹುತೇಕ ಕಂಪೆನಿಗಳು ಬೆಂಗಳೂರಿಗೆ ಸೀಮಿತವಾಗುತ್ತಿವೆ. ಮೂಲಸೌಕರ್ಯ ಸೇರಿ ಉದ್ಯಮ ಸ್ನೇಹಿ ವಾತಾವರಣ ಇದಕ್ಕೆ ಕಾರಣ.

ಎರಡನೇ ಹಂತದ ನಗರಗಳಲ್ಲಿ ಸರ್ಕಾರವು ಟೌನ್‌ಶಿಪ್‌, ಕಾರಿಡಾರ್‌, ಹೂಡಿಕೆಗೆ ವಿಶೇಷ ರಿಯಾಯ್ತಿಗಳನ್ನು ನೀಡಲು ಮುಂದಾದರೂ ಉದ್ಯಮಿಗಳು ಅತ್ತ ಮುಖ ಮಾಡುತ್ತಿಲ್ಲ. ಈಗ ಹೊಸ ಅಪಾರ್ಟ್‌ಮೆಂಟ್‌ ಯೋಜನೆಗಳನ್ನು ನಿಷೇಧಿಸುವ ಚಿಂತನೆ ನಡೆಸಿದೆ. ಇದರ ಜತೆಗೆ ಉಪನಗರಗಳಲ್ಲಿ ಹಲವು ಪೂರಕ ಕ್ರಮಗಳನ್ನು ಕೈಗೊಂಡರೆ, ಬೆಳವಣಿಗೆಗೆ ಇದು ಸಕಾಲ ಆಗಲಿದೆ ಎಂದು ಉದ್ಯಮಿಗಳು ಮತ್ತು ತಜ್ಞರು ಅಭಿಪ್ರಾಯಪಡುತ್ತಾರೆ.

ರಾಜಧಾನಿಯಲ್ಲಿ ಹೊಸ ಅಪಾರ್ಟ್‌ಮೆಂಟ್‌ಗಳನ್ನು ನಿಷೇಧಿಸಿದರೆ, ಬಿಲ್ಡರ್‌ಗಳು ಬೇಡಿಕೆಗೆ ಅನುಗುಣವಾಗಿ ಮೈಸೂರು, ಹುಬ್ಬಳ್ಳಿ-ಧಾರವಾಡ, ತುಮಕೂರು, ಮಂಗಳೂರು, ದಾವಣಗೆರೆಯಂತಹ ನಗರಗಳಲ್ಲಿ ಹರಿದುಹಂಚಿ ಹೋಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಐಟಿ-ಬಿಟಿ, ಸಂಶೋಧನಾ ಕೇಂದ್ರಗಳು, ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ಬಿಡಿಭಾಗಗಳನ್ನು ಪೂರೈಸುವಂತಹ ಕಂಪೆನಿಗಳನ್ನೂ ಈ ಉಪನಗರಗಳತ್ತ ಕೊಂಡೊಯ್ಯಲು ಪ್ರೋತ್ಸಾಹಿಸಲು ಸಕಾಲ. ಇದರಿಂದ ಉದ್ಯಾನ ನಗರಿಯ ಮೇಲಿನ ಒತ್ತಡವನ್ನೂ ಕಡಿಮೆ ಮಾಡಬಹುದೆಂದು ತಜ್ಞರು ವಿಶ್ಲೇಷಿಸುತ್ತಾರೆ.

ಸಮಗ್ರ ಅಭಿವೃದ್ಧಿ ಕಲ್ಪನೆ ಇರಲಿ: ಕೇವಲ ಹೊಸ ಅಪಾರ್ಟ್‌ಮೆಂಟ್‌ಗಳನ್ನು ನಿಷೇಧಿಸಿದರೆ ಸಾಲದು, ಅನೇಕ ಸಾಫ್ಟ್ವೇರ್‌ ಕಂಪೆನಿಗಳು ಮತ್ತಿತರ ಕ್ಷೇತ್ರಗಳ ಉದ್ಯಮಿಗಳು ಹೂಡಿಕೆಗೆ ಇಲ್ಲಿ ಬರುತ್ತಾರೆ. ಹಾಗಿದ್ದರೆ, ಅವರ ಕತೆ ಏನು? ಆದ್ದರಿಂದ ಈ ಹೂಡಿಕೆದಾರರನ್ನೂ ಎರಡನೇ ಹಂತದ ನಗರಗಳತ್ತ ಕೊಂಡೊಯ್ಯಬೇಕು. ಆಗ ಸಮತೋಲನ ಆಗುತ್ತದೆ.

ಹಾಗೂ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದಕ್ಕಾಗಿ ಸರ್ಕಾರ ಆ ನಗರಗಳಿಗೆ ಅಗತ್ಯ ಸೌಲಭ್ಯಗಳನ್ನೂ ಕಲ್ಪಿಸಬೇಕಾಗುತ್ತದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಮಾಜಿ ಅಧ್ಯಕ್ಷ ಹಾಗೂ ಸ್ವತಃ ಬಿಲ್ಡರ್‌ ಮಾನಂದಿ ಎನ್‌. ಸುರೇಶ್‌ ತಿಳಿಸುತ್ತಾರೆ.

ಬೇಡಿಕೆ ಇರುವ ಕಡೆಗೆ ಬಿಲ್ಡರ್‌ಗಳು ಹೋಗುತ್ತಾರೆ. ಅದು ಮೊದಲ ಅಥವಾ ಎರಡನೇ ಹಂತದ ನಗರ ಅಥವಾ ಇನ್ನಾವುದೇ ಆಗಿರಲಿ. ತುಮಕೂರು, ಮೈಸೂರು ಸುತ್ತಲಿನ ಪ್ರದೇಶಗಳು ಈಗಾಗಲೇ ಬೆಂಗಳೂರಿನ ಭಾಗವಾಗುತ್ತಿರುವುದನ್ನು ಕಾಣಬಹುದು. ಆದರೆ, ನಗರದ ಬೆಳವಣಿಗೆ ಏಕಾಏಕಿ ಆಗುವಂತಹದ್ದಲ್ಲ. ಸಾಕಷ್ಟು ಸಮಯ ಹಿಡಿಯುತ್ತದೆ.

ಸಮರ್ಪಕ ಸಾರಿಗೆ ಸಂಪರ್ಕ ವ್ಯವಸ್ಥೆ, ವಿದ್ಯುತ್‌, ನೀರು ಸೇರಿ ಸೌಲಭ್ಯಗಳು ಸಮರ್ಪಕವಾಗಿ ದೊರೆಯಬೇಕು. ಇದೆಲ್ಲದರ ಜತೆಗೆ ಹೂಡಿಕೆದಾರರು ಅಲ್ಲಿಗೆ ಬರಲು ಮನಸ್ಸು ಮಾಡಬೇಕು ಎಂದು ಭಾರತೀಯ ರಿಯಲ್‌ ಎಸ್ಟೇಟ್‌ ಡೆವೆಲಪರ್ ಸಂಘಗಳ ಒಕ್ಕೂಟ (ಕ್ರಡಾಯ್‌) ಬೆಂಗಳೂರು ನಗರದ ಚೇರ್‌ಮನ್‌ ಸುರೇಶ್‌ ಹರಿ ಹೇಳಿದರು.

50 ಸಾವಿರ ಕೋಟಿ ಖೋತಾ: ರಿಯಲ್‌ ಎಸ್ಟೇಟ್‌ ಉದ್ಯಮವನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅವಲಂಬಿಸಿದ ಸಾವಿರಾರು ಕ್ಷೇತ್ರಗಳಿವೆ. ಅವು ನಟ್ಟುಬೋಲ್ಟ್, ಫ‌ರ್ನಿಚರ್‌, ಟೈಲ್ಸ್‌, ಸ್ಯಾನಿಟರಿಯಿಂದ ಹಿಡಿದು ಮರಳು, ಸಿಮೆಂಟ್‌, ಕಬ್ಬಿಣ, ಮನೆಗಳ ನೋಂದಣಿ ಸುಂಕದವರೆಗೆ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ.

ಸಾವಿರಾರು ಕಾರ್ಮಿಕರು ಆ ಉದ್ಯಮಗಳನ್ನು ಅವಲಂಬಿಸಿದ್ದಾರೆ. ಅಲ್ಲದೆ ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಬಂದು, ನಿರ್ಮಾಣ ಕ್ಷೇತ್ರದಲ್ಲಿ ಕಾರ್ಮಿಕರಾಗಿದ್ದಾರೆ. ಸುಮಾರು 8ರಿಂದ 10 ಲಕ್ಷ ಕೆಲಸಗಾರರಿಗೆ ಇದರ ಬಿಸಿ ತಟ್ಟಲಿದೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್‌. ಜನಾರ್ದನ ತಿಳಿಸಿದರು.

ನಿಷೇಧದಿಂದ ಸರ್ಕಾರಕ್ಕೆ ವಾರ್ಷಿಕ ಕನಿಷ್ಠ ಹತ್ತು ಸಾವಿರ ಕೋಟಿ ರೂ. ಆದಾಯದಲ್ಲಿ ಖೋತಾ ಆಗಲಿದೆ. ಐದು ವರ್ಷಗಳ ಲೆಕ್ಕ ಹಾಕಿದರೆ, ಅದು 50 ಸಾವಿರ ಕೋಟಿ ರೂ. ಆಗುತ್ತದೆ. ಇದರ ಜತೆಗೆ ಅವಲಂಬಿತ ಕಾರ್ಮಿಕ ಕುಟುಂಬಗಳ ಕತೆ ಏನು? ಈ ಹಿನ್ನೆಲೆಯಲ್ಲಿ ಸರ್ಕಾರ, ಹೊಸ ಅಪಾರ್ಟ್‌ಮೆಂಟ್‌ಗಳ ನಿಷೇಧದ ಬಗ್ಗೆ ತೀರ್ಮಾನಕ್ಕೆ ಬರುವ ಮುನ್ನ ಮರುಚಿಂತನೆ ನಡೆಸಬೇಕೆಂದು ಜನಾರ್ದನ ಒತ್ತಾಯಿಸಿದರು.

ಫ್ಲ್ಯಾಟ್‌-ಮನೆಗಳು ದುಬಾರಿ?: ನಗರದಲ್ಲಿ ಅಪಾರ್ಟ್‌ಮೆಂಟ್‌ಗಳ ನಿಷೇಧದಿಂದ ಎರಡನೇ ಹಂತದ ನಗರಗಳಲ್ಲಿ ಫ್ಲ್ಯಾಟ್‌, ಮನೆಗಳು ಮತ್ತು ನಿವೇಶನಗಳ ಬೆಲೆ ಕೂಡ ಹೆಚ್ಚಳ ಆಗುವ ಸಾಧ್ಯತೆಯಿದೆ. ಹಾಗೊಂದು ವೇಳೆ ಮುಂದಿನ ಐದು ವರ್ಷಗಳ ಕಾಲ ನಿಷೇಧ ವಿಧಿಸಿದರೆ, ಬಿಲ್ಡರ್‌ಗಳು ಎರಡನೇ ಹಂತದ ನಗರಗಳು ಮತ್ತು ಹೊರವಲಯಗಳತ್ತ ಮುಖಮಾಡುವ ಸಾಧ್ಯತೆ ಇದೆ. ಆಗ ಸಹಜವಾಗಿ ಅಲ್ಲಿನ ಭೂಮಿಗೆ ಬೇಡಿಕೆ ಬರಲಿದೆ. ಫ್ಲ್ಯಾಟ್‌ ಅಥವಾ ಮನೆಗಳ ಬೆಲೆ ಕೂಡ ಏರಿಕೆ ಆಗುವ ನಿರೀಕ್ಷೆಯಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಕೃಪೆ:ಉದಯವಾಣಿ

ಅಪಾರ್ಟ್‌ಮೆಂಟ್‌ ನಿಷೇಧದಿಂದ ಉಪನಗರಗಳಿಗೆ ವರದಾನ?

can-suburbs-benefit-from-an-apartment-ban