ಡಿಸ್ಮಿಸ್ ಆದವರಿಗೆ ನಿವೃತ್ತಿ ಹಣ ಕಟ್: ನೌಕರರ ವಂತಿಗೆ ಮಾತ್ರ ಪಾವತಿ, ಸರ್ಕಾರದ ಪಾಲು ಇಲ್ಲ

ಬೆಂಗಳೂರು:ಜುಲೈ-2: ಭ್ರಷ್ಟಾಚಾರ ಸೇರಿ ವಿವಿಧ ಆರೋಪದಲ್ಲಿ ಉದ್ಯೋಗದಿಂದ ವಜಾಗೊಳ್ಳುವ ಸರ್ಕಾರಿ ನೌಕರರಿಗೆ ಇನ್ನು ಪೂರ್ಣ ಪ್ರಮಾಣದಲ್ಲಿ ನಿವೃತ್ತಿ ಹಣ ಸಿಗುವುದಿಲ್ಲ. ನೌಕರರ ವೇತನದಿಂದ ಕಡಿತಗೊಳಿಸುವ ವಂತಿಗೆ ಮೊತ್ತ ಮತ್ತು ಅದಕ್ಕೆ ಬರುವ ಆದಾಯವನ್ನು ಮಾತ್ರ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹೊಸ ನೀತಿಗೆ ನೌಕರರ ವಲಯದಲ್ಲಿ ಅತೃಪ್ತಿ ವ್ಯಕ್ತವಾಗಿದೆ.

2006 ಏ.1ರ ನಂತರ ಸರ್ಕಾರಿ ಸೇವೆಗೆ ಸೇರಿರುವ ಎಲ್ಲ ನೌಕರರಿಗೆ ನೂತನ ಪಿಂಚಣಿ ಯೋಜನೆ (ಎನ್​ಪಿಎಸ್) ಜಾರಿಗೊಳಿಸಲಾಗಿದೆ. ಈ ಯೋಜನೆ ಅನ್ವಯ ನಿವೃತ್ತಿಯಾಗುವ ಉದ್ಯೋಗಿಗಳಿಗೆ ಪ್ರಾನ್ (ಪಿಆರ್​ಎಎನ್-ಪರ್ಮನೆಂಟ್ ರಿಟೈರ್​ವೆುಂಟ್ ಅಕೌಂಟ್ ನಂಬರ್) ಖಾತೆಯಲ್ಲಿ ಸಂಗ್ರಹವಾಗಿರುವ ಕಾಯಂ ನಿವೃತ್ತಿ ಹಣ ಬಿಡುಗಡೆ ಮಾಡಲಾಗುತ್ತದೆ.

ಪ್ರತಿಯೊಬ್ಬ ಸರ್ಕಾರಿ ನೌಕರನ ಮೂಲವೇತನದಿಂದ ಪ್ರತಿ ತಿಂಗಳು ಶೇ.10 ಕಡಿತಗೊಳಿಸಲಾಗುತ್ತದೆ. ಈ ಮೊತ್ತಕ್ಕೆ ಸರ್ಕಾರದ ಶೇ.10 ಹಣ ಸೇರಿಸಿ ಒಟ್ಟಾರೆ ಶೇ.20 ಮೊತ್ತ ಹಾಗೂ ಅದಕ್ಕೆ ಬರುವ ಬಡ್ಡಿಯನ್ನು ನಿವೃತ್ತಿಯ ನಂತರ ಕೊಡಲಾಗುತ್ತದೆ. ಆದರೆ, ಇನ್ನು ಮುಂದೆ ಈ ನಿಯಮ ವಜಾಗೊಳ್ಳುವ ಅಧಿಕಾರಿ ಅಥವಾ ನೌಕರರಿಗೆ ಅನ್ವಯಿಸಲ್ಲ. ಡಿಸ್ಮಿಸ್ ಆಗುವ ನೌಕರರಿಗೆ ಅವರ ವೇತನದಿಂದ ಕಡಿತ ಮಾಡುವ ಮೊತ್ತ ಹಾಗೂ ಅದರ ಬಡ್ಡಿ ಹಣವನ್ನು ಮಾತ್ರ ಕೊಟ್ಟು ಸರ್ಕಾರ ಪಾವತಿಸುವ ವಂತಿಗೆ ಮೊತ್ತ ಹಾಗೂ ಅದರ ಆದಾಯವನ್ನು ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಆರ್ಥಿಕ ಇಲಾಖೆ ಆದೇಶಿಸಿದೆ. ವಜಾಗೊಂಡ ನೌಕರರು ಮೃತಪಟ್ಟಿದ್ದಲ್ಲಿ ಅವರ ನಾಮನಿರ್ದೇಶಿತರಿಗೆ ಅಥವಾ ಕುಟುಂಬದವರಿಗೆ ನೀಡಲು ಸೂಚಿಸಿದೆ.

ಇತ್ಯರ್ಥವಾಗದ ಅರ್ಜಿಗಳು: ಎನ್​ಪಿಎಸ್ ಯೋಜನೆ ಜಾರಿ ಬಳಿಕ ವಜಾಗೊಂಡ ನೌಕರರ ಪ್ರಾನ್ ಮೊತ್ತ ಬಿಡುಗಡೆ ಸಂಬಂಧ ಗೊಂದಲ ಉಂಟಾಗಿತ್ತು. ವಜಾ ಗೊಂಡ ನೌಕರರು ಸಲ್ಲಿಸುವ ಅರ್ಜಿಗಳು ವಿಲೇವಾರಿಯಾಗದೆ ಉಳಿದಿದ್ದವು. ಇದೀಗ ನೌಕರರ ಶೇ.10 ಮಾತ್ರ ವಂತಿಗೆ ಹಣ ಬಿಡು ಗಡೆ ಮಾಡಲು ಆದೇಶಿಸಿದ್ದು, ಬಾಕಿ ಇರುವ ಅರ್ಜಿಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿ ಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ನೌಕರರ ವಿರೋಧ: ಮೂಲವೇತನದಲ್ಲಿ ಶೇ.10 ಕಡಿತಗೊಳಿಸುವ ಸರ್ಕಾರ ನಮ್ಮ ಹಣವನ್ನೇ ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತದೆ. ಇದೇ ಹಣವನ್ನು ನಾವೇ ಬೇರೆಡೆ ಹೂಡಿಕೆ ಮಾಡಿದರೆ ನೇರವಾಗಿ ನಮಗೇ ಹೆಚ್ಚಿನ ಲಾಭ ಬರುತ್ತದೆ. ನೌಕರನ ಹಣ ಬಳಸಿ ಕೊಂಡು ಅದರ ಲಾಭಾಂಶವನ್ನು ಆತನಿಗೆ ಕೊಡದಿರುವುದು ಅನ್ಯಾಯ. ಕೆಲವೊಮ್ಮೆ ಮಾಡದ ತಪ್ಪಿಗೂ ವಜಾಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ರಾನ್ ಖಾತೆಯಲ್ಲಿರುವ ಹಣವನ್ನು ಪೂರ್ಣಪ್ರಮಾಣದಲ್ಲಿ ನೌಕರ ರಿಗೇ ಕೊಡಬೇಕು ಎಂದು ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಜಾಸ್ತಿ : ಪೊಲೀಸ್ ಇಲಾಖೆಯಲ್ಲಿ ವಜಾಗೊಳ್ಳುವ ಅಧಿಕಾರಿ ಹಾಗೂ ಸಿಬ್ಬಂದಿ ಸಂಖ್ಯೆ ಹೆಚ್ಚು. ಆರ್ಥಿಕ ಇಲಾಖೆ ಸೂಚನೆ ಮೇರೆಗೆ ವಜಾಗೊಂಡವರ ಕಾಯಂ ನಿವೃತ್ತಿ ಮೊತ್ತವನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸುವಂತೆ ಡಿಜಿಪಿ ನೀಲಮಣಿ ಎನ್.ರಾಜು ಎಲ್ಲ ಘಟಕಾಧಿಕಾರಿಗಳಿಗೆ ಲಿಖಿತ ಆದೇಶ ಹೊರಡಿಸಿದ್ದಾರೆ.

ಎನ್​ಪಿಎಸ್​ಗೂ ಪ್ರತಿರೋಧ: ಕೇಂದ್ರ ಸರ್ಕಾರ 2004ರ ಜ.1ರ ನಂತರ ಹಾಗೂ ಕರ್ನಾಟಕ ಸರ್ಕಾರ 2006ರ ಏ.1 ನಂತರ ಸರ್ಕಾರಿ ಸೇವೆಗೆ ನೇಮಕವಾಗುವ ನೌಕರರಿಗೆ ನಿಶ್ಚಿತ ಪಿಂಚಣಿ ಯೋಜನೆ ರದ್ದು ಮಾಡಿ, ಎನ್​ಪಿಎಸ್ ಜಾರಿಗೆ ತಂದಿದೆ. ರಾಜ್ಯ ಸರ್ಕಾರದ ಸ್ವಾಧೀನಕ್ಕೆ ಒಳಪಡುವ ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳು, ವಿವಿಗಳು, ಅನುದಾನಿತ ಸಂಸ್ಥೆಗಳ 2.65 ಕೋಟಿ ನೌಕರರು ಎನ್​ಪಿಎಸ್ ಪದ್ಧತಿ ವ್ಯಾಪ್ತಿಗೆ ಒಳಪಡುತ್ತಾರೆ. ಈ ಹೊಸ ಯೋಜನೆ ನೌಕರರ ಇಳಿವಯಸ್ಸಿನಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಅಸ್ಥಿರಗೊಳಿಸಿದೆ. ಹೀಗಾಗಿ ಹಳೇ ನಿಶ್ಚಿತ ಪಿಂಚಣಿ ಯೋಜನೆಯೇ ಬೇಕು ಎಂಬ ಹೋರಾಟವೂ ನಡೆದಿದೆ.

ಮೃತ ನೌಕರನ ದುಡ್ಡಲ್ಲಿ ಸರ್ಕಾರ ನಡೆಸಬೇಕೆ?

ಸರ್ಕಾರಿ ನೌಕರ ಮರಣ ಹೊಂದಿ ದಲ್ಲಿ ಆತನ ಕುಟುಂಬಕ್ಕೆ ಪಿಂಚಣಿ ಕೊಡಬೇಕು ಎಂದು ಮನವಿ ಸಲ್ಲಿಸಲಾಯಿತು. ಆದರೆ, ಸರ್ಕಾರ ಪ್ರಾನ್ ಖಾತೆಯಲ್ಲಿರುವ ಹಣವನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬ ಷರತ್ತನ್ನು ವಿಧಿಸಿ ಫ್ಯಾಮಿಲಿ ಪೆನ್ಶನ್ ಕೊಡಲು ನಿರ್ಧರಿಸಿದ್ದು, ಈ ಪ್ರಸ್ತಾವನೆ ಆರ್ಥಿಕ ಇಲಾಖೆಯಲ್ಲಿದೆ. ಸರ್ಕಾರಿ ನೌಕರನ ಹಣ ವಾಪಸ್ ಪಡೆದು ಆಡಳಿತ ನಡೆಸುವ ದುಃಸ್ಥಿತಿಗೆ ಸರ್ಕಾರ ಬಂದಿದೆಯೇ ಎಂದು ಎನ್​ಪಿಎಸ್ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಉದ್ಯೋಗಿ ವಜಾ ಆಗಲಿ ಅಥವಾ ಇನ್ನಾವುದೇ ಕಾರಣಕ್ಕೆ ಸರ್ಕಾರಿ ಸೇವೆಯಿಂದ ಹೊರ ಹೋದರೆ ಆತನ ಪ್ರಾನ್ ಖಾತೆಯಲ್ಲಿರುವ ಹಣ ಸಂಪೂರ್ಣವಾಗಿ ಆತನಿಗೆ ಸೇರಿದ್ದು. ಒಮ್ಮೆ ಖಾತೆಗೆ ಹಣ ಜಮೆ ಮಾಡಿದರೆ ಮುಗಿಯಿತು. ಸರ್ಕಾರ ಆ ಹಣವನ್ನು ವಾಪಸ್ ಪಡೆಯುವುದು ಅಸಾಂವಿಧಾನಿಕ.

| ಶಾಂತಾರಾಮ ರಾಜ್ಯಾಧ್ಯಕ್ಷರು, ಸರ್ಕಾರಿ ಎನ್​ಪಿಎಸ್ ನೌಕರರ ಸಂಘ

ಗರಿಷ್ಠ ಪಿಂಚಣಿ ಪಾವತಿಗೆ ಕೆಎಸ್​ಆರ್​ಟಿಸಿ ಆದೇಶ

ಬೆಂಗಳೂರು: ಕೆಎಸ್​ಆರ್​ಟಿಸಿ ನಿವೃತ್ತ ನೌಕರರು, ಅಧಿಕಾರಿಗಳಿಗೆ ಸಿಹಿ ಸುದ್ದಿ ದೊರೆತಿದ್ದು, ಪಿಂಚಣಿ ಮೊತ್ತವನ್ನು ಶೇ. 8.33ಕ್ಕೆ ಹೆಚ್ಚಿಸಲಾಗಿದೆ. ನಿವೃತ್ತ ಅಧಿಕಾರಿಗಳು ಮತ್ತು ನೌಕರರ ವೇತನವನ್ನಾಧರಿಸಿ ಗರಿಷ್ಠ ಪಿಂಚಣಿ ಸೌಲಭ್ಯ ನೀಡುವಂತೆ ಹೈಕೋರ್ಟ್ ಆದೇಶದ ಮೇರೆಗೆ ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಪಿಂಚಣಿ ಹೆಚ್ಚಿಸಿದ್ದಾರೆ.

ಶೇ. 8.33 ಹೆಚ್ಚಳ: ನೂತನ ಆದೇಶದಂತೆ ಒಟ್ಟು ವೇತನದ ಮೇಲೆ ಶೇ. 8.33 ದರದಲ್ಲಿ ಪಿಂಚಣಿ ವಂತಿಗೆ ಪಾವತಿಸುವಂತೆ ಎಲ್ಲ ವಿಭಾಗದ ಮುಖ್ಯ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೌಕರರ ಪಿಂಚಣಿ ಯೋಜನೆ 1995ರ ಅನ್ವಯ ಶೇ. 8.33 ಪಿಂಚಣಿ ವಂತಿಕೆಯನ್ನು ಪ್ರತಿ ತಿಂಗಳು ಆರ್​ಪಿಎಫ್​ಸಿ ಕಚೇರಿಗೆ ಜಮಾ ಮಾಡುವಂತೆಯೂ ತಿಳಿಸಲಾಗಿದೆ. ಇದರಿಂದ ಈವರೆಗೆ 1 ಸಾವಿರ ರೂ. ನಿಂದ 2 ಸಾವಿರ ರೂ.ವರೆಗೆ ಬರುತ್ತಿದ್ದ ಪಿಂಚಣಿ ಇನ್ನು ಮುಂದೆ 6 ಸಾವಿರ ರೂ.ವರೆಗೆ ಬರಲಿದೆ.

ಗರಿಷ್ಠ ವೇತನ ಮಿತಿ ಆಧಾರದಲ್ಲಿ ಪಿಂಚಣಿ: 1995ರಲ್ಲಿ ಗರಿಷ್ಠ ವೇತನ ಮಿತಿ 5 ಸಾವಿರ ರೂ. ಮತ್ತು 2001ರ ನಂತರ 6,500 ರೂ. ನಿಗದಿ ಮಾಡಲಾಗಿತ್ತು. ಇದೀಗ 2014 ಸೆಪ್ಟೆಂಬರ್ನಿಂದೀಚೆಗೆ ಗರಿಷ್ಠ ವೇತನ ಮಿತಿಯನ್ನು 15 ಸಾವಿರಕ್ಕೆ ನಿಗದಿ ಮಾಡಲಾಗಿದೆ. ಅಷ್ಟು ಮೊತ್ತದಲ್ಲಿ ಶೇ. 8.33 ಗರಿಷ್ಠ ಪಿಂಚಣಿ ವಂತಿಗೆ ಅಂದರೆ 1,250 ರೂ.ಗಳನ್ನು ನಿಗದಿ ಮಾಡಲಾಗಿದೆ.
ಕೃಪೆ:ವಿಜಯವಾಣಿ

ಡಿಸ್ಮಿಸ್ ಆದವರಿಗೆ ನಿವೃತ್ತಿ ಹಣ ಕಟ್: ನೌಕರರ ವಂತಿಗೆ ಮಾತ್ರ ಪಾವತಿ, ಸರ್ಕಾರದ ಪಾಲು ಇಲ್ಲ
govt-officers-suspend-dismiss-pension-state-govt/