ಫೆಬ್ರಿನ್ ರೋಗ ಕಡಿವಾಣಕ್ಕೆ ಕೋವಿಡ್ ನಿಯಂತ್ರಣ ಮಾದರಿ ಅನುಸರಿಸಿ- ಸಚಿವ ಡಾ.ನಾರಾಯಣಗೌಡ ಸೂಚನೆ.

ಬೆಂಗಳೂರು, ಮೇ.17,2022(www.justkannada.in):  ಫೆಬ್ರಿನ್ ರೋಗ ನಿಯಂತ್ರಣಕ್ಕೆ  ಕೋವಿಡ್ ನಿಯಂತ್ರಣ ಮಾದರಿ ಅನುಸರಿಸುವಂತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರೇಷ್ಮೆ ಬೆಳೆಗೆ ಅಲ್ಲಲ್ಲಿ ಫೆಬ್ರಿನ್ ರೋಗ ಕಾಣಿಸಿಕೊಳ್ಳುತ್ತಿದ್ದು ಸಂಪೂರ್ಣ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ವಿಕಾಸಸೌಧದಲ್ಲಿ ಇಂದು ಸಚಿವ ಡಾ.ನಾರಾಯಣಗೌಡ ಅವರ ನೇತೃತ್ವದಲ್ಲಿ ಅಧಿಕಾರಿಗಳು, ತಜ್ಞರು ಹಾಗೂ ರೇಷ್ಮೆ ಬೆಳೆಗಾರರ ಸಭೆ ನಡೆಯಿತು.

ಫೆಬ್ರಿನ್ ರೋಗ ರೇಷ್ಮೆಗೆ ಮಾರಕವಾಗಿದ್ದು ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ‌. ಹಾಗಾಗಿ, ಫೆಬ್ರಿನ್ ರೋಗವನ್ನು ಆರಂಭದಿಂದಲೇ ಕಡಿವಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವ ಡಾ.ನಾರಾಯಣಗೌಡ ಅವರು ಸೂಚಿಸಿದರು.

ಫೆಬ್ರಿನ್ ರೋಗವನ್ನು ನಿಯಂತ್ರಣಕ್ಕೆ ಕೋವಿಡ್ ನಿಯಂತ್ರಣ ಮಾದರಿಯನ್ನೇ ಅನುಸರಿಸಬೇಕು. 2 T 1D ( Tracking, Traceing, Destruction) ಮೂಲಕವೇ ಫೆಬ್ರಿನ್ ರೋಗವನ್ನು ನಿಯಂತ್ರಿಸಬಹುದು ಎಂದು ತಜ್ಞರು ಸಲಹೆ ನೀಡಿದರು. ತಜ್ಞರ ಅಭಿಪ್ರಾಯದಂತೆಯೇ ಬಿತ್ತನೆ ಗೂಡಿನಿಂದಲೂ ಗುಣಮಟ್ಟ ಕಾಯ್ದಕೊಂಡು ಫೆಬ್ರಿನ್ ರೋಗ ಹರಡದಂತೆ ಎಚ್ಚರಿಕೆವಹಿಸಬೇಕು. 1200 ಹೆಕ್ಟೇರ್ ಬಿತ್ತನೆಯ ವಲಯವಿದ್ದು ಸಂಪೂರ್ಣ ಪರೀಕ್ಷೆಗೆ ನಡೆಸಬೇಕು.ಅಗತ್ಯಬಿದ್ದರೇ 200 ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಫಾನ್ಸ್‌ನಲ್ಲಿ ಫೆಬ್ರಿನ್ ರೋಗ ಕಾಣಿಸಿಕೊಂಡು ಸಂಪೂರ್ಣವಾಗಿ ರೇಷ್ಮೆ ಹಾಳಾಯಿತು. ಹಾಗಾಗಿ, ನಮ್ಮಲ್ಲಿ ಆ ರೀತಿ ಆಗುವ ಪರಿಸ್ಥಿತಿ ನಿರ್ಮಾಣ ಆಗಬಾರದು. ಹಾಗಾಗಿ, ಆರಂಭದಿಂದಲೇ ಫೆಬ್ರಿನ್ ರೋಗ ನಿಯಂತ್ರಿಸಲು ಎಚ್ಚರಿಕೆಯಿಂದ ಕ್ರಮವಹಿಸಬೇಕು. ಜೊತೆಗೆ ವಿಜ್ಞಾನಿಗಳು, ಅಧಿಕಾರಿಗಳು ಹಾಗೂ ರೇಷ್ಮೆ ಬೆಳೆಗಾರರನ್ನೊಳಗೊಂಡ ತಜ್ಞರ ಸಮಿತಿ ರಚಿಸುವಂತೆ  ಎಂದು ಅಧಿಕಾರಿಗಳಿಗೆ ಸಚಿವ ಡಾ.ನಾರಾಯಣಗೌಡ ಅವರು ಸೂಚಿಸಿದರು.

ಸಭೆಯಲ್ಲಿ ಕೆಎಸ್‌ಎಂಬಿ ಅಧ್ಯಕ್ಷರಾದ ಸವಿತಾ ಅಮರಶೆಟ್ಟಿ, ರೇಷ್ಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ರೇಷ್ಮೆ ಇಲಾಖೆ ಆಯುಕ್ತೆ ಸಿಂಧು ರೂಪೇಶ್, ಕೆಎಸ್‌ಎಂಬಿ ಎಂಡಿ ಅನುರಾಧ ಸೇರಿದಂತೆ ರೇಷ್ಮೆ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ರೇಷ್ಮೆ ಬೆಳೆಗಾರರು ಪಾಲ್ಗೊಂಡಿದ್ದರು.

Key words: Follow –covid-control – fibrin -disease –reduction-Minister- Dr. Narayana Gowda