ಪ್ರಾಥಮಿಕ-ಪ್ರೌಢ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ನೇಮಕ ಮಾಡಿ, ಕನಿಷ್ಠ ಒಂದು ಗಂಟೆ ಕ್ರೀಡೆಗೆ ಮೀಸಲಿಡಿ- ಕ್ರೀಡಾ ಸಚಿವ ಡಾ. ನಾರಾಯಣಗೌಡ ಮನವಿ.

ಬೆಂಗಳೂರು, ಆ. 14, 2021 : (www.justkannada.in news) ಕಳೆದ ಓಲಂಪಿಕ್ ಕ್ರೀಡಾಕೂಟದಲ್ಲಿ ನಮ್ಮ ದೇಶ ಉತ್ತಮ ಸಾಧನೆ ಮಾಡಿದೆ. ಇನ್ನೂ ಹೆಚ್ಚಿನ ಸಾಧನೆ ಆಗಬೇಕೆಂದರೆ ಈಗಲೇ ಸಿದ್ದತೆ ಮಾಡಬೇಕು. ಬಾಲ್ಯದಲ್ಲಿಯೇ ಕ್ರೀಡೆಯಲ್ಲಿ ಆಸಕ್ತಿ ಮೂಡುವಂತಾಗಬೇಕು. ಸೂಕ್ತ ತರಬೇತಿಯೂ ಸಿಗಬೇಕು. ಆಗ ಮಾತ್ರ ಕ್ರೀಡೆಯಲ್ಲಿ ಸಾಧನೆ ಸಾಧ್ಯ. ಅದಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಅವಕಾಶ ನೀಡಬೇಕು. ಖಾಲಿ ಇರುವ ದೈಹಿಕ ಶಿಕ್ಷಕರ ಹುದ್ದೆ ಭರ್ತಿಯಾಗಬೇಕು. ಶಾಲೆಯಲ್ಲಿ ಪ್ರತಿ ನಿತ್ಯ ವ್ಯಾಯಾಮ, ಕ್ರೀಡೆಗೆ ಒಂದು ಗಂಟೆ ಸಮಯ ಮೀಸಲಿಡಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.

ವಿದ್ಯಾರ್ಥಿ ದೆಸೆಯಲ್ಲೇ ಕ್ರೀಡೆಯ ತರಬೇತಿ ಆಗಬೇಕು. ಆಸಕ್ತಿ ಇರುವ ಸಮರ್ಥ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಮುಂದುವರೆಯುತ್ತಾರೆ. ಕ್ರೀಡಾಂಗಣ, ಕ್ರೀಡಾ ಸೌಲಭ್ಯ ಇದ್ದ ಮಾತ್ರಕ್ಕೆ ಸಾಧನೆ ಆಗಲಾರದು. ಬುನಾದಿ ಸರಿಯಾಗಿರಬೇಕು. ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಂತದಲ್ಲೇ ವ್ಯಾಯಾಮ, ಕ್ರೀಡೆ ಬಗ್ಗೆ ಸೂಕ್ತ ತರಬೇತಿ ನೀಡುವ ಪ್ರಕ್ರಿಯೆ ಆರಂಭವಾಗಬೇಕು. ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ 39,308 ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇದೆ. ಇದು ಬೆಳೆವ ಸಿರಿಯನ್ನು ಮೊಳಕೆಯಲ್ಲೇ ಚಿವುಟಿದಂತೆ ಆಗುತ್ತಿದೆ. ಮುಂದಿನ ಓಲಂಪಿಕ್ ಗೆ ನಮ್ಮ ರಾಜ್ಯದಿಂದ 100 ಕ್ರೀಡಾಪಟುಗಳನ್ನು ಕಳುಹಿಸುವ ಗುರಿ ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರೀಡಾಪಟುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಬೇಕೆಂದರೆ ಈಗಿನಿಂದಲೇ ಸಿದ್ದತೆ ಆಗಬೇಕು. ದೈಹಿಕ ಶಿಕ್ಷಕರ ನೇಮಕವಾಗಬೇಕು. ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಇದು ಸಹಕಾರಿಯಾಗುತ್ತದೆ. ಶಿಕ್ಷಣ ಸಚಿವರು ಕಡ್ಡಾಯವಾಗಿ ದೈಹಿಕ ಶಿಕ್ಷಕರ ನೇಮಕಕ್ಕೆ ಕ್ರಮ ತೆಗೆದುಕೊಳ್ಳಿ ಎಂದು ಸಚಿವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಹಿಂದೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರತಿನಿತ್ಯ ಒಂದು ಗಂಟೆ ಅವಧಿ ವಿದ್ಯಾರ್ಥಿಗಳ ದೈಹಿಕ ಶಿಕ್ಷಣಕ್ಕಾಗಿ ಮೀಸಲಿಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಪದ್ಧತಿಯನ್ನು ಕೈಬಿಟ್ಟಿರುವುದು, ಕ್ರಮೇಣವಾಗಿ ಕಡಿಮೆ ಮಾಡುತ್ತಿರುವುದು ವಿಷಾದದ ಸಂಗತಿ. ವಿದ್ಯಾರ್ಥಿಗಳ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಸಹ ಮುಖ್ಯವಾಗಿರುವುದರಿಂದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರತಿನಿತ್ಯ ಒಂದು ಗಂಟೆ ಅವಧಿಯನ್ನು ದೈಹಿಕ ಶಿಕ್ಷಣಕ್ಕಾಗಿ ಮೀಸಲಿಡುವುದು ಅತ್ಯವಶ್ಯಕವಾಗಿದೆ. ಇದನ್ನು ಹೊಸ ಶಿಕ್ಷಣ ನೀತಿಯಲ್ಲೂ ಸಹ ಉಲ್ಲೇಖಿಸಲಾಗಿದೆ.

ಆದುದರಿಂದ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಪ್ರತಿನಿತ್ಯ ಕನಿಷ್ಠ ಒಂದು ಗಂಟೆ ಅವಧಿಯನ್ನು ವಿದ್ಯಾರ್ಥಿಗಳ ದೈಹಿಕ ಶಿಕ್ಷಣಕ್ಕಾಗಿ ಮೀಸಲಿಡುವಂತೆ ಸೂಚಿಸುವಂತೆ ಶಿಕ್ಷಣ ಸಚಿವರಿಗೆ ಕ್ರೀಡಾ ಸಚಿವ ಡಾ. ನಾರಾಯಣಗೌಡ ಪತ್ರ ಬರೆದು ಮನವಿ ಮಾಡಿದ್ದಾರೆ.

key words : Karnataka-education-physical-education-compulsory-narayanagowda-letter