ಸರೋಜಿನಿ ಮಹಿಷಿ ವರದಿ  ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್: ಕರವೇ ಪ್ರವೀಣ್ ಶೆಟ್ಟಿಗೆ ಗೃಹ ಬಂಧನ: ಬಸ್ ತಡೆದು ಪ್ರತಿಭಟನೆಗೆ ಯತ್ನ…

ಬೆಂಗಳೂರು,ಫೆ,13,2020(www.justkannada.in):  ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಇಂದು ವಿವಿಧ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಬಂದ್ ಗೆ ಬೆಂಬಲ ನೀಡಿದ್ದ ಕರವೇ ಪ್ರವೀಣ್ ಶೆಟ್ಟಿ ಅವರನ್ನ ಪೊಲೀಸರು ಗೃಹಬಂಧನದಲ್ಲಿರಿಸಿದ್ದಾರೆ.

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ವಿವಿಧ ಸಂಘಟನೆ ಕಾರ್ಯಕರ್ತರು ರ್ಯಾಲಿ ನಡೆಸಲಿದ್ದಾರೆ. ಹೀಗಾಗಿ ಸಂಗೊಳ್ಳಿ ರಾಯಣ್ಣ  ರೈಲ್ವೆ ನಿಲ್ದಾಣದ ಬಳಿ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 400ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ.

ಬಂದ್ ಗೆ ಬೆಂಬಲ ನೀಡಿದ ಹಿನ್ನೆಲೆ ಕರವೇ ಪ್ರವೀಣ್ ಶೆಟ್ಟಿ ಅವರನ್ನ ಅವರ ಆರ್ ಟಿ ನಗರದ ನಿವಾಸದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಗೃಹಬಂಧನಕ್ಕೆ ಇರಿಸಲಾಗಿದೆ. ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಬಸ್ ತಡೆದು ಪ್ರತಿಭಟನೆಗೆ ಮುಂದಾಗಿದ್ದು ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನ ತಡೆದಿದ್ದಾರೆ. ಈ ಸಮಯದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ.

ಇನ್ನೊಂದೆಡೆ ಬಿಎಂಟಿಸಿ ಚಾಲಕರು ಕರ್ತವ್ಯಕ್ಕೆ ಹಾಜರಾದ ಹಿನ್ನೆಲೆ ಕೆಲ ಕನ್ನಡ ಪರ ಸಂಘಟನೆಗಳು ಚಾಲಕರಿಗೆ ಗುಲಾಬಿ ಹೂ ನೀಡಿ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ ಬಂದ್ ಬೇಡ ಎಂದು ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ.

Key words: Karnataka bandh -demanding -implementation – Sarojini Mahshi report-  protest