ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿದ ಕೋವಿಡ್ ಪ್ರಕರಣಗಳು.

ಬೆಂಗಳೂರು, ಜುಲೈ 22, 2022 (www.justkannada.in): ಈ ಅಂಕಿ-ಅಂಶಗಳನ್ನು ಎರಡು ವರ್ಷಗಳಲ್ಲಿ ಹಲವು ಬಾರಿ ನಾವೆಲ್ಲರೂ ಗಮನಿಸಿದ್ದೇವೆ, ಮತ್ತು ಪ್ರತಿಯೊಬ್ಬ ಬೆಂಗಳೂರಿಗರೂ ಇದನ್ನು ದ್ವೇಷಿಸುವ ಅಂಕಿ-ಅಂಶಗಳಾಗಿವೆ. ಬೆಂಗಳೂರು ನಗರದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆದರೆ ರೋಗಲಕ್ಷಣಗಳು ಬಹಳ ಗಂಭೀರವಾಗಿಲ್ಲ. ಹಾಗಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಬಹಳ ಕಡಿಮೆ ಇದೆ ಎನ್ನುವುದೊಂದು ಸಮಾಧಾನಕರ ಸಂಗತಿಯಾಗಿದೆ.

ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ೭,೦೬೪ ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ಚೆನ್ನೈನಲ್ಲಿ (೫,೭೫೯), ಮುಂಬೈ (೨,೦೯೩), ನವದೆಹಲಿಯಲ್ಲಿ (೨೦೪೦) ಮತ್ತು ಕೋಲ್ಕತ್ತಾದಲ್ಲಿ (೨೭೨) ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು ನಗರದಲ್ಲಿ ಕಳೆದ ಒಂದು ವಾರದಿಂದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರವಾಗಿ ಹೆಚ್ಚಳ ಕಂಡು ಬಂದಿದೆ. ಜುಲೈ ೧೬ರಂದು ೬,೭೦೪ ಸಕ್ರಿಯ ಪ್ರಕರಣಗಳು ದಾಖಲಾಗುವುದರೊಂದಿಗೆ ಬೆಂಗಳೂರು ನಗರ ದೇಶದ ಇತರೆ ಮಹಾನಗರಗಳ (ಮೆಟ್ರೊ ನಗರಗಳು) ಪೈಕಿ ಮೊದಲ ಸ್ಥಾನಕ್ಕೆ ಏರಿತು. ಚೆನ್ನೈ (೬,೦೯೦), ಮುಂಬೈ (೨,೬೪೦), ನವ ದೆಹಲಿ (೨,೦೧೦) ಹಾಗೂ ಕೋಲ್ಕತ್ತಾ (೨೭೨) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

ಬಿಬಿಎಂಪಿಯ ವಿಶೇಷ ಆಯುಕ್ತ (ಆರೋಗ್ಯ) ಕೆ.ವಿ. ತ್ರಿಲೋಕ್ ಚಂದ್ರ ಅವರ ಪ್ರಕಾರ ಆತಂಕ ಪಡಬೇಕಾದ ಅಗತ್ಯವಿಲ್ಲ. ಡಿಸ್ಚಾರ್ಜ್ ಪ್ರಕರಣಗಳ ಬ್ಯಾಕ್‌ ಲಾಗ್‌ನಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆಯ ಹೆಚ್ಚಳವಾಗಿದೆ ಎಂದಿದ್ದಾರೆ.

“ನಮ್ಮಲ್ಲಿ ಪ್ರಸ್ತುತ ೭,೦೦೦ ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ೯೦೦ ಪ್ರಕರಣಗಳು ಡಿಸ್ಚಾರ್ಜ್  ಬಾಕಿ ಇವೆ. ಇವರನ್ನು ಇನ್ನು ಕೆಲವು ದಿನಗಳೊಳಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು. ಒಂದು ಬಾರಿ ಈ ಸಂಖ್ಯೆ ಕಡಿತಗೊಳಿಸಿದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ ೬,೦೦೦ಕ್ಕೆ ಇಳಿಯುತ್ತದೆ. ಆಗ ಚೆನ್ನೈನಷ್ಟೇ ಇರುತ್ತದೆ. ಪ್ರತಿ ದಿನ ಇಲ್ಲಿ ಸರಾಸರಿ ೧,೦೦೦ ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಇತರೆ ನಗರಗಳಲ್ಲಿ ಕಂಡು ಬಂದಿರುವುದಕ್ಕಿಂತ ಇದು ಸ್ವಲ್ಪ ಹೆಚ್ಚಾಗಿದೆ,” ಎಂದು ವಿವರಿಸಿದರು.

ಕೋವಿಡ್ ಪ್ರಕರಣಗಳ ಸಂಖ್ಯೆ ನಗರದಲ್ಲಿ ಹೆಚ್ಚಾಗಿದ್ದರೂ ಸಹ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಇಳಿಮುಖವಾಗಿದೆ. ಜುಲೈ ೧೫ರಂದು ೫೮ ಸೋಂಕಿತರು ಆಸ್ಪತ್ರೆಗೆ ದಾಖಲಾದರು. ಆದರೆ ಬುಧವಾರದಂದು ಕೇವಲ ೧೭ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗ ಹೆಚ್ಚಾಗುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಹೊಸ ಓಮೈಕ್ರಾನ್ ಉಪತಳಿ ಇರಬಹುದೆಂದು ಅಂದಾಜಿಸಲಾಗಿದೆ. ಆಸ್ಪತ್ರೆಗಳ ಮಾಹಿತಿಯ ಪ್ರಕಾರ ಬಹುಪಾಲು ಸೋಂಕಿತರಿಗೆ ರೋಗಲಕ್ಷಣದ ಸೌಮ್ಯ ಲಕ್ಷಣಗಳಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.

“ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗಿಲ್ಲ. ಆದರೆ ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಬಹುಪಾಲು ರೋಗಿಗಳಲ್ಲಿ ಫ್ಲೂ ರೋಗಲಕ್ಷಣಗಳು ಕಂಡು ಬಂದಿದ್ದು, ಕೆಲವು ಕೋವಿಡ್ ಪಾಸಿಟಿವ್ ಪ್ರಕರಣಗಳೂ ಇವೆ. ಆದರೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಈಗ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ರೋಗಲಕ್ಷಣಗಳು ಸೌಮ್ಯವಾಗಿದ್ದು, ಬಹುಪಾಲು ವೈದ್ಯರ ಸಮಾಲೋಚನೆಗಳು ಆನ್‌ ಲೈನ್‌ನಲ್ಲೇ ನಡೆಯುತ್ತಿವೆ. ಆದರೆ ನಾವು ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕಾದ ಅಗತ್ಯವಿದೆ,” ಎನ್ನುವುದು ನಗರದ ಖಾಸಗಿ ಆಸ್ಪತ್ರೆಯ ಆರೋಗ್ಯಸೇವಾ ತಜ್ಞರೊಬ್ಬರ ಸಲಹೆಯಾಗಿದೆ.

ತ್ರಿಲೋಕ್ ಚಂದ್ರ ಅವರು ತಿಳಿಸಿರುವ ಪ್ರಕಾರ ಬಹಳ ಕಡಿಮೆ ಸಂಖ್ಯೆಯ ಪ್ರಕರಣಗಳಿಗೆ ಮಾತ್ರ ಆಸ್ಪತ್ರೆಗೆ ದಾಖಲಾಗಬೇಕಾಗುವ ಪ್ರಮೇಯ ಎದುರಾಗಿದ್ದು, ಅವರೂ ಸಹ ಆಸ್ಪತ್ರೆಗಳಲ್ಲಿ ಜನರಲ್ ವಾರ್ಡ್ ಗಳಲ್ಲಿದ್ದಾರೆ. ಐಸಿಯುದಲ್ಲಿರುವ ಸೋಂಕಿತರ ಪೈಕಿ ಬಹುಪಾಲು ಸೋಂಕಿತರು ಇತರೆ ಖಾಯಿಲೆಗಳಿಂದಾಗಿ ದಾಖಲಾಗಿದ್ದು, ನಂತರದಲ್ಲಿ ಅವರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Increased – Covid- cases – Bengaluru.