ದೇಶದ ಮೊಟ್ಟಮೊದಲ ಡಿಜಿಟಲ್ ವಾಟರ್ ಬ್ಯಾಂಕ್ `ಅಕ್ವೇರಿಯಂ’ ಉದ್ಘಾಟನೆ

ಬೆಂಗಳೂರು,ಮಾರ್ಚ್,14,2022(www.justkannada.in):  ಜಲ ಸಂರಕ್ಷಣೆ, ನೈರ್ಮಲ್ಯ, ಜಲಭೂಗರ್ಭ ವಿಜ್ಞಾನ ಮತ್ತು ಡೇಟಾ ವಿಜ್ಞಾನಗಳಲ್ಲಿ 10 ಲಕ್ಷ ಯುವಜನರಿಗೆ ತರಬೇತಿ ನೀಡುವ ಗುರಿ ಹೊಂದಿರುವ ದೇಶದ ಮೊಟ್ಟಮೊದಲ ಡಿಜಿಟಲ್ ವಾಟರ್ ಬ್ಯಾಂಕ್ ಆದ `ಅಕ್ವೇರಿಯಂ’ ನವೋದ್ಯಮಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಅವರು ಸೋಮವಾರ ಚಾಲನೆ ನೀಡಿದರು.

ಈ ಸಂಬಂಧ ನಗರದ ಖಾಸಗಿ ಹೋಟೆಲೊಂದರಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `5 ಟ್ರಿಲಿಯನ್ ಡಾಲರ್  ಆರ್ಥಿಕಶಕ್ತಿಯ ಆತ್ಮನಿರ್ಭರ ಭಾರತವನ್ನು ಕಟ್ಟುವಲ್ಲಿ ಶುದ್ಧನೀರು ಮತ್ತು ಜಲಭದ್ರತೆ ಎರಡೂ ಪ್ರಮುಖ ಪಾತ್ರ ವಹಿಸಲಿವೆ. 2030ರ ಹೊತ್ತಿಗೆ ದೇಶದಲ್ಲಿ ನೀರಿನ ಸಂರಕ್ಷಣೆ ಮತ್ತು ವೈಜ್ಞಾನಿಕ ಬಳಕೆಯಲ್ಲಿ ತೊಡಗಿಕೊಂಡಿರುವ ಜಲೋದ್ಯಮಿಗಳನ್ನು ಸೃಷ್ಟಿಸಬೇಕಾದ ಜರೂರಿದೆ’ ಎಂದರು.

`ಅಕ್ವೇರಿಯಂ ನವೋದ್ಯಮವು ಬೆಂಗಳೂರಿನಲ್ಲೇ ತನ್ನ ಕೇಂದ್ರ ಕಚೇರಿ ಹೊಂದಿರುವುದು ರಾಜ್ಯಕ್ಕೊಂದು ಹೆಗ್ಗಳಿಕೆಯಾಗಿದೆ. ಸದ್ಯಕ್ಕೆ ಭಾರತದ ನೀರು ಮತ್ತು ನೈರ್ಮಲ್ಯ ಮಾರುಕಟ್ಟೆಯು 297 ಶತಕೋಟಿ ಡಾಲರುಗಳಷ್ಟು ಮೌಲ್ಯವನ್ನು ಹೊಂದಿದೆ. ಆದರೆ ತುಂಬಾ ಅಸಂಘಟಿತವಾಗಿರುವ ಈ ವಲಯದಲ್ಲಿ ಸಮಗ್ರ ದೃಷ್ಟಿಕೋನವನ್ನು ರೂಪಿಸುವ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸಿದರು.

ಇದು ಪರಿಸರಸ್ನೇಹಿ ತಂತ್ರಜ್ಞಾನದ ಬಳಕೆಯ ಮೂಲಕ ಸುಸ್ಥಿರ ಅಭಿವೃದ್ಧಿಗೆ ಕಾಣಿಕೆ ನೀಡಲಿದೆ. ಇದರ ಜತೆಗೆ ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ತರಬೇತಿ ಮತ್ತು ಉದ್ಯಮಶೀಲತೆಗಳು ಇದರಲ್ಲಿ ಮೇಳೈಸಿಕೊಂಡಿವೆ ಎಂದು ಅವರು ಹೇಳಿದರು.

ಕಂಪನಿಯ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಕುಣಸೂರು ಮಾತನಾಡಿ, `ದೇಶದಲ್ಲಿ ಲಭ್ಯವಿರುವ ಒಟ್ಟು ಶುದ್ಧನೀರಿನಲ್ಲಿ ಶೇ.80ರಷ್ಟನ್ನು ಕೃಷಿ ವಲಯವು ಬಳಸುತ್ತಿದೆ. ನಮ್ಮ ಕಂಪನಿಯು ನಿಖರ ಹವಾಮಾನ ವರದಿ, ಜಲಕೋಷ್ಟಕ, ಜಲ ಮರುಪೂರಣ ಮತ್ತು ಅಂತರ್ಜಲ ಸಂರಕ್ಷಣೆ ಬಗ್ಗೆ ರೈತರಿಗೆ ಮಾಹಿತಿ ನೀಡಲಿದ್ದು, ಅವರ ಸಬಲೀಕರಣವನ್ನು ಸುಲಭವಾಗಿಸಲಿದೆ’ ಎಂದರು.

ಅಕ್ವೇರಿಯಂ ನವೋದ್ಯಮವು ದೇಶದ ಒಂಬತ್ತು ರಾಜ್ಯಗಳಲ್ಲಿ ಸಕ್ರಿಯವಾಗಿದ್ದು, ಕಳೆದ 12 ವರ್ಷಗಳಿಂದ ಜಲಸಂರಕ್ಷಣೆ ಮತ್ತು ಅದಕ್ಕೆ ಸಂಬಂಧಿಸಿದ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಕಂಪನಿಯ ಸಹಸಂಸ್ಥಾಪಕ ವಿನಯ್ ರಾವ್, ಆಕ್ವಾಕ್ರಾಫ್ಟ್ ಗ್ರೂಪ್ ವೆಂಚರ್ಸ್ ನಿರ್ದೇಶಕ ಸಿ.ಶ್ರೀಧರ್ ಉಪಸ್ಥಿತರಿದ್ದರು.

Key words: inauguration-first digital -water bank -aquarium