ರಾಜ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಮಳೆ ಹಿನ್ನೆಲೆ: ಶಾಲೆಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ  ಕ್ರಮ ಕೈಗೊಳ್ಳುವಂತೆ ಸರ್ಕಾರ ಸುತ್ತೋಲೆ.

ಬೆಂಗಳೂರು,ಮೇ,19,2022(www.justkannada.in): ರಾಜ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲೆಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ರಾಜ್ಯಾದ್ಯಂತ ಮೇ 16ರಿಂದ 2022-23ನೇ ಶೈಕ್ಷಣಿಕ ವರ್ಷದ ಶಾಲೆಗಳು ಪ್ರಾರಂಭವಾಗಿದೆ. ಆದರೆ, ರಾಜ್ಯದ ಬಹುತೇಕ ಕಡೆಗಳಲ್ಲಿ ತೀವ್ರವಾಗಿ ಮಳೆಯುಂಟಾಗುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶೈಕ್ಷಣಿಕ ಉಸ್ತುವಾರಿ ಅಧಿಕಾರಿ .  ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.

ಸರ್ಕಾರ ಸೂಚಿಸಿರುವ ಮುನ್ನೆಚ್ಚರಿಕಾ ಕ್ರಮಗಳು ಈ ಕೆಳಕಂಡಂತಿವೆ..

ತೀವ್ರ ಮಳೆಯಿಂದಾಗಿ ಶಿಥಿಲಾವಸ್ಥೆಯಲ್ಲಿರುವ ಕೆಲವು “ಶಾಲಾ ಕಟ್ಟಡಗಳು ಯಾವುದೇ ಸಂದರ್ಭದಲ್ಲಿ ಹಾನಿಗೊಳಗಾಗುವ, ಬಿದ್ದು ಹೋಗುವ ಸಂಭವವಿರುತ್ತದೆ. ಪ್ರಯುಕ್ತ, ಅಂತಹ ಶಾಲಾ ಕಟ್ಟಡಗಳನ್ನು , ತರಗತಿಯ ಕೊಠಡಿ ,ಶೌಚಾಲಯಗಳನ್ನು ಬಳಸದೇ, ಸಮೀಪದ ಸುಸ್ಥಿತಿಯಲ್ಲಿರುವ ಕಟ್ಟಡ , ಕೊಠಡಿಗಳನ್ನು , ಶೌಚಾಲಯಗಳನ್ನು ಗುರುತಿಸಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಹಾಗೂ ಮಕ್ಕಳು ಇಂತಹ ಕಟ್ಟಡ, ಕೊಠಡಿಗಳ ಮತ್ತು ಶೌಚಾಲಯಗಳ ಸಮೀಪದಲ್ಲಿ ಸುತ್ತಾಡದಂತೆ ಎಚ್ಚರಿಕೆ ಕ್ರಮ ವಹಿಸುವುದು. ಶಿಥಿಲಾವಸ್ಥೆಯಲ್ಲಿರುವ ಇಂತಹ ಕಟ್ಟಡಗಳ ತೀವ್ರತೆಯನ್ನು ಪರಿಗಣಿಸಿ ತೆರವುಗೊಳಿಸಲು ಅಥವಾ ನೆಲಸಮಗೊಳಿಸಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕು.

ಮಳೆಯಿಂದಾಗಿ ಮಕ್ಕಳಿಗೆ ಕೆಮ್ಮು, ನೆಗಡಿ, ಜ್ವರ ಹಾಗೂ ಇನ್ನಿತರೆ ಲಕ್ಷಣಗಳು ಕಂಡು ಬಂದಲ್ಲಿ ಕೋವಿಡ್-19ರ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸೂಚಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ (Standard Operating Procedure) ಯಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.

ಕೆಲವೆಡೆ ತೀವ್ರ ಮಳೆಯಿಂದಾಗಿ ಪ್ರವಾಹ ಅಥವಾ ನೆರೆ ಬಂದು ವಿದ್ಯಾರ್ಥಿಗಳು ಶಾಲೆಗಳಿಗೆ ಬಂದು ಹೋಗಲು ತೊಂದರೆಯುಂಟಾಗುವ ಅಥವಾ ಕೆಲವು ಸಂದರ್ಭಗಳಲ್ಲಿ ಮಳೆಯಿಂದಾಗಿ ಶಾಲೆಗಳ ಕೊಠಡಿಗಳಲ್ಲಿ , ಆವರಣದೊಳಗೆ ನೀರು ಸಂಗ್ರಹವಾಗುವ ಸಂಭವವಿರುತ್ತದೆ.covid-dead-body-cancels-license-order-state-government

ಇಂತಹ ಸಂದರ್ಭಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ , ಪುರ ಸಭೆ , ನಗರ ಸಭೆ , ಮಹಾನಗರ ಪಾಲಿಕೆಗಳ (ಸ್ಥಳೀಯ ಸಂಸ್ಥೆಗಳ) ಸಹಕಾರದಿಂದ ಶಾಲಾ ಕಟ್ಟಡದಲ್ಲಿ ಸಂಗ್ರಹವಾಗಿರುವ ನೀರನ್ನು ತೆರವುಗೊಳಿಸುವುದು ಹಾಗೂ ಅಗತ್ಯಾನುಸಾರ ಸಂದರ್ಭಾನುಸಾರ ಮುಖ್ಯೋಪಾಧ್ಯಾಯರು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಜಿಲ್ಲಾ ಉಪನಿರ್ದೇಶಕರುಗಳ ಪೂರ್ವಾನುಮತಿ ಪಡೆದು ಶಾಲೆಗಳಿಗೆ ರಜೆಯನ್ನು ಘೋಷಿಸುವುದು. ಅಂತಹ ರಜಾ ದಿನಗಳಲ್ಲಿನ ಪಾಠ-ಪ್ರವಚನಗಳನ್ನು ಮುಂದಿನ ಸರ್ಕಾರಿ ರಜಾ ದಿನಗಳಲ್ಲಿ ಸರಿದೂಗಿಸುವಂತೆ ಸೂಚಿಸಿದೆ.

ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಕಟ್ಟನಿಟ್ಟಾಗಿ ಪಾಲಿಸಬೇಕು ಹಾಗೂ ಅಗತ್ಯವಿದ್ದಲ್ಲಿ ಸ್ಥಳೀಯ ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳ ಮತ್ತು ತಾಲ್ಲೂಕು. ಜಿಲ್ಲಾಡಳಿತಗಳ ಸಹಕಾರದೊಂದಿಗೆ ಅಗತ್ಯ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳುವುದು, ಮಳೆಯಿಂದ ಯಾವುದೇ ವಿದ್ಯಾರ್ಥಿ, ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ , ಶಾಲೆಯ ಆವರಣದಲ್ಲಿ  ಶಾಲೆಯ ಸುತ್ತ-ಮುತ್ತ ಯಾವುದೇ ರೀತಿಯ ತೊಂದರೆ ಅಥವಾ ಜೀವ ಹಾನಿ ಆಗದಂತೆ ಅಗತ್ಯ ಮುನ್ನೆಚ್ಚರಿಕಾ ಹಾಗೂ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಶಾಲೆಗಳನ್ನು ನಡೆಸಿಕೊಂಡು ಹೋಗುವಂತೆ ಸೂಚಿಸಿದೆ.

Key words: Heavy –rain-  Government – necessary-precautions – schools.