ಪಕ್ಷಿಗಳಿಗೂ ಪ್ರವಾಹ ಕಂಟಕ: ಮಂಡಗದ್ದೆ, ಗುಡವಿ ಪಕ್ಷಿಧಾಮದಲ್ಲಿ ಮಳೆಯಿಂದ ಭಾರಿ ಹಾನಿ

ಶಿವಮೊಗ್ಗ:ಆ-24: ಈ ಬಾರಿಯ ಮಳೆ, ಪ್ರವಾಹ ಜನರ ಜತೆಗೆ ಪಕ್ಷಿಗಳ ಬದುಕನ್ನೂ ಕಿತ್ತುಕೊಂಡಿದೆ. ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ, ಸೊರಬ ತಾಲೂಕಿನ ಗುಡವಿ ಪಕ್ಷಿಧಾಮಗಳು ಅಕ್ಷರಶಃ ನಲುಗಿವೆ. ಇದರ ಪರಿಣಾಮ ಪಕ್ಷಿಗಳ ಸಂತಾನೋತ್ಪತ್ತಿ ಮೇಲೆ ಬೀರಿದೆ. ಜತೆಗೆ ಪಕ್ಷಿಧಾಮಗಳ ಅಸ್ತಿತ್ವಕ್ಕೆ ಆತಂಕ ಎದುರಾಗಿದೆ.

ಈ ಪಕ್ಷಿಧಾಮಗಳಿಗೆ ಹಲವು ದಶಕಗಳಿಂದ ವಿದೇಶಗಳಿಂದ ಹಕ್ಕಿಗಳು ಸಂತಾನೋತ್ಪತ್ತಿಗಾಗಿ ವಲಸೆ ಬಂದು 6 ತಿಂಗಳು ಠಿಕಾಣಿ ಹೂಡುತ್ತವೆ. ಪ್ರತಿ ವರ್ಷ ಜೂನ್​ನಲ್ಲಿ ಆಗಮಿಸಿ ಅಕ್ಟೋಬರ್ ವೇಳೆಗೆ ಮರಳುತ್ತವೆ.

ದ್ವೀಪವೇ ಮಾಯ: ಮಂಡಗದ್ದೆ ಪಕ್ಷಿಧಾಮದ ಕೆಲವೇ ಮೀಟರ್ ದೂರದಲ್ಲಿ ದ್ವೀಪದಂತಿರುವ ಪ್ರದೇಶವಿದೆ. ಅಲ್ಲಿರುವ ವೈಟೆಕ್ಸ್ ಮರಗಳ ಮೇಲೆ ಈ ವಲಸೆ ಪಕ್ಷಿಗಳು ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡುತ್ತವೆ. ಆದರೆ, ಪ್ರವಾಹದ ಹೊಡೆತಕ್ಕೆ ಹಲವು ವೈಟೆಕ್ಸ್ ಮರಗಳೇ ಕೊಚ್ಚಿಹೋಗಿವೆ. ಸುಮಾರು 10 ಮೀಟರ್​ನಷ್ಟು ಉದ್ದದ ದ್ವೀಪ ನೀರಿನಲ್ಲಿ ಕೊಚ್ಚಿಹೋಗಿದೆ. ಕಳೆದ ತಿಂಗಳು ಕಟ್ಟಿದ್ದ ಗೂಡುಗಳು ತುಂಗೆಯ ಒಡಲು ಸೇರಿವೆ.

ಪಕ್ಷಿಗಳ ಸಂಖ್ಯೆಯಲ್ಲೂ ಇಳಿಮುಖವಾಗಿವೆ.

ಹೊಣೆ ಯಾರು?: ಮಂಡಗದ್ದೆ ಪಕ್ಷಿಧಾಮ ಆಕರ್ಷಣೆ ಕಳೆದುಕೊಳ್ಳುತ್ತ ಬಂದಿದೆ. ಇದು ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಇದರ ಪುನಶ್ಚೇತನಕ್ಕೆ ಇಲಾಖೆ ಯತ್ನಿಸುತ್ತಿಲ್ಲ. ತನಗೆ ಸಂಬಂಧಿಸಿದ್ದಲ್ಲವೆಂದು ಪ್ರವಾಸೋದ್ಯಮ ಇಲಾಖೆ ಕುಳಿತಿದೆ. ಅಭಿವೃದ್ಧಿ ಬಗ್ಗೆ ಪ್ರಯತ್ನಿಸುತ್ತಿಲ್ಲ. ಈ ಸ್ಥಿತಿಗೆ ಇಲಾಖೆಗಳ ಸಮನ್ವಯ ಕೊರತೆ ಪ್ರಮುಖ ಕಾರಣವಾಗಿದೆ. ಅಲ್ಲದೆ, ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮಂಡಗದ್ದೆ ಪಕ್ಷಿಧಾಮ ಸೇರಿದ್ದರೂ ‘ಪಕ್ಷಿಧಾಮ’ ಎಂದು ಅಧಿಸೂಚನೆ ಆಗಿಲ್ಲ. ತುಂಗಾ ಮೇಲ್ದಂಡೆ ಯೋಜನೆ ಅನುಷ್ಠಾನ ವೇಳೆ ಪಕ್ಷಿಧಾಮದ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳದ ಕಾರಣ ಮಳೆಗಾಲದಲ್ಲಿ ಪ್ರವಾಹ ಸಂಕಷ್ಟ ಎದುರಾಗುತ್ತಿದೆ.

ಗುಡವಿ ಪಕ್ಷಿಧಾಮದಲ್ಲಿ ಅಪಾರ ಹಾನಿ

ಗುಡವಿ ಪಕ್ಷಿಧಾಮದಲ್ಲೂ ನೆರೆ ಪರಿಣಾಮ ತೀವ್ರವಾಗಿ ಬಾಧಿಸಿದೆ. ಜುಲೈ ತಿಂಗಳಿಂದ ಸಾಮಾನ್ಯವಾಗಿ ಪಕ್ಷಿಗಳು ಮೊಟ್ಟೆ ಇಡುತ್ತವೆ. ಆದರೆ, ಈ ಬಾರಿ ಆಗಸ್ಟ್​ನಲ್ಲಿ ದಿಢೀರ್ ಸುರಿದ ಭಾರಿ ಮಳೆಗೆ ಪಕ್ಷಿಧಾಮದ ಕೆರೆಗಳು ತುಂಬಿ ಗೂಡುಗಳು ಮುಳುಗಿವೆ. ಶೇ.20 ಮೊಟ್ಟೆಗಳು ಕೆಳಗಿನ ದೊಡ್ಡ ಕೆರೆಯಲ್ಲಿ ಕೊಚ್ಚಿ ಹೋಗಿವೆ. ನೀರಿನ ಒತ್ತಡಕ್ಕೆ ಕೆರೆಯ ಕೋಡಿಯ ಗೇಟ್ ಮುರಿದು ಹೋಗಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಅತಿಯಾದ ಮಳೆಯಿಂದ ರಸ್ತೆ ಮೇಲೆ ನೀರು ನುಗ್ಗಿ ಪಕ್ಷಿ ವೀಕ್ಷಣಾ ಟವರ್ ಕೂಡ ಮುಳುಗಿದೆ. ಪ್ರವೇಶ ದ್ವಾರದಿಂದ ಪಕ್ಷಿಧಾಮದವರೆಗೆ ಮಣ್ಣಿನ ರಸ್ತೆ ಹಾಳಾಗಿದ್ದು, ಕೆಸರಿನಿಂದ ಕೂಡಿದೆ. 5 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಪಕ್ಷಿಗಳ ವೀಕ್ಷಣೆಗೆ ಸಾಗುವ ರಸ್ತೆಯ ಮೇಲೆ ಅಡ್ಡಲಾಗಿ ಬಿದಿರು ಹಿಂಡು ಬಿದ್ದು ಓಡಾಡಲು ಅಡ್ಡಿಯಾಗಿದೆ. ಕಳೆದ ನಾಲ್ಕು ವರ್ಷದಿಂದ ಮಳೆ ಕಡಿಮೆಯಾಗಿ ಪಕ್ಷಿಗಳ ಸಂತತಿ ಕುಗ್ಗಿತ್ತು. ಈ ಬಾರಿ ಮಳೆಯಾಗಿ ಕೆರೆ ತುಂಬಿದರೂ ಪ್ರವಾಹದ ಕಾರಣಕ್ಕೆ ಮೊಟ್ಟೆಗಳು ನಾಶವಾಗಿ ಪಕ್ಷಿಗಳ ಸಂಖ್ಯೆ ಕಡಿಮೆ ಆಗಲಿದೆ.

ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ನಾವು ಪ್ರಸ್ತಾವನೆ ಕಳಿಸಬಹುದಷ್ಟೇ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಇರುವುದರಿಂದ ನಿರ್ವಹಣೆ ಅವರದ್ದೇ ಆಗಿರುತ್ತದೆ. ಮುಖ್ಯವಾಗಿ ತುಂಗಾ ಮೇಲ್ದಂಡೆ ಯೋಜನೆ ಬಳಿಕ ಪಕ್ಷಿಧಾಮದ ಸ್ಥಳವೂ ಮುಳುಗಡೆ ಪ್ರದೇಶಕ್ಕೆ ಸೇರಿದೆ.

| ಹನುಮಾನಾಯ್ಕ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ

ಗುಡವಿ ಕೆರೆಯ ಗೇಟ್​ವಾಲ್ವ್ ಮುರಿದು ಹೋಗಿರುವುದರಿಂದ ಬೇಸಿಗೆಗೆ ಕೆರೆಯಲ್ಲಿ ನೀರು ಉಳಿಯುವುದು ಕಷ್ಟ. ಸದ್ಯಕ್ಕೆ ಪಕ್ಷಿಧಾಮದ ಅಭಿವೃದ್ಧಿಗೆ ಯಾವುದೆ ಅನುದಾನ ಬಿಡುಗಡೆಯಾಗಿಲ್ಲ.

| ವಿನೋದ್ ಅಂಗಡಿ, ವಲಯ ಅರಣ್ಯಾಧಿಕಾರಿ
ಕೃಪೆ:ವಿಜಯವಾಣಿ

ಪಕ್ಷಿಗಳಿಗೂ ಪ್ರವಾಹ ಕಂಟಕ: ಮಂಡಗದ್ದೆ, ಗುಡವಿ ಪಕ್ಷಿಧಾಮದಲ್ಲಿ ಮಳೆಯಿಂದ ಭಾರಿ ಹಾನಿ
heavy-rain-affected-mandagadde-and-gudavi-bird-sanctuary