ಮೈಶುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಸಚಿವ ಶಂಕರ ಪಾಟೀಲ

ಬೆಂಗಳೂರು: ಮಂಡ್ಯದ ಮೈಶುಗರ್ ಕಾರ್ಖಾನೆ ಆ ಭಾಗದ ರೈತರ ಜೀವನಾಡಿ, ಕಾರ್ಖಾನೆಯ ಸ್ಥಗಿತದಿಂದ ರೈತರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ, ನಾನು ಸಹ ರೈತರ ಹೋರಾಟ ಚಳವಳಿ ಹಿನ್ನೆಲೆಯಿಂದಲ್ಲೇ ಬಂದವನು, ಐತಿಹಾಸಿಕ ಮೈಶುಗರ್ ಕಾರ್ಖಾನೆಯ ಇತಿಹಾಸಕ್ಕೆ ದಕ್ಕೆಯಾಗದಂತೆ ಕಾರ್ಖಾನೆ ಪುನಶ್ಚೇತನಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಕ್ಕರೆ ಮತ್ತು ಜವಳಿ ಸಚಿವ ಸಚಿವ ಶ್ರೀ ಶಂಕರ ಬ ಪಾಟೀಲ ಮುನೇನಕೊಪ್ಪ ಸದನದಲ್ಲಿ ತಿಳಿಸಿದರು.

ಶಾಸಕ ಶ್ರೀ ಅನ್ನಧಾನಿ ಅವರು ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸದೆ ಸರ್ಕಾರಿ ಸೌಮ್ಯದ ಒಡೆತನದಲ್ಲೇ ಮುಂದುವರೆಸುವ ಬಗ್ಗೆ ಸದನದಲ್ಲಿ ಮಂಡಿಸಿದ್ದ ಅರ್ಧಗಂಟೆ ಅವಧಿಯ ಚರ್ಚೆಯಲ್ಲಿ ಸಚಿವರು ಉತ್ತರ ನೀಡಿದರು.

ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಶಾಸಕರಾದ ಅನ್ನದಾನಿ, ಡಿ.ಸಿ.ತಮ್ಮಣ್ಣ, ಸುರೇಶ್ ಗೌಡ ಭಾಗವಹಿಸಿ, ಮೈಶುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದ ಒಡೆತನದಲ್ಲೇ ಮುಂದುವರೆಸಬೇಕು, ಖಾಸಗೀಕರಣ ಗೊಳಿಸಬಾರದು ಎಂದು ಒತ್ತಾಯ ಮಾಡಿದರು.

ಇದಕ್ಕೆ ಉತ್ತರಿಸಿದ ಸಚಿವ ಶ್ರೀ ಶಂಕರ ಬ ಪಾಟೀಲ ಮುನೇನಕೊಪ್ಪ, ರಾಜ್ಯದ ಸರ್ಕಾರಿ ಕ್ಷೇತ್ರದ ಕಾರ್ಖಾನೆ & ಸಹಕಾರಿ ಕ್ಷೇತ್ರದ ಸಕ್ಕರೆ ಕಾರ್ಖಾನೆಗಳು ನಷ್ಟದ ಹಾದಿಯಲ್ಲಿ ಸಾಗುತ್ತಿವೆ, ಇವುಗಳ ಪುನಶ್ಚೇತನಕ್ಕೆ ಈಗಾಗಲೇ ಕೇಂದ್ರ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರನ್ನು ಎರಡು ಬಾರಿ ಭೇಟಿಯಾಗಿ ಚರ್ಚಿಸಿದ್ದೇನೆ. ಮಂಡ್ಯದ ಮೈಶುಗರ್ ಕಾರ್ಖಾನೆಯ ಪರಿಸ್ಥಿತಿ & ಆ ಭಾಗದ ಕಬ್ಬುಬೆಳೆಗಾರ ರೈತರ ಸ್ಥಿತಿ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಇದೆ.

ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಮುಂದಿನ ದಿನದಲ್ಲಿ ಆ ಭಾಗದ ರೈತರ ಹಿತದೃಷ್ಟಿಯನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ರೈತರ ಕಬ್ಬು ಅರಿಯಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಂಡು, ಐತಿಹಾಸಿಕ ಮೈಶುಗರ್ ಕಾರ್ಖಾನೆಯ ಇತಿಹಾಸಕ್ಕೆ ದಕ್ಕೆಯಾಗದಂತೆ ಕಾರ್ಖಾನೆ ಪುನಶ್ಚೇತನಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.

key words: Government will take necessary steps to revive Mysugar factory says Minister Shankara Patil