ಬಿಬಿಎಂಪಿ ವಿಭಜನೆ ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ: ದೋಸ್ತಿ ಸರ್ಕಾರದ ಸಂದಿಗ್ದ ಪರಿಸ್ಥಿತಿ ಬಗ್ಗೆ ಸಚಿವ ಕೃಷ್ಣೇಭೈರೇಗೌಡ ಪ್ರತಿಕ್ರಿಯಿಸಿದ್ದು ಹೀಗೆ..?

ಬೆಂಗಳೂರು,ಜು,11,2019(www.justkannada.in):  ಬಿಬಿಎಂಪಿಯನ್ನ ಮೂರು ವಿಭಾಗಗಳಾಗಿ ವಿಂಗಡಿಸಲು ವಿಧೇಯಕ ಮಂಡನೆ ಮಾಡಿದ್ದ ಸರ್ಕಾರ ಇದೀಗ ಬಿಬಿಎಂಪಿ ವಿಭಜನೆ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದ್ದು ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಬಿಬಿಎಂಪಿ ವಿಭಜನೆ  ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದ ವಿಧೇಯಕ ವಾಪಾಸ್ ಪಡೆಯಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಬಿಬಿಎಂಪಿ ವಿಭಜನೆ ಮಾಡದೇ ಬದಲಿ ಮಾರ್ಗಗಳನ್ನ ಹುಡುಕಲು ನಿರ್ಧರಿಸಲಾಗಿದೆ. ಬಿ.ಎಸ್ ಪಾಟೀಲ್ ಕಮಿಟಿ ವರದಿ ತಿರಸ್ಕಾರ ಮಾಡಿಲ್ಲ.ಆದರೆ ಬೇರೆ ರೀತಿ ಅನುಷ್ಠಾನ ಗೊಳಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಸರ್ಕಾರದ ಅಳಿವು ಉಳಿವಿನ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ,  ಸರ್ಕಾರ ಸಂದಿಗ್ದ ಪರಿಸ್ಥಿತಿಯಲ್ಲಿದೆ, ಅನುಮಾನ ಇಲ್ಲ. ಏನೆಲ್ಲಾ ಪರಿಹಾರ ಇದೆ ಅನ್ನೋದ್ರ ಬಗ್ಗೆ  ಸಚಿವ ಸಂಪುಟ ಸಭೆಯಲ್ಲ ಚರ್ಚಿಸಲಾಗಿದೆ. ಬಿಜೆಪಿಯಿಂದ ನಮ್ಮ ಮೇಲೆ ಇದು ಆರನೇ ದಾಳಿಯಾಗಿದೆ. ಕೇಂದ್ರ ಸರ್ಕಾರ ಬಳಿಸಿಕೊಂಡು ನಮ್ಮ ಮೇಲೆ ನಿರಂತರ ದಾಳಿ ಮಾಡ್ತಿದ್ದಾರೆ. ಹಿಂದೆಯೂ ಮೆಟ್ಟಿ ನಿಂತಿದ್ದೇವೆ. ನಾವೆಲ್ಲಾ ಒಂದು ಸಂಕಲ್ಪ ಮಾಡಿದ್ದೇವೆ, ಧೈರ್ಯವಾಗಿ ಎದುರಿಸೋಣ ಅಂತಾ. ಅತೃಪ್ತ ಶಾಸಕರ ಮನವೊಲಿಕೆ ಸೇರಿ ಎಲ್ಲಾ ಪ್ರಯತ್ನ ಮಾಡೋಣ ಅಂತ ಚರ್ಚೆ ಮಾಡಿದ್ದೇವೆ.ಸಂಘಟಿತವಾಗಿ ಪ್ರಯತ್ನಿಸಿ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆದಿದೆ ಎಂದು ಕೃಷ್ಣೇಭೈರೇಗೌಡ ತಿಳಿಸಿದರು.

ಸರ್ಕಾರಕ್ಕೆ ಬಹುಮತ ಇಲ್ಲ ಅಂತ ಬಿಜೆಪಿ ಆರೋಪ ವಿಚಾರ ಕುರಿತು ಮಾತನಾಡಿದ ಕೃಷ್ಣೇಭೈರೇಗೌಡರು, ತರಾತುರಿ ಇದ್ರೆ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ. ರಾಜ್ಯಪಾಲರ ಸಂವಿಧಾನ ಬದ್ಧವಾದ ಸೂಚನೆಗಳನ್ನ ನಮ್ಮ ಸರ್ಕಾರ ಪಾಲನೆ ಮಾಡುತ್ತೆ. ಅಧಿವೇಶನ ನಿಮ್ಮ ಕಣ್ಣ ಮುಂದೆಯೇ ನಡೆಯುತ್ತೆ. ಅದಕ್ಕೆ ನೀವೂ ಸಾಕ್ಷ್ಯ ಇರ್ತೀರಾ. ಫೈನಾನ್ಸ್ ಬಿಲ್ ಮತಕ್ಕೆ ಹಾಕೋದು ಪ್ರತಿಪಕ್ಷದ ಹಕ್ಕು. ಮತಕ್ಕೆ ಹಾಕಲಿಕ್ಕೆ ನಾವು ಸಿದ್ದರಿದ್ದೇವೆ. ಯಾರಿಗೆ ಬಹುಮತ ಸಿಗುತ್ತೆ ನೋಡೋಣ. ಮತಕ್ಕೆ ಹಾಕಿದ್ರೆ ನಾವು ಬಹುಮತ ತೋರಿಸ್ತೀವಿ ಎಂದು ಸಚಿವ ಕೃಷ್ಣಾಭೈರೇಗೌಡ ಹೇಳಿದರು.

Key words: Government – backed- away – BBMP –split- decision-Minister Krishnabhairaigowda