ಜಿ.ಎನ್ ಮೋಹನ್ ಸ್ಪೆಷಲ್ : ‘ಪಾಪದ ಹೂಗಳನ್ನು’ ಕೈಯಲ್ಲಿ ಹಿಡಿದುಕೊಂಡು…

‘ಪಾಪದ ಹೂಗಳನ್ನು’
ಕೈಯಲ್ಲಿ ಹಿಡಿದುಕೊಂಡು…
—–
ಜಿ ಎನ್ ಮೋಹನ್

“ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು. ಅದೊಂದೇ – ಒಂದೇ ಪರಿಹಾರ ಸಮಸ್ಯೆಗೆ” – ಎಂದು ಕವನ ವಾಚಿಸಿದ ತಕ್ಷಣ ‘ರಂಗಶಂಕರ’ದ ಅಂಗಳದಲ್ಲಿದ್ದವರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು.jk-logo-justkannada-logo

ನಾನು ಕವಿತೆ ಓದುವುದನ್ನು ಬಿಡಲಿಲ್ಲ, ಮುಂದುವರಿಸಿದೆ..

“ಏನನ್ನು ಕುಡಿಯುವುದು? ವೈನ್, ಕಾವ್ಯ, ಋಜುತ್ವ .. ಯಾವುದನ್ನಾದರೂ, ಕುಡಿಯುತ್ತಿರಬೇಕು ಮಾತ್ರ”. ಕೇಳುತ್ತಿದ್ದವರು ಒಂದಿಷ್ಟು ನಿರಾಳಾರಾದಂತೆ ಕಂಡರು.

ಕೆಲವು ವರ್ಷಗಳ ಹಿಂದೆ ‘ರಂಗಶಂಕರ’ ಲಂಕೇಶರನ್ನು ಥೀಮ್ ಆಗಿ ಇಟ್ಟುಕೊಂಡು ರಂಗ ಉಗಾದಿಗೆ ಸಜ್ಜಾಗಿತ್ತು. ಬೆಳಗ್ಗೆಯಿಂದ ಆರಂಭಿಸಿ ರಾತ್ರಿ ತನ್ನ ಹೆಜ್ಜೆಗಳನ್ನು ಇಳಿಸಿ ಹೋಗುವವರೆಗೆ ಲಂಕೇಶ್ ಎಲ್ಲೆಲ್ಲೂ ಇರಬೇಕು ಎನ್ನುವುದು ರಂಗಶಂಕರದ ಆಶಯವಾಗಿತ್ತು.

ಹಾಗಾಗಿಯೇ ಲಂಕೇಶರ ಕಥೆ, ಕವಿತೆ, ಏಕಾಂಕ, ಇಂದಿಗೂ ಕಾಡುವ ’ಸಂಕ್ರಾಂತಿ’, ಲಂಕೇಶರ ಮಲೆನಾಡಿನ ತಿಂಡಿ ತಿನಿಸು, ನೆಂಚಿಕೊಳ್ಳಲು ನೀಲು ಪದ್ಯಗಳು ಎಲ್ಲವೂ ಇತ್ತು.

ಈ ಮಧ್ಯೆ ನನ್ನ ಕೈಗೆ ಬಂದಿದ್ದು ಬೋದಿಲೇರನ ಕಾವ್ಯ. ಲಂಕೇಶ್ ಅವರು ಅನುವಾದ ಮಾಡಿದ್ದ ಬೋದಿಲೇರನ ಕವಿತೆಗಳನ್ನು ಸುಮಾರು ಅರ್ಧ ಗಂಟೆ ಕೇಳುಗರಿಗೆ ದಾಟಿಸಬೇಕಿತ್ತು.

ಯೋಗರಾಜ ಭಟ್ಟರ ಕೈಗೆ ನೀಲು ಕವಿತೆಗಳು ಸಿಕ್ಕಿದ್ದವು. ನೀಲೂ ಪದ್ಯಗಳಂತೂ ಶಾಯರಿಯಂತೆ ಪಟಕ್ಕನೆ ಯಾವಾಗ ಬೇಕಾದರೂ ಉದುರುತ್ತದೆ ಎನ್ನುವಂತೆ ನಾಲಿಗೆಯ ತುದಿಯಲ್ಲಿ ಕುಣಿಯುತ್ತಿರುತ್ತದೆ.

ಹೀಗೆ ಲಂಕೇಶರ ಬಹು ಚರ್ಚಿತ, ಓದಿಸಿಕೊಂಡ ನಾಟಕ ಕವಿತೆಗಳ ಮಧ್ಯೆ ನಾನು ಬೋದಿಲೇರನನ್ನು ಹಿಡಿದುಕೊಂಡು ಕೂತಿದ್ದೆ.

ಬೋದಿಲೇರ್ ನನಗಂತೂ ಅಥವಾ ಕಾವ್ಯಕ್ಕೆ ಮೈ ತೆತ್ತುಕೊಳ್ಳುತ್ತಿದ್ದ ನನ್ನ ತಲೆಮಾರಿನವರಿಗಂತೂ ಅಪರಿಚಿತನಾಗಿರಲಿಲ್ಲ. ಲಂಕೇಶ್ ಫ್ರೆಂಚ್ ಭಾಷೆಯ ’ಲೆ ಫ್ಲೂರ್ ದು ಮಾಲ್’’ ಕೃತಿಯನ್ನು ’ಪಾಪದ ಹೂವುಗಳು’’ ಎನ್ನುವ ಹೆಸರಿನಲ್ಲಿ ಕೈಗಿತ್ತಾಗಲೇ ನಮ್ಮ ಪೀಳಿಗೆ ಥಂಡಾ ಹೊಡೆದು ಹೋಗಿತ್ತು.

ಏಕೆಂದರೆ ಆ ತಲೆಮಾರೇ ಹಾಗಿತ್ತು. ಎಲ್ಲರೂ ಬಾಯಿಬಿಟ್ಟುಕೊಂಡು ’ಆ ದಶಕ’ ಎಂದು ಬಣ್ಣಿಸುವ ೭೦ ರ ದಶಕದಲ್ಲಿ ಲಂಕೇಶ್ ಬೋದಿಲೇರನ ಹೆಗಲು ಬಳಸಿ ಸಲೀಸಾಗಿ ವಾಕಿಂಗ್ ಗೆಂದು ಲಾಲ್‌ಬಾಗ್‌ಗೋ, ಬ್ಯೂಗಲ್ ರಾಕ್ ಪಾರ್ಕಿಗೋ ಕರೆದುಕೊಂಡು ಬಂದವರಂತೆ ಕನ್ನಡದ ಅಂಗಳಕ್ಕೆ ಕರೆದುಕೊಂಡು ಬಂದುಬಿಟ್ಟಿದ್ದರು.

ಸಿಟ್ಟು, ಆಕ್ರೋಶಕ್ಕೆ ಕ್ಯಾನ್ ವಾಸ್ ಸಿಕ್ಕಿದ್ದ ದಿನಗಳು ಅವು. ಹಾಗಾಗಿ ಒಂದು ರೊಚ್ಚಿನ ಜನಾಂಗವೇ ಎದ್ದು ನಿಲ್ಲುತ್ತಿತ್ತು.

ಆಗಲೇ ಬೋದಿಲೇರ್ ಸಿಗಬೇಕೆ? ‘ಸದಾ ಕುಡಿದಿರು, ಏನನ್ನಾದರೂ..’ ಎಂದು ಬೋದಿಸಿದ ಬೋದಿಲೇರ್. ಹಾಗಾಗಿ ನಮ್ಮ ಕಾಲಕ್ಕೆ ಅದು ಮಿಂಚಿದ, ಆದರೆ ಮಾಸಿಹೋಗದ ಬೆಳಕು.

ಅಂತಹ ಬೋದಿಲೇರ್ ನನ್ನ ಕೈಗೆ ಸಿಕ್ಕಿ ಹಾಕಿಕೊಂಡಿದ್ದ. ನನಗಂತೂ ಬೋದಿಲೇರ್ ಕವಿತೆಗಳ ಬಾಗಿಲು ಬಡಿಯಲು ಲಂಕೇಶ್ ಕೊಟ್ಟ ಹತಾರಗಳು ಕೈಲಿದ್ದವು.

ಆದರೆ ಕೇಳುಗರಿಗೆ ಬೋದಿಲೇರ್ ಅಪರಿಚಿತನಾಗಿ ಹೋಗಿದ್ದ. ಏಕೆಂದರೆ ಅಲ್ಲಿದ್ದವರು ಸಿಟ್ಟು, ಆಕ್ರೋಶ, ಬಂಡಾಯವನ್ನು ಯಾವ ಭೇದ ಭಾವ ಮಾಡದೆ, ಮುಲಾಜಿಲ್ಲದೆ ಸಪಾಟು ಮಾಡುವ ಜಾಗತೀಕರಣದ ಕಾಲದವರು.

ಹಾಗಾಗಿ ಜಾಗತೀಕರಣ ಬೋದಿಲೇರನ ಕವಿತೆ ಹುಟ್ಟುಹಾಕುತ್ತಿದ್ದ ತಲ್ಲಣ, ವಿಕ್ಷಿಪ್ತತೆ, ಆಕ್ರೋಶ, ಅಸಹನೆಯನ್ನು ಬುಲ್ಡೋಜ್ ಮಾಡಿ ಅಥವಾ ಪರೋಕ್ಷವಾಗಿ ಬೋದಿಲೇರನನ್ನೇ ತಿಂದು ಹಾಕಿ ಮುಗಿಸಿತ್ತು.

ಹಾಗಾಗಿ ಬೋದಿಲೇರ್ ನನ್ನು ಕೇಳುಗರ ಕಿವಿಗೆ, ಆ ಮೂಲಕ ಅವರ ಮನಸ್ಸಿಗೆ ತಾಕಿಸುವುದು ಸುಲಭವಾದ ಮಾತಾಗಿರಲಿಲ್ಲ.GN Mohan Special.

ಹಾಗಾಗಿಯೇ ನಾನು ಮತ್ತೆ ಮತ್ತೆ ಬೋದಿಲೇರನ ಪಾಪದ ಹೂವುಗಳಲ್ಲಿ ಮುಖ ಹುದುಗಿಸಿ ಕುಳಿತೆ. ಬೋದಿಲೇರನನ್ನು ಓದುತ್ತಾ, ಓದುತ್ತಾ ನನ್ನೊಳಗೂ ಒಂದು ಕತ್ತಲು, ನನ್ನೊಳಗಿನ ಅನಾಚಾರ, ನನ್ನೊಳಗಿನ ಅಧೋಲೋಕ, ನನ್ನೊಳಗಿನ ಸಂಕಟಕ್ಕೂ ಈ ಕವಿತೆಗಳು ಕೀಲಿ ಕೈ ಒದಗಿಸುತ್ತಾ ಹೋದವು.

ಜಂಬಣ್ಣ ಅಮರಚಿಂತ ಅವರು ಆ ಕಾಲಕ್ಕೇ ’ಅಧೋ ಜಗತ್ತಿನ ಅಕಾವ್ಯ’ ಎನ್ನುವ ಕವನ ಸಂಕಲನ ಹೊರತಂದಿದ್ದರು. ಪಾಪದ ಹೂವುಗಳನ್ನು ಮೂಸುತ್ತಾ ಕೂತವನಿಗೆ ಇದೂ ಅಂತಹದ್ದೇ ಅಧೋ ಜಗತ್ತಿನ ಅಕಾವ್ಯ ಅನ್ನಿಸಿತು.

ಲಂಕೇಶ್ ಸಹಾ ತಮ್ಮ ಲೋಕಕ್ಕೂ ಈ ಕೃತಿಯಿಂದ ಇಂತಹದ್ದೇ ಕೀಲಿ ಕೈ ಪಡೆದಿದ್ದರೇನೋ? ’ಇದು ಕಾವ್ಯಕ್ಕೂ, ಜೀವನಕ್ಕೂ ಇರಬಹುದಾದ ಸಂಬಂಧದ ಬಗ್ಗೆ ಚಿಂತಿಸುವವನೊಬ್ಬ ತಾನು ಬೋದಿಲೇರನ ಬದುಕು, ಕಾವ್ಯದಿಂದ ಇಸಿದುಕೊಂಡ ಆಶ್ಚರ್ಯ, ಆಘಾತಗಳನ್ನು ಯೋಚಿಸುತ್ತಾ, ಟಿಪ್ಪಣಿ ಮಾಡಿದ್ದರಿಂದ ಹುಟ್ಟಿದ ಪುಸ್ತಕ’ ಎನ್ನುತ್ತಾರೆ.

ಲಂಕೇಶರಂಥ ಲಂಕೇಶರಿಗೇ ಆಘಾತ ಕೊಟ್ಟ ಈ ಕೃತಿಯ ಒಳಗೆ ಹೆಜ್ಜೆ ಹಾಕುತ್ತಾ ಹೋದರೆ ’ಇದು ಹಸಿರಿಲ್ಲದ, ಉಸಿರಿಲ್ಲದ, ಹೆಸರಿಲ್ಲದ ನರಕ’.

’ಹೆಣ್ಣಿನ ಕೂದಲಲ್ಲಿ ಭೂಮಿಯ ಅರ್ಧ ಭಾಗ’ ಎನ್ನುವ ಕವಿತೆಯ ನಡುವೆ ನನ್ನ ಬೆರಳಾಡಿಸುತ್ತಾ, ’ನಿನ್ನ ಕೂದಲಲ್ಲಿ ನಾನು ಕಂಡಿದ್ದು, ಕೇಳಿದ್ದು ನಿನಗೆ ಗೊತ್ತಿಲ್ಲ! ಜನರ ಮನಸ್ಸು ಸಂಗೀತದಲ್ಲಿ ತೇಲುವಂತೆ ನನ್ನ ಚೇತನ ನಿನ್ನ ಕೂದಲ ವಾಸನೆಯಲ್ಲಿ ತೇಲುತ್ತದೆ. ನಿನ್ನ ಕೂದಲು ಸಂಪೂರ್ಣ ಸ್ವಪ್ನ ನನ್ನ ಪಾಲಿಗೆ – ಚರ ರೂಪುಗಳು, ಅಚರ ಆಕಾರಗಳು! ಅದರಲ್ಲಿ ನನ್ನನ್ನು ದೂರ ದೇಶಗಳಿಗೆ ಒಯ್ಯುವ, ಇಲ್ಲಿಗಿಂತ ನೀಲ, ಆಳ ಜಾಗಗಳಿಗೆ ಕೊಂಡೊಯ್ಯುವ, ಅಲ್ಲಿ ಹಣ್ಣು, ಎಲೆ, ಮನುಷ್ಯ ಚರ್ಮದ ವಾಸನೆ ತೋರುವ ಸಮುದ್ರದ ಮುಂಗಾರು ಇದೆ ನನ್ನ ಪಾಲಿಗೆ ….’ ಎಂದು ಓದುತ್ತಾ ಇದ್ದಂತೆ ಕೇಳುಗರು ಬೆಚ್ಚಿಬಿದ್ದಿದ್ದರು, ಥೇಟ್ ನಾನು ಬೆಚ್ಚಿ ಬಿದ್ದಿದ್ದಂತೆಯೇ.

ಲಂಕೇಶ್ ಹೇಳುತ್ತಾರೆ – ‘ಇದೇ ಬೋದಿಲೇರನ ಕವಿತೆಯ ಶಕ್ತಿ. ’ಜಡಗೊಂಡ ಓದುಗರನ್ನು ತನ್ನ ಅನುಭವದಿಂದ ಬೆಚ್ಚಿ ಬೀಳಿಸದೆ ಇರುವ ಲೇಖಕ ಎಂಥದನ್ನೂ ಮಾಡಲಾರ ಎಂಬುದು ಬೋದಿಲೇರನ ನಂಬಿಕೆ’ ಎನ್ನುತ್ತಾ ’ಕೊನೆಯ ಪಕ್ಷ ಬೋದಿಲೇರನ ನರಕದಿಂದಾದರೂ ನಮ್ಮ ವಾಚಕರು ಎಚ್ಚರಗೊಳ್ಳಲಿ ಎಂಬುದು ನನ್ನ ಆಶೆ’ ಎನ್ನುತ್ತಾರೆ ಅವರು.

ಆದರೆ ನಾನೋ ಇಲ್ಲಿ ಕೇಳುಗರಿಗೆ ಬೋದಿಲೇರನ ಲೋಕ ಹಂಚುತ್ತಾ ಬೆಚ್ಚಿಬೀಳಿಸುತ್ತಿದ್ದೆ.

ನಾವು – ನೀವೇನು, ಸರಿಯಾಗಿ ೧೨೬ ವರ್ಷಗಳ ಹಿಂದೆ ಬೋದಿಲೇರ್ ಈ ಪುಸ್ತಕ ಹಿಡಿದು ನಿಂತಾಗ ಫ್ರಾನ್ಸ್ ಗೆ ಫ್ರಾನ್ಸೇ ಬೆಚ್ಚಿಬಿದ್ದಿತ್ತು.

ವಿಕ್ಟರ್ ಹ್ಯೂಗೋ, ವಿಗ್ನಿ ಕಟ್ಟಿಕೊಡುತ್ತಿದ್ದ ರೋಮ್ಯಾಂಟಿಕ್ ಸಾಹಿತ್ಯದ ಕಾಲದಲ್ಲಿ ಒಂದು ಅಕಾವ್ಯ ಎದ್ದು ನಿಂತಿತ್ತು. ಥೇಟ್ ಸಿದ್ದಲಿಂಗಯ್ಯನವರ ‘ಹೊಲೆ ಮಾದಿಗರ ಹಾಡಿ’ನ ಹಾಗೆ. ಕನ್ನಡ ಕಾವ್ಯ ಒಂದು ಸುಮಧುರವಾದ ಅನುಭವಕ್ಕೆ ಮೈಯೊಡ್ಡಿಕೊಂಡಿದ್ದಾಗಲೇ ’ಇಕ್ರಲಾ, ಒದೀರ್ಲಾ, ಆ ನನ್ಮಕ್ಕಳ ಚರ್ಮ ಎಬ್ರಲಾ…’ ಎಂದು ಎದ್ದು ನಿಂತಿತು.

ಹೌದಲ್ಲಾ! ಇಲ್ಲೂ ಒಂದು ಸಾಮ್ಯತೆಯಿದೆ. ಬೋದಿಲೇರನ ಪುಸ್ತಕ ಪ್ರಕಟಿಸಲು ಹೊರಡುವಾಗ ಲಂಕೇಶರು, ’ಈ ಕವಿತೆಗಳನ್ನು ಓದುಗರು ಗಟ್ಟಿಯಾಗಿ ಓದಿಕೊಂಡರೆ ಒಳ್ಳೆಯದು ಎಂದು ನನಗೆ ಅನ್ನಿಸಿದೆ. ಇದನ್ನು ಕೆಲವರ ಮೇಲೆ ಪ್ರಯೋಗಿಸಿ ಈ ಮಾತನ್ನು ಹೇಳುತ್ತಿದ್ದೇನೆ’, ಎಂದು ಬರೆಯುತ್ತಾರೆ.

ಸಿದ್ದಲಿಂಗಯ್ಯನವರ ’ಹೊಲೆ ಮಾದಿಗರ ಹಾಡು’, ’ಸಾವಿರಾರು ನದಿಗಳು’ ಬಂದಾಗಲೂ ಇದನ್ನು ಗಟ್ಟಿಯಾಗಿ ಓದಿ ಎಂಬ ಸೂಚನೆ ಪುಸ್ತಕದಲ್ಲಿತ್ತು.

ಅಂದರೆ ಅದುವರೆಗೂ ಮೆಲು ಮಾತಿನಲ್ಲಿ, ಒಳ ಮಾತಿನಲ್ಲಿ, ಪಿಸುಮಾತಿನಲ್ಲಿ ತೇಲುತ್ತಿದ್ದ ಕನ್ನಡ ಕಾವ್ಯ ಗಟ್ಟಿಯಾಗಿ ಮಾತನಾಡಲು ಹೆಜ್ಜೆ ಹಾಕಿತ್ತು.

ಇದನ್ನು ಬರೆಯುತ್ತಾ, ಬರೆಯುತ್ತಾ ಇರುವಾಗಲೇ ಆ ಬೋದಿಲೇರ್ ಕಟ್ಟಿಕೊಟ್ಟ ಆ ಜಗತ್ತಿಗೂ ಸಿದ್ದಲಿಂಗಯ್ಯ ಹಾಗು ಆ ನಂತರ ಹುಟ್ಟಿಕೊಂಡ ಕಾವ್ಯಕ್ಕೂ ಎಷ್ಟೊಂದು ಸಾಮ್ಯತೆಯಿದೆ.

ಬೋದಿಲೇರ್ ಬಣ್ಣಿಸಿದ್ದು ಚೆಲುವಾದ ಫ್ರಾನ್ಸಿನ ಆಳದಲ್ಲಿ ತೇಲುತ್ತಿದ್ದ ನರಕವನ್ನು, ಎದೆಯೊಳಗಿನ ವಿಷಾದವನ್ನು. ಇಲ್ಲಿ ನಾವು ಓದತೊಡಗಿದ್ದು ಉಸಿರುಗಟ್ಟಿಕೊಂಡು ಇದ್ದ ಒಂದು ಲೋಕ ಮಾತಾಡಲು ಶುರು ಮಾಡಿದ್ದನ್ನು.

’ನಿನ್ನೆ ದಿನ ನನ್ನ ಜನ, ಬೆಟ್ಟದಂತೆ ಬಂದರು. ಕಪ್ಪು ಮುಖ, ಬೆಳ್ಳಿ ಗಡ್ಡ, ಉರಿಯುತಿರುವ ಕಣ್ಣುಗಳು…’ ಕನ್ನಡ ಕಾವ್ಯಲೋಕವನ್ನು ಪ್ರವೇಶಿಸಿತ್ತು.

ಅಂತಹ ಕಪ್ಪು ಮುಖ, ಬೆಳ್ಳಿಗಡ್ಡ, ಉರಿಯುತಿರುವ ಕಣ್ಣುಗಳು ಬೋದಿಲೇರನಿಗಿತ್ತೋ ಇಲ್ಲವೋ ಆದರೆ ಆತನ ಕಾವ್ಯಕ್ಕಂತೂ ಇತ್ತು ಉರಿಯುತ್ತಿರುವ ಕಣ್ಣುಗಳು.

ಪಾಪದ ಹೂವುಗಳ ಮೂಲಕ ಬೋದಿಲೇರ್ ತನ್ನ ನರಕವನ್ನು ಮೊಗೆದು, ಮೊಗೆದು ಕೊಟ್ಟಿದ್ದ. ಅದು ಸಾಮಾನ್ಯರ ಎದೆಯನ್ನೂ ತಟ್ಟಿತ್ತು.

ಆ ಕಾರಣಕ್ಕಾಗಿಯೇ ಪಾಪದ ಹೂವುಗಳು, ಕೋರ್ಟಿನ ಕಟಕಟೆಯಲ್ಲಿ ನಿಲ್ಲಬೇಕಾಯಿತು. ಬರೆದ ಬೋದಿಲೇರನಿಗೂ ದಂಡ, ಜೊತೆಗೆ ಐದಾರು ಕವಿತೆಗಳನ್ನು ಕಿತ್ತು ಹಾಕಲಾಯಿತು.

ಅದರೆ ಬೋದಿಲೇರ್ ಲಂಕೇಶ್ ಬಣ್ಣಿಸುವಂತೆ ‘ಕತ್ತಲ ಜಗತ್ತನ್ನು ಪ್ರವೇಶಿಸಿ ಬೆಳಕಿನ ಬಾಗಿಲುಗಳನ್ನು ಮುಚ್ಚಿಕೊಂಡವ’.

ಫ್ರಾನ್ಸಿನ ವಿಮರ್ಶಕರು ಈ ಕೃತಿಯ ವಿಮರ್ಶೆ ಮಾಡಲು ಬೇಕಾದ ಮಾನದಂಡಗಳನ್ನೇ ಹೊಂದಿರಲಿಲ್ಲ. ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು ಇದನ್ನು ’ಅವಿವೇಕದ ಹೂವುಗಳು’ ಎಂದು ಕರೆದು ಕೈ ತೊಳೆದುಕೊಂಡರು.

ಹೌದಲ್ಲ, ಹಾಗಾದರೆ ನಮ್ಮ ’ಬೋದಿಲೇರನ ಸಖ’ ಲಂಕೇಶ್ ಈ ಅವಿವೇಕವನ್ನು ಕನ್ನಡದ ಅಂಗಳಕ್ಕೆ ತಂದಿದ್ದಾದರೂ ಯಾಕೆ? ಎಂದು ಅಚ್ಚರಿಗೊಳ್ಳುತ್ತಾ ಕುಳಿತೆ.

‘ಈ ಜಗತ್ತು ಯಾವುದನ್ನು ವಿವೇಕ ಎನ್ನುತ್ತದೋ ಅದು ಎಷ್ಟೋ ವೇಳೆ ಅವಿವೇಕವೂ, ಯಾವುದನ್ನು ಅವಿವೇಕ ಎನ್ನುತ್ತದೋ ಅದೇ ವಿವೇಕವಾಗಿರುತ್ತದೆ’ ಎನ್ನುವುದನ್ನು ಕಲಿಸಿಕೊಟ್ಟಿದ್ದು ಇದೇ ಲಂಕೇಶ್ ವಿಶ್ವವಿದ್ಯಾಲಯವಲ್ಲವೇ…?