ಇಂಡೋನೇಷ್ಯಾದಲ್ಲಿ ಜಿ20 ಶೃಂಗ ಸಭೆ ಆರಂಭ: ಯುದ್ಧ ವಿನಾಶದ ಪಾಠ ಮಾಡಿದ ಪ್ರಧಾನಿ ಮೋದಿ

ಬೆಂಗಳೂರು. ನವೆಂಬರ್ 15, 2022 (www.justkannada.in): ಇಂಡೋನೇಷ್ಯಾದ ಬಾಲಿಯಲ್ಲಿ ಇಂದಿನಿಂದ ಜಿ20 ಶೃಂಗ ಸಭೆ ಆರಂಭವಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದಾರೆ.

ಇಂದು ಬೆಳಗ್ಗೆ ಶೃಂಗಸಭೆಗೆ ತೆರಳಿದ ಅವರನ್ನು ಇಂಡೋನೇಷಿಯಾದ ಅಧ್ಯಕ್ಷ ಜೋಕೊ ವಿಡೋಡೋ ಸ್ವಾಗತಿಸಿದ್ದಾರೆ.

ಈ ಶೃಂಗಸಭೆಯಲ್ಲಿ ಯುಎಸ್​ ಅಧ್ಯಕ್ಷ ಜೋ ಬೈಡೆನ್, ಯುಕೆ ಪ್ರಧಾನಿ ರಿಶಿ ಸುನಕ್​, ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್​ ಭಾಗವಹಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಗೈರಾಗಿದ್ದಾರೆ.

ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮೊಟ್ಟಮೊದಲು ರಷ್ಯಾ-ಉಕ್ರೇನ್​ ಯುದ್ಧದ ಬಗ್ಗೆ ಮಾತನಾಡಿದರು. ‘ಉಕ್ರೇನ್​​ನಲ್ಲಿ ಕದನ ವಿರಾಮ ಸೃಷ್ಟಿಸಿ, ರಾಜತಾಂತ್ರಿಕತೆ ಮರುಸ್ಥಾಪಿಸಲು ನಾವೆಲ್ಲ ಸೇರಿ ಹಾದಿ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಈ ಹಿಂದೆ ವಿಶ್ವಯುದ್ಧಗಳು ಜಗತ್ತನ್ನು ಅಲ್ಲೋಲಕಲ್ಲೋಲ ಮಾಡಿದವು. ವಿನಾಶ ಉಂಟು ಮಾಡಿದವು. ಅದಾದ ಮೇಲೆ ಅಂದಿನ ವಿಶ್ವ ನಾಯಕರು ಶಾಂತಿಪಥದಲ್ಲಿ ಸಾಗಲು ಗಂಭೀರವಾಗಿ ಚಿಂತನೆ ನಡೆಸಿ, ಅದೇ ಮಾರ್ಗದಲ್ಲಿ ನಡೆದರು. ಈಗ ನಮ್ಮ ಸರದಿ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.