ಟೋಲ್ ಶುಲ್ಕ ಹೆಚ್ಚಳ: ಇದು ಹಗಲು ದರೋಡೆಯಲ್ಲದೆ ಇನ್ನೇನು? ಸರ್ಕಾರಕ್ಕೆ ಜೆಡಿಎಸ್ ಚಾಟಿ.

ಬೆಂಗಳೂರು,ಫೆಬ್ರವರಿ,24,2023(www.justkannada.in): ಅಗತ್ಯ ವಸ್ತುಗಳ ಬೆಲೆ ಆಕಾಶದೆತ್ತರಕ್ಕೆ ಏರಿರುವ ಕಾಲದಲ್ಲಿ ಟೋಲ್ ಗಳ ಶುಲ್ಕವನ್ನು ಯಥೇಚ್ಛವಾಗಿ ಏರಿಕೆ ಮಾಡಿರುವುದು ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಎಷ್ಟೋ ಕಡೆ ಶುಲ್ಕದ ದರ ದ್ವಿಗುಣವಾಗಿದೆ. ಇದು ಹಗಲು ದರೋಡೆಯಲ್ಲದೆ ಇನ್ನೇನು? ಈ ರೀತಿ ಜನರ ಹಣ ಸುಲಿಯುವುದು ಕ್ರೌರ್ಯಕ್ಕೆ ಸಮ ಎಂದು ಡಬಲ್ ಇಂಜಿನ್ ಸರ್ಕಾರಕ್ಕೆ ಜೆಡಿಎಸ್ ಚಾಟಿ ಬೀಸಿದೆ.

ಟೋಲ್ ಶುಲ್ಕ ಹೆಚ್ಚಳ ಕುರಿತು ಟ್ವೀಟ್ ಮಾಡಿ ಕಿಡಿಕಾರಿರುವ ಜೆಡಿಎಸ್,  ಭಾರತೀಯ ಹೆದ್ದಾರಿ ಪ್ರಾಧಿಕಾರದ ನೋಟಿಫಿಕೇಷನ್ ಆಧಾರದ ಮೇಲೆ ಬಳಕೆದಾರರ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳೇ ಹೇಳಿದ್ದಾರೆ. ಈ ಮಟ್ಟದ ಹೊರೆ ಜನರ ಮೇಲೆ ಹಾಕಿದರೆ ಬದುಕುವುದಾದರೂ ಹೇಗೆ? ಹೇಳುವವರು ಕೇಳುವವರು ಯಾರು ಇಲ್ಲದ ಹಾಗಿದೆ‌ ಈ ನಿರ್ಧಾರ ಎಂದು ಟೀಕಿಸಿದೆ.

ದಶಪಥ, ಎಂಟು ಪಥ ಎಂದು ದೊಡ್ಡದಾಗಿ ಹೆದ್ದಾರಿ ಅಭಿವೃದ್ಧಿ ಎಂದು ಬೀಗುವ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಅದನ್ನೇ ಪುನರುಚ್ಚರಿಸುವ ರಾಜ್ಯ ಬಿಜೆಪಿ ಸರ್ಕಾರಗಳು ಸುಲಿಗೆಗಿಳಿದಿವೆ. ಯಾವ ಕಾರಣಕ್ಕೆ ಟೋಲ್ ಶುಲ್ಕ ಹೆಚ್ಚಿಸಿದ್ದು? ಅದಕ್ಕೇನಾದರೂ ತರ್ಕವಿದೆಯೆ? ರಕ್ತ ಹೀರುವ ಜಿಗಣೆಗಳಂತೆ ಸರ್ಕಾರ ವರ್ತಿಸುತ್ತಿರುವುದು ತರವಲ್ಲ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

ಈ ಟೋಲ್ ಹೆಚ್ಚಳ ಸಾರಿಗೆ ವ್ಯವಸ್ಥೆಯನ್ನೇ ಮುಳುಗಿಸಲಿದೆ. ನಿತ್ಯದ ಬದುಕಿಗೆ ಅಗತ್ಯವಾಗಿರುವ ವಸ್ತುಗಳ ಬೆಲೆ ಮತ್ತೆ ಏರಲಿದೆ. ಇದೇನು ಸರ್ಕಾರವಾ ಅಥವಾ ದಂಧೇಕೋರರ ಗುಂಪೊ ಎಂಬ ಅನುಮಾನ ಮೂಡುತ್ತಿದೆ. ಜನತೆಯ ಬದುಕಿನ ಮೇಲೆ ಪದೇ ಪದೇ ಬರೆ ಎಳೆಯುತ್ತಿದ್ದರೆ, ಬದುಕುವುದಾದರೂ ಹೇಗೆ? ಎಂದು ಜೆಡಿಎಸ್ ಪ್ರಶ್ನಿಸಿದೆ.

Key words: Increase – toll –fees-JDS –outrage- Govt.