ನೆರೆ ಪೀಡಿತ ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ

ಬೆಂಗಳೂರು:ಆ-20: ಪ್ರವಾಹ, ಮಳೆಹಾನಿ ಪ್ರದೇಶದ ಕಾಲೇಜು ವಿದ್ಯಾರ್ಥಿಗಳಿಗೆ ಉಂಟಾಗಿರಬಹುದಾದ ಆಘಾತದಿಂದ ಹೊರಬರುವಂತಾಗಲು ನಿಮ್ಹಾನ್ಸ್‌ ವತಿಯಿಂದ ಕೌನ್ಸೆಲಿಂಗ್‌ ನೀಡಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.

ಇಲಾಖೆ ಹಾಗೂ ನಿಮ್ಹಾನ್ಸ್‌ ಜತೆಯಾಗಿ ನಡೆಸುತ್ತಿರುವ ಯುವ ಸ್ಪಂದನ ಕಾರ್ಯಕ್ರಮದ ಮೂಲಕ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಮನ ಶಾಸ್ತ್ರಜ್ಞರಿಂದ ಕೌನ್ಸೆಲಿಂಗ್‌ ನೀಡಿ ಆತ್ಮಸ್ಥೈರ್ಯ ತುಂಬಲಾಗುತ್ತದೆ.

ಹಾಗೆಯೇ ವಿದ್ಯಾರ್ಥಿಗಳಿಗೆ ಕಾಲೇಜುಗಳಿಂದಲೇ ಅಗತ್ಯ ಸಹಕಾರ ನೀಡಲು ಹಾಗೂ ಮನೋಸ್ಥೈರ್ಯ ತುಂಬಲು ಸ್ಥಳೀಯವಾಗಿ ಅಗತ್ಯವೆನಿಸುವ ಕ್ರಮಗಳನ್ನು ವಿಶ್ವವಿದ್ಯಾಲಯ, ಸಂಯೋಜಿತ ಕಾಲೇಜುಗಳು, ಕಾಲೇಜು ಶಿಕ್ಷಣ ಇಲಾಖೆ, ಎನ್‌ಸಿಸಿ ನಿರ್ದೇಶನಾಲಯದಿಂದ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.

ಬಯಸಿದ ಕಾಲೇಜಲ್ಲಿ ಪ್ರವೇಶ: ಪ್ರವಾಹ ಪೀಡಿತ ಪ್ರದೇಶದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣಕ್ಕಾಗಿ ಸುರಕ್ಷಿತ ಸ‚§ಳಗಳಿಗೆ ಸ್ಥಳಾಂತರಗೊಳಿಸಲು ಬಯಸಿದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಬಯಸಿದ ಕಾಲೇಜುಗಳಲ್ಲಿ ಪ್ರವೇಶಾತಿ ನೀಡಿ, ಹಾಸ್ಟೆಲ್ ಸೌಲಭ್ಯ ಒದಗಿಸಬೇಕು. ವಿಶೇಷ ತರಗತಿ ನಡೆಸುವ ಮೂಲಕ ಪಠ್ಯಕ್ರಮಗಳನ್ನು ಪೂರ್ಣಗೊಳಿಸಲು ನಿರ್ದೇಶಿಸಿದೆ.

ಪ್ರವಾಹ ಹಾಗೂ ಮಳೆ ಹಾನಿಯಿಂದಾಗಿ ನೀರು ಪಾಲಾಗಿರಬಹುದಾದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಮಾಣ ಪತ್ರಗಳು, ಪುಸ್ತಕ, ಬ್ಯಾಗ್‌, ಇತ್ಯಾದಿ ಅಗತ್ಯ ವಸ್ತುಗಳನ್ನು ಅವರಿಗೆ ಉಚಿತವಾಗಿ ನೀಡುವ ಕೆಲಸ ಮಾಡಬೇಕು. ಪ್ರವಾಹ ಪೀಡಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅಗತ್ಯ ಸಾರಿಗೆ ವ್ಯವಸ್ಥೆ ಮತ್ತು ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಬೇಕು ಎಂದು ಖಡಕ್‌ ಸೂಚನೆ ಇಲಾಖೆ ನೀಡಿದೆ.

ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಇಲಾಖೆ ಮತ್ತು ಆಯಾ ವಿವಿಗಳು ತೆಗೆದುಕೊಳ್ಳಬೇಕಾದ ಎಲ್ಲ ಕ್ರಮದ ಬಗ್ಗೆಯೂ ಶಿವಮೊಗ್ಗ, ಮೈಸೂರು, ಮಂಗಳೂರು, ಧಾರವಾಡ, ಕಲಬುರಗಿ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರಿಗೆ ಸ್ಪಷ್ಟವಾಗಿ ತಿಳಿಸಿದ್ದೇವೆ. ಇವರು ತಮ್ಮ ವ್ಯಾಪ್ತಿಯ ಅಧಿಕಾರಿಗಳಿಗೆ, ಪ್ರಾಂಶುಪಾಲರಿಗೆ ಮಾಹಿತಿ ನೀಡಿ, ಅನುಷ್ಠಾನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಂದ ದೂರು ಬಾರದಂತೆ ಎಚ್ಚರ ವಹಿಸಲು ಸೂಚಿಸಿದ್ದೇವೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರೊ. ಎಸ್‌. ಮಲ್ಲೇಶ್ವರಪ್ಪ ‘ಉದಯವಾಣಿ’ಗೆ ತಿಳಿಸಿದರು.

ಹೇಗೆ ನಡೆಯಲಿದೆ ಕೌನ್ಸೆಲಿಂಗ್‌?
ಕಾಲೇಜು ಪ್ರಾಧ್ಯಾಪಕರು ಹಾಗೂ ಉಪನ್ಯಾಸಕರ ಮೂಲಕ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳ ವಿದ್ಯಾರ್ಥಿಗಳ ಯೋಗಕ್ಷೇಮ ನೋಡಿಕೊಂಡು, ಸಂತ್ರಸ್ತರಿಗೆ ಹೆಚ್ಚಿನ ಆತ್ಮಸ್ಥೈರ್ಯ ತುಂಬುವ ಕೆಲಸ ಆರಂಭಿಸಿದೆ. ಸಂಬಂಧಪಟ್ಟ ಜಿಲ್ಲಾ ವ್ಯಾಪ್ತಿ ಯಲ್ಲಿರುವ ವಿಶ್ವವಿದ್ಯಾಲಯಗಳು, ಸಂಯೋಜಿತ ಕಾಲೇಜುಗಳಲ್ಲಿನ ಎನ್‌ಎಸ್‌ಎಸ್‌ ಹಾಗೂ ಎನ್‌ಸಿಸಿ ಕ್ಯಾಂಪ್‌ಗ್ಳನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆಯೋಜಿಸಬೇಕು. ಈ ಮೂಲಕ ಪ್ರವಾಹ ಪೀಡಿತ ಹಾಗೂ ಮಳೆಹಾನಿಯಾಗಿರುವ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ತುರ್ತಾಗಿ ಕೈಗೊಳ್ಳಬೇಕು. ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬಲು ಜಿಲ್ಲಾಡಳಿತಗಳು ಕೈಗೊಳ್ಳುವ ಪುನರ್‌ ವಸತಿ ಕಾರ್ಯಗಳಲ್ಲಿ ಅಗತ್ಯ ಸಹಕಾರ ನೀಡುವಂತೆ ಜಂಟಿ ನಿರ್ದೇಶಕರ ಮೂಲಕ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರುಗಳಿಗೆ ಇಲಾಖೆ ಸೂಚನೆ ನೀಡಿದೆ.
ಕೃಪೆ:ಉದಯವಾಣಿ

ನೆರೆ ಪೀಡಿತ ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ

flood-rainfall-area-college-student-help-to-nimhans