ಬೋಧಕರ ನಿಯೋಜನೆ ಗೋಲ್ಮಾಲ್?: ‘ಸಿ’ ವಲಯದಲ್ಲಿ ಪ್ರಾಧ್ಯಾಪಕರೇ ಇಲ್ಲ, ಬೆಂಗಳೂರಿನತ್ತ ದಂಡು

ಬೆಂಗಳೂರು:ಆ-27: ಬೋಧಕರ ಕೊರತೆಯಿಂದ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಅಡ್ಡಿಯಾಗುವುದನ್ನು ತಪ್ಪಿಸಲು 2017ರಲ್ಲಿ ‘ಸಿ’ ವಲಯಕ್ಕೆ ಸುಮಾರು 2,300 ಪ್ರಾಧ್ಯಾಪಕರನ್ನು ನೇಮಿಸಲಾಗಿದೆಯಾದರೂ ನಿಯೋಜನೆ ಹೆಸರಲ್ಲಿ ತಂಡೋಪತಂಡವಾಗಿ ದಕ್ಷಿಣ ಕರ್ನಾಟಕದತ್ತ ಬರುತ್ತಿದ್ದಾರೆ. ಪರಿಣಾಮ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಪದವಿ ಕಾಲೇಜುಗಳಲ್ಲಿ ಅನೇಕ ವಿಷಯ ಬೋಧಿಸಲು ಪ್ರಾಧ್ಯಾಪಕರೇ ಇಲ್ಲದಂತಾಗಿದೆ.

ಕಡಿಮೆ ಕಾರ್ಯಭಾರವಿರುವ ಕಡೆಯಿಂದ ಹೆಚ್ಚು ಕಾರ್ಯಭಾರ ಇರುವತ್ತ ಪ್ರಾಧ್ಯಾಪಕರ ವರ್ಗಾವಣೆ/ನಿಯೋಜನೆ ಸಾಮಾನ್ಯ. ಹೀಗೆ ನೇಮಕಗೊಂಡ ಪ್ರಾಧ್ಯಾಪಕರು 5 ವರ್ಷ ಕಡ್ಡಾಯವಾಗಿ ಸಿ-ವಲಯದಲ್ಲಿ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಅವರನ್ನು ವರ್ಗಾವಣೆ ಮಾಡುವಂತಿಲ್ಲ. ಆದರೆ, ಹೆಚ್ಚು ಕಾರ್ಯಭಾರವಿರುವ ಕಡೆಗಳಿಂದ ಕಡಿಮೆ ಕಾರ್ಯಭಾರವಿರುವತ್ತ ಹಲವರನ್ನು ನಿಯೋಜಿಸಲಾಗಿದೆ.

ಶೇ.80 ಬೆಂಗಳೂರಿನತ್ತ: ಮಹಾನಗರ ಮತ್ತು ಜಿಲ್ಲಾ ಕೇಂದ್ರಗಳಿಗೆ ಹೋಲಿಸಿದಲ್ಲಿ ತಾಲೂಕು ಕೇಂದ್ರಗಳ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಕಾರ್ಯಭಾರವೂ ಅಧಿಕ. ಆದರೆ, ನೇಮಕಗೊಂಡ ಶೇ.80 ಪ್ರಾಧ್ಯಾಪಕರು ಜಿಲ್ಲಾ ಕೇಂದ್ರ ಹಾಗೂ ಬೆಂಗಳೂರು ಸುತ್ತಮುತ್ತಲಿನ ಕಾಲೇಜುಗಳಿಗೆ ಬಂದಿದ್ದಾರೆ. ವಿಪರ್ಯಾಸವೆಂದರೆ, ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಕಾಲೇಜುಗಳಲ್ಲಿ ಕಾರ್ಯಭಾರದ ಒತ್ತಡವೇ ಇಲ್ಲ. ಅನೇಕರು ಪಾಠ ಮಾಡದೆ ಸಂಬಳ ಪಡೆಯುತ್ತಿದ್ದಾರೆ.

ಮೈತ್ರಿ ಸರ್ಕಾರದ ಅವಧಿಯಲ್ಲಿ ಸುಮಾರು 1 ಸಾವಿರ ಬೋಧಕ- ಬೋಧಕೇತರರು ಬೇಕಾದೆಡೆಗೆ ನಿಯೋಜನೆ ಗೊಂಡಿದ್ದಾರೆ. ಈ ಬಗ್ಗೆ ಅಂದಿನ ಸಿಎಂ ಕುಮಾರಸ್ವಾಮಿ, ಸಚಿವ ಜಿ.ಟಿ. ದೇವೇಗೌಡ ವಿರುದ್ಧ ಗರಂ ಆಗಿದ್ದರೂ ಸಚಿವರು ಕುರ್ಚಿಯಿಂದ ಕೆಳಗಿಳಿಯುವವರೆಗೂ ನಿಯೋಜನೆಗಳು ನಡೆದವು. ಬಹುತೇಕ ಪ್ರಾಧ್ಯಾಪಕರು 1.5ರಿಂದ 2 ಲಕ್ಷ ರೂ. ನೀಡಿ ನಿಯೋಜನೆ ಮಾಡಿಸಿಕೊಂಡಿದ್ದಾರೆ.

ಹೋರಾಟ ನಡೆಸುವ ಎಚ್ಚರಿಕೆ

‘ಸಿ’ ವಲಯದಿಂದ ನಡೆದಿರುವ ಎಲ್ಲ ನಿಯೋಜನೆಗಳನ್ನು ತಕ್ಷಣ ರದ್ದುಪಡಿಸಬೇಕು. ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡಬಾರದು. ತಕ್ಷಣ ಎಲ್ಲ ನಿಯೋಜನೆ ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಸರ್ಕಾರವನ್ನು ಎಚ್ಚರಿಸಿವೆ.
ಕೃಪೆ:ವಿಜಯವಾಣಿ

ಬೋಧಕರ ನಿಯೋಜನೆ ಗೋಲ್ಮಾಲ್?: ‘ಸಿ’ ವಲಯದಲ್ಲಿ ಪ್ರಾಧ್ಯಾಪಕರೇ ಇಲ್ಲ, ಬೆಂಗಳೂರಿನತ್ತ ದಂಡು
disruption-of-quality-education-in-colleges-due-to-shortage-of-instructors