ಫೇಕ್ ಸರ್ಟಿಫಿಕೇಟ್ ಸೃಷ್ಟಿ; ಭೂ ಕಬಳಿಕೆ ಸಂಚು – RTI ಕಾರ್ಯಕರ್ತನಿಂದ ಬಯಲು.

ಮೈಸೂರು, ಸೆಪ್ಟಂಬರ್, 13,2022(www.justkannada.in) ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ  ಆಸ್ತಿ ಲಪಟಾಯಿಸಲು ಭೂಗಳ್ಳರು ಸಂಚು ನಡೆಸುತ್ತಿರುವ ಪ್ರಕರಣಗಳು ಮೈಸೂರು ಸುತ್ತಮುತ್ತ ದಿನೇ ದಿನೇ ಹೆಚ್ಚಾಗುತ್ತಿವೆ.  ಈ ನಡುವೆ ವಾರಸುದಾರರಿಲ್ಲದ ಕೋಟ್ಯಾಂತರ ರೂ. ಬೆಲೆ ಬಾಳುವ ಭೂಮಿ ಕಬಳಿಸಲು ಪತಿಷ್ಠಿತ ಕುಟುಂಬ ಸಂಚು ನಡೆಸುತ್ತಿರುವುದನ್ನು ಮೈಸೂರಿನ ಬೃಂದಾವನ ಬಡಾವಣೆ ನಿವಾಸಿ ಆರ್‌ಟಿಐ ಕಾರ್ಯಕರ್ತ ಬಿ.ಎನ್. ನಾಗೇಂದ್ರ ಬಯಲಿಗೆಳೆದಿದ್ದಾರೆ.

ಈ ಹಿನ್ನೆಲೆಯಲ್ಲಿ, ಅಕ್ರಮವಾಗಿ ಮಾಡಿಕೊಂಡಿದ್ದ ಖಾತೆ ರದ್ದುಪಡಿಸಿರುವ ಮೈಸೂರು ತಾಲೂಕು ಹೆಚ್ಚುವರಿ ವಿಭಾಗ ತಹಶೀಲ್ದಾರ್ ಎನ್.ವಿಶ್ವನಾಥ್‌, ಫೋರ್ಜರಿ ಮಾಡಿ ಅಕ್ರಮವಾಗಿ ಖಾತೆ ಮಾಡಿಸಿ ಕೊಂಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೆ.7ರಂದು ಆದೇಶ ಹೊರಡಿಸಿದ್ದಾರೆ.

ಮೈಸೂರು ತಾಲೂಕು, ವರುಣಾ ಹೋಬಳಿ, ಲಲಿತಾದ್ರಿಪುರ ಗ್ರಾಮದ ಸರ್ವೆ ನಂಬರ್ 206ರಲ್ಲಿ 3.04 ಎಕರೆ ವಿಸ್ತೀರ್ಣದ ಜಮೀನಿನ ಖಾತಾ ಬದಲಾವಣೆಗಾಗಿ 2021ರ ಏಪ್ರಿಲ್ 26ರಂದು ಬೆಂಗಳೂರು ನಗರ ನಿವಾಸಿ ಸುಧೀರ್‌ ಜಯಗೋಪಾಲ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ, ಆದೇಶಿಸಿದೆ ಎಂದು ಹೆಚ್ಚುವರಿ ತಹಶೀಲ್ದಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಕಚೇರಿಯ ಭೂಮಿ ಶಾಖೆಯಲ್ಲಿ ನಮೂದಿಸಿರುವ ಎಂಆರ್‌ಹೆಚ್ 28/2020-2021 (ವಹಿವಾಟು ಸಂಖ್ಯೆ 81)ರಲ್ಲಿನ ನಡಾವಳಿಯನ್ನು ರದ್ದುಪಡಿಸಲಾಗಿದ್ದು, ಫೋರ್ಜರಿ ದಾಖಲೆ ಸೃಷ್ಟಿಸಿ, ಅಕ್ರಮ ಖಾತೆ ಮಾಡಿಸಿಕೊಳ್ಳಲು ಯತ್ನಿ ಸುತ್ತಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅಗತ್ಯ ಕ್ರಮವಹಿಸುವಂತೆ ವಿಶ್ವನಾಥ್ ಅವರು ವರುಣಾ ಹೋಬಳಿ ರಾಜಸ್ವ ನಿರೀಕ್ಷಕರಿಗೆ ಆದೇಶಿಸಿದ್ದಾರೆ.

ಅಲ್ಲದೇ ಸೆ.2ರಂದು ಮೈಸೂರು ಉಪ ವಿಭಾಗಾಧಿಕಾರಿಗಳಿಗೆ ಪತ್ರ ಬರೆದಿರುವ ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್‌.ಮಂಜುನಾಥಸ್ವಾಮಿ, ಮೈಸೂರು ತಾಲೂಕು ವರುಣಾ ಹೋಬಳಿ, ಲಲಿತಾದ್ರಿಪುರ ಗ್ರಾಮದ ಸರ್ವೆ ನಂಬರ್ 206ರಲ್ಲಿ 3.21 ಎಕರೆ ಜಮೀನು ಹಾಗೂ ತಿ.ನರಸೀಪುರ ತಾಲ್ಲೂಕು ತಿರುಮಕೂಡಲು ಗ್ರಾಮದ ಸರ್ವೆ ನಂಬರ್ 55/2ರಲ್ಲಿ 22 ಗುಂಟೆ, 55/6ರಲ್ಲಿ 8  ಗುಂಟೆ ಜಮೀನುಗಳಿಗೆ ಸಂಬಂಧಿಸಿದಂತೆ ತಾಲೂಕು ಕಚೇರಿಗಳ ಸಿಬ್ಬಂದಿ ಭೂಗಳ್ಳರ ಜೊತೆ ಶಾಮೀಲಾಗಿ ಅಕ್ರಮ ದಾಖಲೆ ಸೃಷ್ಟಿಸಿ ಖಾತೆ ಮಾಡಿರುವ ಬಗ್ಗೆ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆರ್‌ಟಿಐ ಕಾರ್ಯಕರ್ತ ಬಿ.ಎನ್‌.ನಾಗೇಂದ್ರ ಅವರ ಮನವಿಯಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಉಲ್ಲೇಖಿಸಲಾದ ಜಮೀನುಗಳಿಗೆ ಸಂಬಂಧಿಸಿದಂತೆ ಅಕ್ರಮವಾಗಿ ಖಾತೆಗೆ ಕ್ರಮ ವಹಿಸಲಾಗಿರುವ ವಂಶವೃಕ್ಷ, ಮರಣ ಪ್ರಮಾಣ ಪತ್ರ ಹಾಗೂ ಇನ್ನಿತರ ದಾಖಲೆಗಳ ನೈಜತೆ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಂಡು ತಮಗೆ ಮಾಹಿತಿ ನೀಡುವಂತೆ ಡಾ.ಮಂಜುನಾಥಸ್ವಾಮಿ, ಉಪ ವಿಭಾಗಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಸದರಿ ಲಲಿತಾದ್ರಿಪುರ ಸ.ನಂ.206ರ 3.21 ಎಕರೆ ಜಮೀನು ಮೂಲತಃ ಸರ್ಕಾರಿ ಬೀಳು ಆಗಿದ್ದು, ನಂತರ ಆರ್ ಆರ್ 379ರ ನಡಾವಳಿ ಮೂಲಕ ಅದು ಮೇಲುಕೋಟೆ ವಜ್ರಂ ಶಿಂಗೈಯ್ಯಂಗಾರ್ ಎಂಬುವರಿಗೆ ಬಂದ ಸ್ವತ್ತಾಗಿದೆ. ಆರ್‌ಟಿಸಿಯಲ್ಲೂ ಅವರ ಹೆಸರು ನಮೂದಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ನಾಗೇಂದ್ರ ಆಗಸ್ಟ್ 22ರಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಆದರೆ, ಆ ಆಸ್ತಿ ಕಬಳಿಸಲು ತಿ.ನರಸೀಪುರ ಮಾಜಿ ಶಾಸಕ ಶ್ರೀನಿವಾಸ ಅಯ್ಯಂಗಾರ್ ಅವರ ಬೆಂಗಳೂರು ನಿವಾಸಿ ಲಲಿತಾ ಜೈ ಗೋಪಾಲ್‌ ಹಾಗೂ ಸದಸ್ಯರು ಮೈಸೂರು ವಾಸಿಗಳೆಂದು ವಿಳಾಸ ನೀಡಿ ವಂಶವೃಕ್ಷ ಪಡೆದು ಪೌತಿ ಖಾತೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದಿರುವ ನಾಗೇಂದ್ರ, ನಕಲಿ ದಾಖಲೆಗಳನ್ನು ಸಲ್ಲಿಸಿದ್ದರೂ, ಮೂಲ ಭೂ ಮಾಲೀಕರ ಮರಣ ಪ್ರಮಾಣ ಪತ್ರ: ವಂಶವೃಕ್ಷ ಪಡೆಯದೇ ಚೆಕ್ ಲಿಸ್ಟ್ ತಯಾರಿಸಿ ಪೌತಿ ಖಾತೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಾರಸುದಾರರಿಲ್ಲದ ಆಸ್ತಿ ಪತ್ತೆ ಮಾಡಿ ಮೈಸೂರು ಮತ್ತು ತಿ.ನರಸೀಪುರ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಭೂಗಳ್ಳರಿಗೆ ಪೌತಿ ಖಾತೆ ಮಾಡಲು ಮುಂದಾಗಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಅವರು ದೂರು ನೀಡಿದ್ದರ ಹಿನ್ನೆಲೆಯಲ್ಲಿ ತಾಲೂಕು ಹೆಚ್ಚುವರಿ ತಹಶೀಲ್ದಾರ್ ಕ್ರಮ ವಹಿಸಿ ಆದೇಶ ನೀಡಿದ್ದಾರೆ.

ಇತ್ತೀಚೆಗಷ್ಟೇ ನಕಲಿ ಸೀಲುಗಳನ್ನು ಬಳಸಿ ಫೋರ್ಜರಿ ದಾಖಲೆ ಸೃಷ್ಟಿಸಿಕೊಂಡು ಆಸ್ತಿಗಳನ್ನು ಪರಭಾರೆ ಮಾಡುತ್ತಿದ್ದ ಜಾಲವನ್ನು ಕುವೆಂಪುನಗರ ಠಾಣೆ ಪೊಲೀಸರು ರಾಮಕೃಷ್ಣನಗರದಲ್ಲಿ ಭೇದಿಸಿ ಮೂವನ್ನು ಬಂಧಿಸಿ ತನಿಖೆ ನಡೆಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Key words: Creation – fake certificate- Land-grab – RTI- activist-mysore