ಕೋವಿಡ್ -19 ಕಿಟ್ ಖರೀದಿಯಲ್ಲಿ ಅವ್ಯವಹಾರ: ಬಹಿರಂಗ ಚರ್ಚೆಗೆ ಸಿದ್ಧ- ಸಚಿವ ಎಸ್.ಟಿ ಸೋಮಶೇಖರ್ ಗೆ ಸವಾಲು ಹಾಕಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್…

ಮೈಸೂರು,ಜು,11,2020(www.justkannada.in): ಕೋವಿಡ್19 ನಿಯಂತ್ರಣ ಸಂಬಂಧ ವೈದ್ಯಕೀಯ ಪರಿಕರಗಳನ್ನು ಕೊಂಡುಕೊಳ್ಳುವಾಗ ಭಾರೀ ಅವ್ಯವಹಾರ ನಡೆದಿದೆ.  ಈ ಸಂಬಂಧ ಬಹಿರಂಗ ಚರ್ಚೆಗೆ ನಾವು ಸಿದ್ಧ ಎಂದು ಸಚಿವ ಎಸ್.ಟಿ ಸೋಮಶೇಖರ್ ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು ಹಾಕಿದರು.jk-logo-justkannada-logo

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕೋವಿಡ್19 ನಿಯಂತ್ರಣ ಸಂಬಂಧ ವೈದ್ಯಕೀಯ ಪರಿಕರಗಳನ್ನು ಕೊಂಡುಕೊಳ್ಳುವಾಗ ಭಾರೀ ಅವ್ಯವಹಾರ ನಡೆದಿದೆ. ಕಳೆದ ಏಪ್ರಿಲ್ ಮೇ ಜೂನ್ ತಿಂಗಳಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಸುಮಾರು 3,322 ಕೋಟಿ ಹಣ ಖರ್ಚು ಮಾಡಲಾಗಿದ್ದು, ಇದರಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

10 ಲಕ್ಷ ಎನ್-95 ಮಾಸ್ಕ್ ಖರೀದಿಸಲು 29.5 ಕೋಟಿ ಹಣವನ್ನು ನೀಡಲು ತೀರ್ಮಾನಿಸಿದ್ದರೂ, ದಿಢೀರನೇ 46 ಕೋಟಿಗೆ ಹೆಚ್ಚಿಸಿರುವುದರಿಂದ ಸುಮಾರು 16 ಕೋಟಿಯಷ್ಟು ಅವ್ಯವಹಾರ ನಡೆದಿದೆ. ಒಂದು ಎನ್-95 ಮಾಸ್ಕ್ ಮಾರುಕಟ್ಟೆ ಬೆಲೆ 65 ರೂಪಾಯಿಯಾಗಿದೆ. ಆದರೆ ಒಂದು ಮಾಸ್ಕ್ ಗೆ 460 ರೂಪಾಯಿಗಳನ್ನು ನೀಡಲಾಗಿದೆ‌. ಮಾರುಕಟ್ಟೆ ಬೆಲೆಗಿಂತ ಎಂಟು ಪಟ್ಟು ಹೆಚ್ಚಿಸಿರುವುದರಿಂದ ಭ್ರಷ್ಟಾಚಾರ ಆಗಿರುವುದು ಶೇಕಡ 100 ರಷ್ಟು ಖಚಿತವಾಗಿದೆ. ಮೊದಲು 464.81 ಕೋಟಿ ರೂಪಾಯಿ ಮೊತ್ತದ ಸಾಮಗ್ರಿ, ಉಪಕರಣಗಳನ್ನು ಖರೀದಿಸಲು ಪ್ರಸ್ತಾಪಿಸಿದ್ದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಆನಂತರ 815.85 ಕೋಟಿ ಮೊತ್ತದಲ್ಲಿ ಉಪಕರಣಗಳನ್ನು ಖರೀದಿಸಲು ಪ್ರಸ್ತಾಪಿಸಿದೆ. ಈ ಮೊತ್ತವೂ ಎರಡು ಪಟ್ಟು ಹೆಚ್ಚಾಗಿದೆ. ಈ ಹಣವನ್ನು ಪಿಪಿಇ ಕಿಟ್ಸ್, ಸ್ಯಾನಿಟೈಸರ್ ಗಳನ್ನು ಖರೀದಿಸಲು ಉಪಯೋಗಿಸಲಾಗಿದೆ ಎಂದು ಹೇಳಲಾಗಿದೆ. ಇದೇ ರೀತಿ 78 ರೂಪಾಯಿಯ 500 ಎಂ‌.ಎಲ್ ಸ್ಯಾನಿಟೈಸರ್ ನ್ನು 600 ರೂಪಾಯಿಗೆ, 3,500 ರೂಪಾಯಿಯ ಒಂದು ಥರ್ಮಲ್ ಸ್ಕ್ಯಾನರ್ ನ್ನು 9 ಸಾವಿರ ರೂಪಾಯಿಗೆ ಖರೀದಿಸಲಾಗಿದೆ ಎಂದು ಎಂ.‌ ಲಕ್ಷ್ಮಣ್ ಕಿಡಿಕಾರಿದರು.

ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಸವಾಲು…

ಕೋವಿಡ್ ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಇದುವರೆಗೆ ಕೇವಲ 550 ಕೋಟಿ ಖರ್ಚು ಮಾಡಿದೆ. ಈಗಿರುವಾಗ 3200 ಕೋಟಿ ಅವ್ಯವಹಾರ ನಡೆಯಲು ಹೇಗೆ ಸಾಧ್ಯ ? ಎಂಬ ಪ್ರಶ್ನಿಸಿದ್ದ ಸಚಿವ ಸೋಮಶೇಖರ್ ಗೆ ತಿರುಗೇಟು ನೀಡಿರುವ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಸಚಿವ ಸೋಮಶೇಖರ್ ಹೇಳುತ್ತಿರುವುದು ಬರೀ ಸುಳ್ಳು. ಸೋಮಶೇಖರ್ ಬಿಜೆಪಿಗೆ ಹೋದ ನಂತರ ಸುಳ್ಳು ಹೇಳುವುದನ್ನು ಕಲಿತಿದ್ದಾರೆ. ಈ ವಿಚಾರದಲ್ಲಿ ಸಚಿವ ಸೋಮಶೇಖರ್ ಇಂದು ಸಂಜೆ ಐದು ಗಂಟೆಯೊಳಗೆ ಸಭೆ ಕರೆದು ಚರ್ಚಿಸಲಿ. ಬಹಿರಂಗ ಚರ್ಚೆಗೆ ನಾವು ಸಿದ್ದ ಎಂದು ಸಚಿವ ಸೋಮಶೇಖರ್ ಗೆ ಸವಾಲು ಹಾಕಿದರು.covid-19-kit-bribe-kpcc-spokesperson-m-laxman-mysore

ಕೇಂದ್ರ ಸರ್ಕಾರ ಆರು ಪ್ರಶ್ನೆಗಳಿಗೆ ಉತ್ತರಿಸಬೇಕು- ಕೆಪಿಸಿಸಿ ವಕ್ತಾರೆ ಮಂಜುಳ ಮಾನಸ ಆಗ್ರಹ…

ಹಾಗೆಯೇ ಕೆಪಿಸಿಸಿ ವಕ್ತಾರೆ ಮಂಜುಳ ಮಾನಸ ಮಾತನಾಡಿ,  ಕೇಂದ್ರ ಸರ್ಕಾರ ಆರು ಪ್ರಶ್ನೆಗಳಿಗೆ ಉತ್ತರಿಸಬೇಕು. ಒಂದು ಲಕ್ಷ ಕೋಟಿಗೂ ಅಧಿಕ ಸಾರ್ವಜನಿಕರಿಂದ ಮತ್ತು ಚೀನಾ ಕಂಪನಿಗಳಿಂದ ಪಡೆದಿರುವ ದೇಣಿಗೆ ಬಗ್ಗೆ ಬಹಿರಂಗ ಮಾಡಬೇಕು. ಯಾವ ಯಾವ ಮೂಲಗಳಿಂದ ಹಣ ಬಂದಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು. ಆರ್.ಎಸ್.ಎಸ್ ಸಂಸ್ಥೆಗೆ ಇಲ್ಲಿಯವರೆಗೆ ಯಾರ್ಯಾರು ಹಣ ನೀಡಿದ್ದಾರೆ ಹಾಗೂ ಎಷ್ಟು ಹಣ ಸಂಗ್ರಹವಾಗಿದೆ ಮತ್ತು ಯಾವುದಕ್ಕೆ ಬಳಸಿಕೊಳ್ಳಲಾಗಿದೆ ಎಂಬುದನ್ನು ಬಹಿರಂಗ ಪಡಿಸುತ್ತೀರಾ? ಕಾಂಗ್ರೆಸ್ ಮುಖಂಡರುಗಳಿರುವ ಟ್ರಸ್ಟ್ ಗಳ ತನಿಖೆಗೆ ಆದೇಶ ಮಾಡಿರುವಂತೆಯೇ ವಿವೇಕಾನಂದ ಫೌಂಡೇಶನ್, ಇಂಡಿಯಾ ಫೌಂಡೇಶನ್ ಬಗ್ಗೆಯೂ ತನಿಖೆಗೆ ಆದೇಶಿಸುವಿರಾ? ಎಂದು ಕೇಳಿದರು.

ಓವರ್ ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ ಎಂಬ ಸಂಸ್ಥೆಗೆ ಯಾರ್ಯಾರು ಎಷ್ಟು ಹಣ ನೀಡಿದ್ದಾರೆ, ಚೀನಾ ದೇಶದಿಂದ ಎಷ್ಟು ದೇಣಿಗೆ ಬಂದಿದೆ ಮತ್ತು ಏತಕ್ಕಾಗಿ ಉಪಯೋಗಿಸಲಾಗಿದೆ ಎಂಬುದನ್ನು ಬಹಿರಂಗ ಮಾಡುತ್ತೀರಾ?. ಎಲೆಕ್ಟ್ರೋಲ್ ಬಾಂಡ್ಸ್ ಮೂಲಕ ಬಿಜೆಪಿ ಪಕ್ಷಕ್ಜೆ ಸುಮಾರು 10 ಸಾವಿರ ಕೋಟಿ ಹಣ ದೇಣಿಗೆ ರೂಪದಲ್ಲಿ ನೀಡಿರುವುದರ ಬಗ್ಗೆ ತನಿಖೆ ನಡೆಸುವಿರಾ? ಬಿಜೆಪಿ ಖಾತೆಯಲ್ಲಿ 2015ರಲ್ಲಿ 570 ಕೋಟಿ ಹಣವಿತ್ತು, ಇದೀಗ ಸುಮಾರು 3,400 ಕೋಟಿಗೇರಿದೆ. ಇಷ್ಟೊಂದು ಹಣ ಹೇಗೆ ಹೆಚ್ಚಾಯಿತು ಎಂಬುದರ ಕುರಿತು ತನಿಖೆ ನಡೆಸುವಿರಾ? ಎಂದು ಕೇಂದ್ರ ಸರ್ಕಾರದ ಮುಂದೆ ಕೆಪಿಸಿಸಿ ವಕ್ತಾರೆ ಮಂಜುಳ ಮಾನಸ ಆರು ಪ್ರಶ್ನೆಗಳನ್ನಿಟ್ಟರು.

Key words: covid-19- kit-bribe-KPCC- spokesperson –M. Laxman-mysore