ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಲು ಕಾಂಗ್ರೆಸ್ ನಿರ್ಧಾರ.

ರಾಮನಗರ,ಜನವರಿ,13,2022(www.justkannada.in):  ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಹೆಚ್ಚಳವಾಗುತ್ತಿದ್ದು ಮೇಕೆದಾಟಯ ಯೋಜನೆ ಜಾರಿಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆ ನಿಲ್ಲಿಸಲು ಒತ್ತಡ ಬಂದ ಹಿನ್ನೆಲೆಯಲ್ಲಿ ಇದೀಗ ಪಾದಯಾತ್ರೆ ಮೊಟಕುಗೊಳಿಸಲು ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾದಯಾತ್ರೆ ಸ್ಥಗಿತಗೊಳಿಸುವ ನಿರ್ಧಾರ ಮಾಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಕೈ ನಾಯಕರು ಈ ವಿಚಾರವನ್ನ ಪ್ರಕಟಿಸಲಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಈ ಹಿನ್ನೆಲೆಯಲ್ಲಿ ಪಾದಯಾತ್ರೆ ಸ್ಥಗಿತಕ್ಕೆ ಕಾಂಗ್ರೆಸ್ ಬಳಿ ಸರ್ಕಾರ ಮನವಿ ಮಾಡಿತ್ತು. ಅಲ್ಲದೇ ಪಾದಯಾತ್ರೆ ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿದ್ದು ನಿನ್ನೆ ಸರ್ಕಾರ ಮತ್ತು ಕಾಂಗ್ರೆಸ್ ಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿತ್ತು.

ಈ ನಡುವೆ ಇಂದು ಎಐಸಿಸಿ ಸಹ ಪಾದಯಾತ್ರ ಸ್ಥಗಿತಗೊಳಿಸಲು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮೊಟಕುಗೊಳಿಸಲು ನಿರ್ಧರಿಸಿದ್ದಾರೆ. ಇನ್ನು ಕೊರೋನಾ ಮುಗಿದ ಬಳಿಕ ರಾಮನಗರದಿಂದಲೇ ಪಾದಯಾತ್ರೆ ಮುಂದುವರೆಸುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

Key words: Congress-padayatre- breakdown- decision