ದಶಕಗಳ ಹಿಂದೆ ಮೈಸೂರಲ್ಲಿ ಮಗು ಸಾಕಿದವರಿಗೆ ಕೋಟಿ ರೂ. ನೆರವು : ಜಾಹಿರಾತು ಮೂಲಕ ಮನೆಗೆಲಸದವರ ಪತ್ತೆಗೆ ಯತ್ನಿಸಿದ ಅಮೇರಿಕಾ ಸಂಜಾತ ವ್ಯಕ್ತಿ.

 

ಮೈಸೂರು, ಜ.19, 2020 : (www.justkannada.in news) : ಕೃತಜ್ಞತೆ, ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವ ಈ ಕಾಲಘಟ್ಟದಲ್ಲಿ, ದಶಕಗಳ ಹಿಂದೆ ಸೇವೆ ಸಲ್ಲಿಸಿದ್ದ ಮನೆಗೆಲಸದವರಿಗೆ ನೆರವಾಗುವ ಸಲುವಾಗಿ ವಿದೇಶದಲ್ಲಿ ನೆಲೆಸಿರುವ ವ್ಯಕ್ತಿ ಜಾಹಿರಾತು ನೀಡಿರುವುದು ನಂಬಲಸಾಧ್ಯ.

ಆದರೆ ಈ ವಿಶೇಷಕ್ಕೆ ಮೈಸೂರು ಸಾಕ್ಷಿಯಾಗಿದೆ. ಅಮೇರಿಕಾದಲ್ಲಿ ನೆಲೆಸಿರುವ ಪ್ರಸಾದ್ ಎಂಬುವವರು ಸ್ಥಳೀಯ ಪತ್ರಿಕೆ ‘ ಆಂದೋಲನ ‘ ಕ್ಕೆ ಜಾಹಿರಾತು ನೀಡಿದ್ದು, ಈ ಪ್ರಕಟಣೆಯಲ್ಲಿ ತಮ್ಮ ಮಗನನ್ನು ನೋಡಿಕೊಂಡಿದ್ದ ನಾಲ್ವರು ಕೆಲಸದವ ಪತ್ತೆಗೆ ಮನವಿ ಮಾಡಿದ್ದಾರೆ. ಈ ನಾಲ್ವರ ಸೇವೆಯನ್ನು ಸ್ಮರಿಸಿಕೊಂಡಿರುವ ಪ್ರಸಾದ್, ಈ ಕುಟುಂಬದವರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ಅವರೇ ಜಾಹಿರಾತಿನಲ್ಲಿ ಪ್ರಕಟಣೆ ನೀಡಿರುವಂತೆ ಒಂದು ಕೋಟಿ ರೂ.ಗೂ ಅಧಿಕ ಮೊತ್ತದ ಹಣವನ್ನು ಇವರಿಗೆ ಹಾಗೂ ಇವರ ಕುಟುಂಬ ವರ್ಗಕ್ಕೆ ವ್ಯಯಿಸಲು ಮುಂದಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಪತ್ರಿಕೆಯಲ್ಲಿ ಪ್ರಕಟವಾದ ಜಾಹಿರಾತಿನ ಪ್ರಕಾರ, ಕೆಲ ವರ್ಷಗಳ ಹಿಂದೆ ಪ್ರಸಾದ್ ಅವರ ಅಮೇರಿಕಾದಲ್ಲಿ ಜನಿಸಿದ ನಾಲ್ಕು ವರ್ಷದ ಮಗ ಮೈಸೂರಿನಲ್ಲಿ ಇರಬೇಕಾಗಿತ್ತು. ಮಗನಿದ್ದ 11 ತಿಂಗಳುಗಳ ಕಾಲ ಮೈಸೂರಿನ ಶಾಂತಿ, ಆನಂದ್, ಮಮತ ಮತ್ತು ಸಂತೋಷ್ ಎಂಬ ನಾಲ್ವರು ಕೆಲಸದವರು ಅಕ್ಕರೆಯಿಂದ ನೋಡಿಕೊಂಡಿದ್ದರು. ಆತನ ಬೆಳವಣಿಗೆಗೆ ಸಹಕರಿಸಿದ್ದರು. ಇದಾದ ಬಳಿಕ ಅಮೇರಿಕಾದ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಅವರಿಂದ ಶೈಕ್ಷಣಿಕ ಸಾಧನೆಗೆ ಸಂಬಂಧಿಸಿದಂತೆ ಪ್ರಶಸ್ತಿ ಸ್ವೀಕರಿಸಲು ಪ್ರಸಾದ್ ಅವರ ಪುತ್ರ ತೆರಳಬೇಕಾಯಿತು. ಇದೀಗ ಆ ಬಾಲಕ ಪದವಿ ವ್ಯಾಸಂಗ ಮಾಡುತ್ತಿದ್ದು, ಬಾಲ್ಯದಲ್ಲಿ ಮೈಸೂರಿನಲ್ಲಿ ನೆರವಾದ ಮನೆಗೆಲಸದವರ ಪ್ರೀತಿಗೆ, ಆಧಾರಕ್ಕೆ ಪ್ರತಿಯಾಗಿ ನೆರವು ನೀಡಲು ಇಚ್ಛಿಸಿದ್ದಾನೆ.

ಆದ್ದರಿಂದಲೇ ಆ ಯುವಕನ ತಂದೆ ಪ್ರಸಾದ್, ಪತ್ರಿಕೆಗೆ ಜಾಹಿರಾತು ಮೂಲಕ ಪ್ರಕಟಣೆ ನೀಡಿದ್ದು ನಾಲ್ವರ ಹಳೆಯ ಫೋಟೋಗಳನ್ನು ಸಹ ಪ್ರಕಟಿಸಿದ್ದಾರೆ. ಈ ವ್ಯಕ್ತಿಗಳ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಂಪರ್ಕಿಸುವಂತೆ ದೂರವಾಣಿ ಸಂಖ್ಯೆಯನ್ನು ನೀಡಿದ್ದಾರೆ. ಈ ನಾಲ್ವರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ಒಂದು ಕೋಟಿ ರೂ.ಗೂ ಅಧಿಕ ಮೊತ್ತದ ನೆರವು ನೀಡುವುದು ತಮ್ಮ ಉದ್ದೇಶವಾಗಿದೆ ಎಂದು ಪ್ರಸಾದ್ ಹೇಳಿಕೊಂಡಿದ್ದಾರೆ.

key words : concern of gratitude-public-appeal-domestic.workers-mysore-american-born