ಮಹನೀಯರಿಗೆ ಅಪಮಾನ: ಬಿಜೆಪಿಗರೆ ನೀವು ತುಕ್ಡೆ ಗ್ಯಾಂಗಿನ ನಾಯಕರು –ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ.

ಶಿವಮೊಗ್ಗ,ಜೂನ್,15,2022(www.justkannada.in):  ಖಾಕಿ ಚೆಡ್ಡಿ ತೊಟ್ಟ ಬಿಜೆಪಿಯು ತಮ್ಮ ಎದುರಾಳಿಗಳನ್ನು ನಿಂದಿಸಲು ತುಕ್ಡೆಗ್ಯಾಂಗ್ ಎಂಬ ಪದವನ್ನು ಬಳಸುತ್ತದೆ. ನಿಜವಾದ ಟೂಲ್ ಕಿಟ್ ರಾಜಕಾರಣ ಅಥವಾ ಪ್ಯಾಕೇಜ್ ರಾಜಕಾರಣ ಮಾಡುತ್ತಿರುವ ಬಿಜೆಪಿಗೆ ಸಂಕಷ್ಟ ಬಂದಾಗಲೆಲ್ಲ ತುಕ್ಡೆ ಗ್ಯಾಂಗು ಎಂಬಂತಹ ಮಾಯಾವಿ ಪದಗಳನ್ನು ಪ್ಯಾಕೇಜಿನಂತೆ ಒಬ್ಬರಾದ ಮೇಲೆ ಒಬ್ಬರು ಬಳಸುತ್ತಾರೆ. ಬಿಜೆಪಿಗರೆ ನೀವು ತುಕ್ಡೆ ಗ್ಯಾಂಗಿನ ನಾಯಕರು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಪಠ್ಯಪುಸ್ತಕದ ಅಪಮೌಲ್ಯೀಕರಣ ಹಾಗೂ ನಾಡು, ನುಡಿಗೆ ಮಾಡಿರುವ ಅವಮಾನ ಖಂಡಿಸಿ ಕುವೆಂಪು ವಿಶ್ವಮಾನ ವೇದಿಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಸಾರಥ್ಯದಲ್ಲಿ ಶಿವಮೊಗ್ಗದ ಕುಪ್ಪಳಿಯಿಂದ ತೀರ್ಥಹಳ್ಳಿವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು. ವಿಧಾನ ಪರಿತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಾಹಿತಿಗಳಾದ ಪ್ರೊ.ಸಿದ್ದರಾಮಯ್ಯ, ನಾ.ಡಿಸೋಜಾ, ರೈತ ಪರ ಹೋರಾಟಗಾರ ಬಸವರಾಜಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಸಿದ್ಧರಾಮಯ್ಯ ಪತ್ರಿಕಾ ಹೇಳಿಕೆಯಲ್ಲಿ ಹೇಳಿರುವುದಿಷ್ಟು..

ಪಠ್ಯ ಪುಸ್ತಕ ಪರಿಷ್ಕರಣೆ ಪ್ರಕರಣದಿಂದ ಕಂಗೆಟ್ಟಿರುವ ಸರ್ಕಾರ ಮತ್ತು ಅದರ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ತಾವು ಸಚಿವರೆಂಬ ಜವಾಬ್ಧಾರಿಯನ್ನು ಮರೆತು ನಾಡೋಜ ಬರಗೂರು ರಾಮಚಂದ್ರಪ್ಪ ಮುಂತಾದ ದಮನಿತ ವರ್ಗಗಳ ಧ್ವನಿಗಳನ್ನು ಅವಮಾನಿಸಬೇಕೆಂದೆ ‘ತುಕ್ಡೆ ಗ್ಯಾಂಗ್’ ನವರು ಎಂದು ಅವಮಾನಿಸಿದ್ದಾರೆ ಎಂದು ಸಿದ‍್ಧರಾಮಯ್ಯ ಆರೋಪಿಸಿದರು.

ರೋಹಿತ್ ಚಕ್ರತೀರ್ಥ ಎಂಬ ರೋಗಿಷ್ಠ ಮನಸ್ಥಿತಿಯ, ಪ್ರಸ್ತುತ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯು ಉಸಿರಾಡುತ್ತಿರುವ ಜೀವಿಗಳಲ್ಲಿ ಬ್ರಾಹ್ಮಣರು ಶ್ರೇಷ್ಠರು, ಬ್ರಾಹ್ಮಣರಲ್ಲಿ ಮಾಧ್ವರು ಶ್ರೇಷ್ಠರು ಎಂಬ ನಿಲುವಿನಲ್ಲಿ ಪಾಠಗಳನ್ನು ಮಕ್ಕಳಿಗೆ ಕಲಿಸಲು ಶಿಫಾರಸ್ಸು ಮಾಡಿದೆ. ಸರ್ಕಾರ ಇಂಥ ಕೆಟ್ಟ ಮನುಷ್ಯ ವಿರೋಧಿ ನಿಲುವನ್ನು ಮಕ್ಕಳಿಗೆ ಕಲಿಸಲು ಹೊರಟಿದೆ. ಇದರ ಮೂಲಕ ಶೂದ್ರ-ದಲಿತ- ಮಹಿಳೆಯರಿರುವ ಶೇ. 98 ರಷ್ಟು ಜನರನ್ನು ದಮನಿಸಲು ಹೊರಟಿದ್ದಾರೆ.

ಬುದ್ಧ, ಮಹಾವೀರ, ಬಸವಣ್ಣ, ಕನಕದಾಸರು, ನಾರಾಯಣ ಗುರುಗಳು, ಸಾವಿತ್ರಿ ಫುಲೆ, ಅಂಬೇಡ್ಕರ್, ಕುವೆಂಪು, ಉತ್ತರ ಕರ್ನಾಟಕದ ಕವಿ ಸಾಹಿತಿಗಳು, ಹೆಮ್ಮೆಯ ನಾಡಗೀತೆ, ಮನುವಾದ ವಿರೋಧಿ ಭಕ್ತಿ ಪಂಥ,  ದೇವನೂರ ಮಹಾದೇವ ಮುಂತಾದ ಶೂದ್ರ-ದಲಿತ ಬರೆಹಗಾರರು ಹೀಗೆ ಎಲ್ಲರನ್ನೂ ಅವಮಾನಿಸಿ, ನಿರ್ಲಕ್ಷಿಸಿ ಶ್ರಮ ವಿರೋಧಿಯಾದ, ಕುವೆಂಪು ಅವರು ಹೇಳಿದ ಹಾಗೆ ಉತ್ಪಾದಕ ವರ್ಗದವರನ್ನು ನಿರ್ಲಕ್ಷಿಸಿ, ಕೇವಲ ಸಂಗ್ರಾಹಕ ವರ್ಗದ ಜನರು ರಚಿಸಿದ ಜೊಳ್ಳನ್ನು ಮಕ್ಕಳಿಗೆ ಕಲಿಸಲು ಹೊರಟಿದ್ದಾರೆ. ಇದನ್ನು ಪ್ರಶ್ನಿಸಿ ನಾಡಿನಾದ್ಯಂತ ಸ್ವಾಮೀಜಿಗಳು, ಗುರು ಹಿರಿಯರು, ಜನ ಸಾಮಾನ್ಯರು, ವಿದ್ವಾಂಸರು, ಜನಪರರು  ಪ್ರತಿಭಟನೆಗೆ ಇಳಿದಿದ್ದಾರೆ. ಪ್ರತಿಭಟನೆಯನ್ನು ಕಂಡು ಕಂಗೆಟ್ಟು ಕೂತಿರುವ ಬಿಜೆಪಿಯ ಕೆಲವು ಶೂದ್ರರಾದ ಹಾಗೂ ಅಗ್ರಹಾರದ ಗೇಟ್‍ಕೀಪರುಗಳಾದವರು ಸೇರಿದಂತೆ ಹಲವರು ‘ ತುಕ್ಡೆ ಗ್ಯಾಂಗ್’ನವರು, ರಾಷ್ಟ್ರೀಯ ಹಿತಾಸಕ್ತಿಗಾಗಿ  ಇದೆಲ್ಲ ಸಹಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ.

ಹಾಗಿದ್ದರೆ ನಿಜವಾದ ತುಕ್ಡೆ ಗ್ಯಾಂಗ್‍ನವರು ಯಾರು? ಎಂದು ಸ್ವಲ್ಪ ಮೆದುಳಿರುವವರು ಯೋಚಿಸಿದರೆ ಅರ್ಥವಾಗುತ್ತದೆ. ಬಿಜೆಪಿಯಲ್ಲಿರುವವರು ಮತ್ತು ಬಿಜೆಪಿಯ ಸಿದ್ಧಾಂತವನ್ನು ಹುಟ್ಟಿಸಿದವರೆ ತುಕ್ಡೆ ಗ್ಯಾಂಗಿನ ಜನ. ಯಾರು ತುಕ್ಡೆ ಗ್ಯಾಂಗನವರು ಹೇಳಿ ಬಿಜೆಪಿಗರೆ? ಎಂದು ಸಿದ್ಧರಾಮಯ್ಯ ಗುಡುಗಿದರು.

ಜಗತ್ತಿನ ಶ್ರೇಷ್ಠ ಸಂಸ್ಕøತಿಯಾಗಿದ್ದ, ದ್ರಾವಿಡರೆ ನಿರ್ಮಿಸಿದ್ದ ಸಿಂಧೂ ನಾಗರಿಕತೆಯನ್ನು ಧ್ವಂಸ ಮಾಡಿದ ಆರ್ಯರು, ವಿರಾಟ್ ಪುರುಷನ ತಲೆಯಿಂದ ಬ್ರಾಹ್ಮಣ ಹುಟ್ಟಿದ, ಪಾದಗಳಿಂದ ಶೂದ್ರರು ಹುಟ್ಟಿದರು ಎಂದು ಬರೆದು ಅದನ್ನೆ ಕಾನೂನು ಮಾಡಿ ಜನರನ್ನು ಶಾಶ್ವತವಾಗಿ ಒಡೆದು ಹಾಕಿದ ಸಿದ್ಧಾಂತದವರು  ತುಕ್ಡೆ ಗ್ಯಾಂಗಿನವರಲ್ಲವೆ?

ಇಂದು ತಳಿವಿಜ್ಞಾನ ಹೇಳುತ್ತಿರುವ ಪ್ರಕಾರ 2500 ವರ್ಷಗಳ ಹಿಂದೆ ಅಮಾನುಷವಾದ ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿ, ವೃತ್ತಿ, ಹುಟ್ಟುಗಳ ಮೇಲೆ ಮನುಷ್ಯ ಸಮುದಾಯಗಳನ್ನು ಒಡೆದು ಹಾಕಿ ಭಾರತದಲ್ಲಿ ನರಕದಂತಹ ಸಮಸ್ಯೆಗಳನ್ನು ಸೃಷ್ಟಿ ಮಾಡಿದವರು ತುಕ್ಡೆ ಗ್ಯಾಂಗಿನವರಲ್ಲವೆ? [ಈ ಕುರಿತು ಯಾರಿಗಾದರೂ ಆಸಕ್ತಿ ಇದ್ದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ  ಕ್ರಾಂತಿ ಮತ್ತು ಪ್ರತಿ ಕ್ರಾಂತಿ ಎಂಬ ಗಹನ ವಿದ್ವತ್ತಿನ ಗ್ರಂಥವನ್ನು ಓದಿ]

ನಾಗಪುರದ ತಮ್ಮ ಕಛೇರಿಯ ಮೇಲೆ ಇತ್ತೀಚಿನವರೆಗೂ ರಾಷ್ಟ್ರಧ್ವಜವನ್ನು ಹಾರಿಸದೆ ನಿರ್ಲಕ್ಷ್ಯ ಮಾಡಿದವರು ತುಕ್ಡೆ ಗ್ಯಾಂಗಿನವರಲ್ಲವೆ?

ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಮನುವಾದವನ್ನು ಜಾರಿಗೆ ತರಲು ನಿರಂತರ ಪ್ರಯತ್ನಿಸುತ್ತಿರುವವರು ತುಕ್ಡೆ ಗ್ಯಾಂಗಿನವರಲ್ಲವೆ? .ಗಾಂಧೀಜಿಯರನ್ನು ಕೊಂದ ಗೋಡ್ಸೆಯನ್ನು ಆರಾಧಿಸುವ ಸಂಸ್ಕøತಿಯನ್ನು ಹುಟ್ಟು ಹಾಕಿದವರು ತುಕ್ಡೆ ಗ್ಯಾಂಗಿನವರಲ್ಲವೆ? ಇಟಲಿಯ ಮುಸಲೋನಿಯಿಂದ ಫ್ಯಾಸಿಸಂ ಅನ್ನು ಕಲಿತು ಬಂದ ಮೂಂಜೆಯವರು ತಮ್ಮ ಶಿಷ್ಯ ಹೆಡಗೆವಾರ್ ಮೂಲಕ ಆರ್‍ಎಸ್‍ಎಸ್ ಅನ್ನು ಸ್ಥಾಪಿಸಿ ಒಂದು ವರ್ಗದ ಹಿತಾಸಕ್ತಿಯನ್ನು ಪೊರೆಯಲು ಕಂಕಣ ತೊಟ್ಟಿದ್ದು ತುಕ್ಡೆವಾದವಲ್ಲವೆ?

ಹಿಟ್ಲರ್‍ನನ್ನು ರಾಕ್ಷಸ ಎಂದೂ ಅವನ ಸಿದ್ಧಾಂತವನ್ನು ದುಷ್ಟ, ಸೈತಾನ ಸಿದ್ಧಾಂತ ಎಂದು ತೀರ್ಮಾನಿಸಿ ಅದನ್ನು ಇಡೀ ಯುರೋಪಿನಿಂದಲೆ ಹೊಡೆದೋಡಿಸುತ್ತಿದ್ದರೂ ಆರ್‍ಎಸ್‍ಎಸ್ ಮಾತ್ರ ಹಿಟ್ಲರನ ಯೂನಿಫಾರ್ಮು, ಲಾಂಛನ ಇತ್ಯಾದಿಗಳನ್ನು ಹೊತ್ತುಕೊಂಡು ಮೆರೆಯುತ್ತಿರುವುದು, ತಮ್ಮ ಮೆದುಳು, ಹೃದಯ ಎಲ್ಲವೂ ಇಟಲಿ, ಜರ್ಮನಿಗಳಲ್ಲಿ ಇದ್ದರೂ ಸಹ ಸುಳ್ಳು ಸುಳ್ಳೆ ಭಾರತೀಯರು ಎಂದು ಕರೆದುಕೊಳ್ಳುತ್ತಿರುವ ಈ ಜನರ ವಾದ ತುಕ್ಡೆವಾದವಲ್ಲವೆ?

ಮನುಷ್ಯ ಕಲ್ಯಾಣಕ್ಕಾಗಿ ದುಡಿದ ಬುದ್ಧ, ಮಹಾವೀರ, ಬಸವಣ್ಣ, ಕನಕದಾಸ, ನಾರಾಯಣಗುರು, ಅಂಬೇಡ್ಕರ್, ಕುವೆಂಪು ಮುಂತಾದ ಮಹನೀಯರನ್ನು ಅವಮಾನಿಸಿ, ನಿರ್ಲಕ್ಷಿಸಿರುವ ಮನುವಾದಿ ಸಿದ್ಧಾಂತದವರು ಹಾಗೂ ಒಂದು ಗುಂಪು ಮಾತ್ರ ಶ್ರೇಷ್ಠ ಉಳಿದವರೆಲ್ಲ ನಿಕೃಷ್ಟರು ಎಂದು ಭಾವಿಸಿ ಪಠ್ಯ ಪುಸ್ತಕ ಮಾಡಿರುವ ಸಿದ್ಧಾಂತದವರು ತುಕ್ಡೆ ಗ್ಯಾಂಗಿನವರಲ್ಲವೆ? ಒಂದು ಗುಂಪಿನ ಹಿತಾಸಕ್ತಿಯನ್ನು ರಾಷ್ಟ್ರೀಯ ಹಿತಾಸಕ್ತಿ ಎಂದು ಬಿಂಬಿಸುತ್ತಿರುವ ಕೆಟ್ಟ ಸಿದ್ಧಾಂತದ ಜನರು ತುಕ್ಡೆ ಗ್ಯಾಂಗಿನವರಲ್ಲವೆ?

ಮನುಷ್ಯ ವಿರೋಧಿ ಮನುವಾದಿಗಳೆ ಕೇಳಿಸಿಕೊಳ್ಳಿ; ನಮ್ಮದು ಬುದ್ಧ, ಮಹಾವೀರ, ಬಸವಣ್ಣ, ಕನಕದಾಸ, ನಾರಾಯಣ ಗುರು, ಅಂಬೇಡ್ಕರ್, ಕುವೆಂಪು ಮುಂತಾದ ಜಗತ್ತಿನ ಶ್ರೇಷ್ಠ ದಾರ್ಶನಿಕರ ತತ್ವ. ಇಡೀ ಜಗತ್ತಿನಲ್ಲಿ ಶೋಷಿತರು, ದುಃಖಿತರು ಇರಬಾರದು ಎಂದು ಹೇಳಿಕೊಟ್ಟವರು ನಮ್ಮ ನಾಯಕರು. ಇವನಾರವನೆನ್ನದೆ ಇವ ನಮ್ಮವ ಎಂದು ಹೇಳಿಕೊಟ್ಟ ಅಣ್ಣ ಬಸವಣ್ಣನ ದಾರಿ ನಮ್ಮದು. ಕುಲ ಕುಲವೆಂದು ಹೊಡೆದಾಡಬೇಡಿ ಎಂದ ಕನಕದಾಸರ ಪಥ ನಮ್ಮದು. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದ ಪಂಪ ನಮ್ಮ ನಾಯಕ. ನೀನೆಲ್ಲೆ ಇದ್ದರೂ ನೀನೇರುವ ಮಲೆ ಅದೆ ಸಹ್ಯಾದ್ರಿ, ನೀನ್ ಕುಡಿಯುವ ನೀರ್ ಕಾವೇರಿ ಎಂದ, ನಿರಂಕುಶ ಮತಿಗಳಾಗಿ ಎಂದು ಕರೆಕೊಟ್ಟ ಕುವೆಂಪು ಅವರು  ನಮ್ಮ ನಾಯಕರು. ಅಸಮಾನತೆಯನ್ನು ತೊಡೆದು ಹಾಕಿ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳಿದ ಬಾಬಾ ಸಾಹೇಬರು [ ಮನುಸ್ಮøತಿಯು ಶೂದ್ರರನ್ನು ಪಶುಗಳಿಗಿಂತ ಕನಿಷ್ಠವಾಗಿ ಮಾಡಿ ನ್ಯಾಯ ವ್ಯವಸ್ಥೆಯನ್ನು ಸೃಷ್ಟಿಸಿತ್ತು] ನಮ್ಮ ಮಾರ್ಗದರ್ಶಕರು. ನಾವು ಈ ರಾಷ್ಟ್ರದ ವಾರಸುದಾರರು. ತುಕ್ಡೆ ಗ್ಯಾಂಗು ಎಂದು ಬಾಯಿ ಬಡಿದುಕೊಳ್ಳುವ ಬಿಜೆಪಿಗರೆ ಹೇಳಿ ನಿಮ್ಮ ಸಿದ್ಧಾಂತ ಯಾವುದು? ಯಾರು ನಾಯಕರು? ಮತ್ತೂ ಹೇಳುತ್ತೇನೆ ವ್ಯಾಸ, ವಾಲ್ಮೀಕಿ, ಕಾಳಿದಾಸ ನಮ್ಮವರು. ಇಂದ್ರ ಸಂಸ್ಕøತಿಯ ವಿರುದ್ಧ ತಿರುಗಿ ಬಿದ್ದ  ದೇವರುಗಳಾದ ಶಿವ, ರಾಮ, ಕೃಷ್ಣ ನಮ್ಮವರು. ನಿಜವಾದ ಭಾರತದ ರಾಷ್ಟ್ರ ಧರ್ಮವೆಂದರೆ ಶೂದ್ರ ಧರ್ಮವೆ ಹೊರತು, ನಿಮ್ಮದಲ್ಲ. ನಿಮ್ಮದು  ಸೀಮಿತ ಗುಂಪಿನ ಧರ್ಮ ಮಾತ್ರ. ಸೀಮಿತ ಹಿತಾಸಕ್ತಿ ಎಂದಿಗೂ ರಾಷ್ಟ್ರೀಯ ಹಿತಾಸಕ್ತಿಯಾಗುವುದಿಲ್ಲ. ಓಟಿಗಾಗಿ ಮಾತ್ರ ನೀವು ರಾಷ್ಟ್ರೀಯ ಹಿತಾಸಕ್ತಿ ಎನ್ನುತ್ತೀರೆ ಹೊರತು ನಿಜವಾದ ಕಾಳಜಿ ನಿಮ್ಮ ಎದೆಯಲ್ಲಿಲ್ಲ. ಇದು ನಿಧಾನಕ್ಕೆ ಬಹುಸಂಖ್ಯಾತ ಜನರಿಗೆ ಅರ್ಥವಾಗುತ್ತಿದೆ ಎಂದು ಸಿದ‍್ಧರಾಮಯ್ಯ ಹೇಳಿದರು.

 ರಾಜಕೀಯ ದ್ವೇಷದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆ: ಕಿರುಕುಳ ನೀಡಲು ಷಡ್ಯಂತ್ರ…

ಕುಪ್ಪಳಿಯಿಂದ ತೀರ್ಥಹಳ್ಳಿವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಇ.ಡಿ ಯಿಂದ ರಾಹುಲ್‌ ಗಾಂಧಿ ಅವರ ವಿಚಾರಣೆ ಮಾಡುತ್ತಿರುವುದು ರಾಜಕೀಯ ದ್ವೇಷದಿಂದ. ಇದು ಹೊಸ ಪ್ರಕರಣವಲ್ಲ, ಹಿಂದೆಯೇ ಈ ಬಗ್ಗೆ ತನಿಖೆಯಾಗಿದೆ, ಮತ್ತೆ ಕೇಸನ್ನು ರೀಒಪನ್‌ ಮಾಡಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರಿಗೆ ರಾಜಕೀಯ ಕಿರುಕುಳ ನೀಡಲು ಷಡ್ಯಂತ್ರ ಮಾಡುತ್ತಿದ್ದಾರೆ. 1938 ರಲ್ಲಿ ಪ್ರಾರಂಭವಾದ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ ಇವರು ಟ್ರಸ್ಟಿಗಳಾಗಿದ್ದಾರೆ, ಈ ಹಿಂದೆ ರಾಜೀವ್‌ ಗಾಂಧಿ ಕೂಡ ಟ್ರಸ್ಟಿ ಆಗಿದ್ದರು. ಇ.ಡಿ ವಿಚಾರಣೆ ರಾಜಕೀಯ ದುರುದ್ದೇಶದಿಂದ ಮಾಡುತ್ತಿರೋದು. ನಮ್ಮ ನಾಯಕರು ಭಾರತ್‌ ಜೋಡೋ ಯಾತ್ರ ಮಾಡುತ್ತಿದ್ದಾರೆ, ಅದಕ್ಕಾಗಿ ಅವರ ವರ್ಚಸ್ಸನ್ನು ಕಡಿಮೆ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು,

ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಾಗ ಇಲ್ಲಿನ ಸರ್ಕಾರ 40% ಲಂಚ ಕೇಳುತ್ತಿದೆ ಎಂದು ಅವರಿಗೆ ಬಂದಿರುವ ಪತ್ರಕ್ಕೆ ಉತ್ತರ ಕೊಡಲಿ. ಇವತ್ತಿನ ವರೆಗೆ ಪತ್ರದ ಬಗ್ಗೆ ರಾಜ್ಯ ಸರ್ಕಾರದ ಸ್ಪಷ್ಟನೆಯನ್ನು ಅವರು ಕೇಳಿಲ್ಲ. ಮೊದಲು ಅದಕ್ಕೆ ಉತ್ತರ ನೀಡಲಿ ಎಂದು ಬಿಜೆಪಿಗೆ ಟಾಂಗ್ ನೀಡಿದರು.

ನಾಗೇಶ್‌ ಅವರು ಮಂತ್ರಿಯಾಗಲು ನಾಲಾಯಕ್‌  

ನಾಗೇಶ್‌ ಅವರು ಮಂತ್ರಿಯಾಗಲು ನಾಲಾಯಕ್‌, ಮೊದಲು ಚರಿತ್ರೆ ತಿರುಚಿಲ್ಲ ಎಂದು ಹೇಳಿದ್ದರು, ನಂತರ ಚರಿತ್ರೆ ತಿರುಚಿದ್ದು ಒಪ್ಪಿಕೊಂಡು ಬದಲಾವಣೆ ಮಾಡುತ್ತೇವೆ ಎಂದರು. ಹಾಗಾದರೆ 21 ಜನ ಸ್ವಾಮೀಜಿಗಳು ಧಾರವಾಡದಲ್ಲಿ ಸಭೆ ಸೇರಿ ಈ ಸರ್ಕಾರವನ್ನು  ಖಂಡಿಸಿದರಲ್ಲ ಅದು ಸುಳ್ಳಾ? 71 ಜನ ಸಾಹಿತಿಗಳು ಸಹಿ ಮಾಡಿ ಸರ್ಕಾರಕ್ಕೆ ಪತ್ರ ನೀಡಿದ್ದು ಸುಳ್ಳಾ? ವಿರೋಧ ಜಾಸ್ತಿಯಾದ ಮೇಲೆ ರೋಹಿತ್‌ ಚಕ್ರತೀರ್ಥ ಅವರನ್ನು ತೆಗೆದು ಹಾಕಿದ್ದು ಯಾಕೆ? ಸುಮ್ಮಸುಮ್ಮನೆ ತೆಗೆದಿದ್ದಾ?

ಬರಗೂರು ರಾಮಚಂದ್ರಪ್ಪ ಅವರು ಪರಿಷ್ಕರಿಸಿದ್ದ ಪಠ್ಯದಲ್ಲಿ ಅಂಬೇಡ್ಕರ್‌ ಅವರು ಸಂವಿಧಾನ ಶಿಲ್ಪಿ ಎಂದು ಇತ್ತು, ರೋಹಿತ್ ಚಕ್ರತೀರ್ಥ‌ ಅಧ್ಯಕ್ಷತೆಯ ಸಮಿತಿ ಇದನ್ನು ತೆಗೆದಿದೆ. ಸಂವಿಧಾನದ ಕರಡು ರಚನಾ ಸಮಿತಿ ಅಧ್ಯಕ್ಷರಾಗಿದ್ದವರು ಯಾರು? ರೋಹಿತ್‌ ಚಕ್ರತೀರ್ಥನಾ? ಅಮಿತ್‌ ಶಾ ಅಥವಾ ನರೇಂದ್ರ ಮೋದಿ ಅವರು ಆಗಿದ್ದರ? ಸಂವಿಧಾನ ಕರಡು ರಚನಾ ಸಮಿತಿಯ ನೇತೃತ್ವ ವಹಿಸಿದ್ದು ಡಾ. ಬಿ. ಆರ್ ಅಂಬೇಡ್ಕರ್‌ ಅವರು, ಇದು ಸತ್ಯವಲ್ಲವಾ? ಅವರಿಗೆ ಸಂವಿಧಾನ ಶಿಲ್ಪಿ ಎಂದು ಹೆಸರು ಕೊಟ್ಟವರು ಟಿ.ಟಿ ಕೃಷ್ಣಮಾಚಾರಿ. ಇವರು ಕೂಡ ಕರಡು ರಚನಾ ಸಮಿತಿಯ ಒಬ್ಬ ಸದಸ್ಯರಾಗಿದ್ದವರು. ಬಿಜೆಪಿಗೆ ಇತಿಹಾಸ ತಿರುಚುವುದು ಮಾತ್ರ ಗೊತ್ತಿದೆ ಎಂದು ಸಿದ‍್ಧರಾಮಯ್ಯ ಲೇವಡಿ ಮಾಡಿದರು.

ಮೊದಲು ಲಕ್ಷ್ಮಣ್‌ ಜೊತೆ ಚರ್ಚೆ ಮಾಡಲಿ, ಆಮೇಲೆ ನೋಡೋಣ: ಸಂಸದ ಪ್ರತಾಪ್ ಸಿಂಹಗೆ ತಿರುಗೇಟು.

ಇದೇ ವೇಳೆ ಮಾಜಿ ಸಚಿವ ಸಿ.ಟಿ ರವಿ ಮತ್ತು ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಸಿದ್ಧರಾಮಯ್ಯ, ಸಿಟಿ ರವಿ ಕಾನೂನು ಅಭ್ಯಾಸ ಮಾಡಿದ್ದಾರ? ನಾನು ಕಾನೂನು ಓದಿದ್ದೀನಿ ಅದಕ್ಕೆ ಕಾನೂನು ರೀತಿ ಮಾತಾನಾಡ್ತೀನಿ, ಅವರು ಓದಿಲ್ಲ ಅದಕ್ಕೆ ಕಾನೂನಿಗೆ ವಿರುದ್ಧ ಮಾತನಾಡ್ತಾರೆ.  ಪ್ರತಾಪ್‌ ಸಿಂಹನವರಿಗೆ ಚಾಲೆಂಜ್‌ ಮಾಡಿದ್ದು ನಾನಲ್ಲ, ನಮ್ಮ ಪಕ್ಷದ ವಕ್ತಾರರಾದ ಲಕ್ಷ್ಮಣ್‌. ಅವರು ಬಿ.ಇ ಪದವೀಧರ. ಇವರೇನು ಓದಿದ್ದಾರೆ? ಅಂಬೇಡ್ಕರ್‌ ಅವರಷ್ಟು ಓದಿದ್ದಾರ? ಮೊದಲು ಲಕ್ಷ್ಮಣ್‌ ಜೊತೆ ಚರ್ಚೆ ಮಾಡಲಿ, ಆಮೇಲೆ ನೋಡೋಣ ಎಂದು ಟಾಂಗ್ ನೀಡಿದರು.

ನಾನು ಎಲ್ಲೂ ನಾನೊಬ್ಬ ಆರ್ಥಿಕ ತಜ್ಞ ಎಂದು ಹೇಳಿಲ್ಲ. ನಾನು ಮನಮೋಹನ್‌ ಸಿಂಗ್‌ ಅವರ ರೀತಿ ಅರ್ಥಶಾಸ್ತ್ರಜ್ಞ ಎಂದು ಯಾವತ್ತಾದರೂ ಹೇಳಿದ್ದೀನಾ? ನಾನು ಕಾನೂನು ಪದವೀಧರ. ಆದರೂ 13 ಬಜೆಟ್‌ ಗಳನ್ನು ಮಂಡನೆ ಮಾಡಿದ್ದೇನೆ. ಪ್ರತಾಪ್‌ ಸಿಂಹ ಎಷ್ಟು ಬಜೆಟ್‌ ಮಂಡಿಸಿದ್ದಾರೆ? ಬರೆದು ಕೊಟ್ಟ ಬಜೆಟ್‌ ಅನ್ನು ನಾನು ಓದಿದ್ದು ಎಂದಾದರೆ ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರು ಅದನ್ನೇ ಮಾಡಿರೋದ? ನಿರ್ಮಲಾ ಸೀತಾರಾಮನ್‌ ಅವರು ಅಧಿಕಾರಿಗಳು ಬರೆದು ಕೊಟ್ಟಿದ್ದನ್ನು ಓದಿದ್ದಾ? ಬಸವರಾಜ್‌ ಬೊಮ್ಮಾಯಿ ಒಂದು ಬಜೆಟ್‌ ಮಂಡಿಸಿದ್ದಾರೆ, ಅವರು ಅದನ್ನೇ ಮಾಡಿದ್ದಾ? ಅರುಣ್‌ ಜೇಟ್ಲಿ ಯಾವ ಅರ್ಥಶಾಸ್ತ್ರಜ್ಞರು? ಪ್ರಧಾನಿ ಮೋದಿ ಏನು ಓದಿದ್ದಾರೆ? ಅವರನ್ನು ಹಾಡಿ ಹೊಗಳುತ್ತಾರಲ್ಲ. ಅವರು ಪ್ರಧಾನಿ ಆಗಬಾರದು ಎಂದು ನಾನು ಹೇಳ್ತಿಲ್ಲ, ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದೆ, ಆಗಲಿ ಬಿಡಿ. ಪ್ರತಾಪ್‌ ಸಿಂಹ ಲೋಕಸಭಾ ಸದಸ್ಯ ಆದ ಕೂಡಲೆ ಸರ್ವಜ್ಞನಾ? ಎಂದು ಟೀಕಾಪ್ರಹಾರ ನಡೆಸಿದರು.

ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಅಧೀನದಲ್ಲಿ ಇರುವುದು. ಡಿ.ಕೆ ಸುರೇಶ್‌ ಒಬ್ಬರು ಗೌರವಾನ್ವಿತ ಸಂಸದ. ಪೊಲೀಸರು ಒಬ್ಬ ಸಂಸದನ ಜೊತೆ ಈ ರೀತಿ ನಡೆದುಕೊಂಡಿದ್ದನ್ನು ನಾನು ಖಂಡಿಸುತ್ತೇನೆ ಎಂದು ಸಿದ್ಧರಾಮಯ್ಯ ಹರಿಹಾಯ್ದರು.

Key words: bjp-Insult –kuvempu- Former CM -Siddaramaiah