ಯಾವುದೇ ಸರ್ಕಾರ ಬಂದ್ರೂ ದೇಶದ ಸಮಸ್ಯೆಗೆ ಪರಿಹಾರ ಇಲ್ಲ- ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಅಸಮಾಧಾನ…

ಮೈಸೂರು,ಮೇ,17,2019(www.justkannada.in): ಈ ಬಾರಿ ಚುನಾವಣೆಯಲ್ಲಿ ಯಾವುದೇ ಸರ್ಕಾರ ಬಂದ್ರೂ ಸಹ ನಮ್ಮ ದೇಶದ ಸಮಸ್ಯೆಗೆ ಪರಿಹಾರ  ಸಿಗಲ್ಲ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಟಿಜನ್ ಫಾರ್ ಡೆಮಾಕ್ರಸಿ ಮುಖ್ಯಸ್ಥ ಎಸ್.ಆರ್. ಹಿರೇಮಠ್, ಎನ್ ಡಿ ಎ ಸರ್ಕಾರ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಈ ಪಕ್ಷವನ್ನು ಬೆಂಬಲಿಸುವ ಸಂಘ ಪರಿವಾರ ನಮ್ಮ ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ದೇಶಕ್ಕೆ ಗೊತ್ತಿದೆ. ನಮ್ಮ ದೇಶದ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಅವಶ್ಯಕತೆ ಇದೆ. ಹೀಗಾಗಿ ಜಯಪ್ರಕಾಶ್ ನಾರಾಯಣ್ ಸ್ಥಾಪನೆ ಮಾಡಿರುವ  ಸಿಟಿಜನ್ ಫಾರ್ ಡೆಮಾಕ್ರಸಿ ಸಂಸ್ಥೆ ವತಿಯಿಂದ ಭ್ರಷ್ಟಾಚಾರಿಗಳ ವಿರುದ್ದ ಹೋರಾಟಕ್ಕೆ ಸಿದ್ದ ಮಾಡಿದ್ದೇವೆ. ದೇಶದ ಸಮಸ್ಯೆ ಗಳ ಬಗ್ಗೆ ವಿಚಾರ ಸಂಕೀರ್ಣಗಳನ್ನು ಕೂಡ ಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ದೇಶದ ಪ್ರಜಾಪ್ರಭುತ್ವ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳಿಗೆ ತಾವು ಪತ್ರ ಬರೆದಿದ್ದೇವೆ. ರಾಜಕಾರಣಿಗಳು ಆಮಿಷಗಳಿಗೆ ಒಳಗಾಗಿ ಮಾಡುವ ಪಕ್ಷಾಂತರ ಪ್ರಜಾಪ್ರಭುತ್ವಕ್ಕೆ ಮಾಡುವ ಗಂಭೀರ ಅಪರಾಧ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರ ಪಾತ್ರವೂ ಇದೆ. ಆದ್ದರಿಂದ ಅವರಲ್ಲಿ ಸಂವಿಧಾನ ನೀಡಿರುವ ಜವಾಬ್ದಾರಿ, ಹೊಣೆ ಕುರಿತಂತೆಯೂ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ರಾಷ್ಟ್ರದಲ್ಲಿ ೨೦೦೮-೦೯ ರಲ್ಲಿದ್ದ ಗಂಭೀರ ಪರಿಸ್ಥಿತಿ, ಮೈನಿಂಗ್ ಮಾಫಿಯಾದ ಮೇಲೆ ಕಡಿವಾಣ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಳಲ್ಲಿಯೂ ಇರುವ ಬಿಕ್ಕಟ್ಟು ಮೊದಲಾದವುಗಳ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಾಗಿದೆ. ಇನ್ನು, 2014ರಲ್ಲಿ ಅಧಿಕಾರಕ್ಕೆ ಬರುವ ವೇಳೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಉದ್ಯೋಗ ಸೃಷ್ಟಿ, ಕಪ್ಪುಹಣ ವಾಪಸು, ಅದರಿಂದಾಗಿ ಪ್ರತಿಯೊಬ್ಬರ ಕುಟುಂಬಕ್ಕೆ 15ಲಕ್ಷ ರೂ. ಹಣ ನೀಡಿಕೆ, ರೈತರಿಗಾಗಿ ಡಾ. ಸ್ವಾಮಿನಾಥನ್ ವರದಿ ಜಾರಿ ಮೊದಲಾದವು ಸೇರಿದಂತೆ ಆನೇಕ ಭರವಸೆ ನೀಡಿತ್ತು. ಆದರೆ ಆ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದು  ಟೀಕಿಸಿದರು.

ದೇಶದ ಸೈನ್ಯ ಮೋದಿ ಸೈನ್ಯ ಎನ್ನುತ್ತಾರೆ. ಇನ್ನು ಪ್ರಧಾನಿ ಸಹಾ ಬಿಜೆಪಿಗೆ ನೀಡುವ ಮತ ದೇಶದ ಸೈನಿಕರಿಗೆ ನೀಡುವ ಮತ ಎಂದೂ ಸೈನಿಕರ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ.  ಹೀಗ ದೇಶದಲ್ಲಿನ ಈ ರೀತಿಯ ಪರಿಸ್ಥಿತಿ ಇದೆ. ಈ ಹಿಂದೆ ಜಯಪ್ರಕಾಶ್ ನಾರಾಯಣ್ ಅವರು ನಡೆಸಿದ ರೀತಿಯ ಆಂದೋಲನ ಮತ್ತೊಮ್ಮೆ ಈಗ ಅತ್ಯವಾಗಿದೆ ಎಂದು ಹಿರೇಮಠ್ ತಿಳಿಸಿದರು.

Key words: Any government may come to power, There is no solution for country’s problem- SR Hiremath

#mysore #SRHiremath-displeasure  #political