ಭಾರತದಲ್ಲಿ ಪ್ರಜಾಪ್ರಭುತ್ವವು ಸದೃಢವಾಗಿದೆ ಎಂಬುದು ಕೂಡಾ ಒಂದು ಸಾಧನೆಯೇ – ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮೇ 31,2022(www.justkannada.in): ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಭಾರತದಲ್ಲಿ ಪ್ರಜಾಪ್ರಭುತ್ವವು ಸದೃಢವಾಗಿದೆ ಎಂಬುದು ಕೂಡಾ ಒಂದು ಸಾಧನೆಯೇ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂಟು ವರ್ಷ ಪೂರ್ಣಗೊಳಿಸಿದ ಸುಸಂದರ್ಭದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಹಿಮಾಚಲ ಪ್ರದೇಶದ ಶಿಮ್ಲಾದಿಂದ ವರ್ಚುವಲ್ ವೇದಿಕೆಯ ಮೂಲಕ ಆಯೋಜಿಸಿದ್ದ ಫಲಾನುಭವಿಗಳಿಗೆ ನೇರ ಸಂವಾದ ಕಾರ್ಯಕ್ರಮಕ್ಕೆ ಮುನ್ನ, ವಿಧಾನ ಸೌಧದ ಔತಣ ಸಭಾಂಗಣದಲ್ಲಿ ರಾಜ್ಯದ ಫಲಾನುಭವಿಗಳನ್ನು ಉದ್ದೇಶಿಸಿ ಸಿಎಂ ಬೊಮ್ಮಾಯಿ ಮಾತನಾಡಿದರು.

ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳಲ್ಲಿನ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸಿದಾಗ, ತುರ್ತು ಪರಿಸ್ಥಿತಿಯ ಅವಧಿಯಲ್ಲಿನ ಕರಾಳ ದಿನಗಳ ನಂತರವೂ, ಭಾರತದಲ್ಲಿ  ಪ್ರಜಾಪ್ರಭುತ್ವವು ಸದೃಢವಾಗಿದೆ ಎಂಬುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದ ಮೊದಲ ವರ್ಷದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯ ಮೇಲೆ ನಿಂತು ಭಾಷಣ ಮಾಡಿದಾಗ ಪ್ರಪ್ರಥಮವಾಗಿ ಸ್ವಚ್ಛ ಭಾರತ ಪರಿಕಲ್ಪನೆಯ ಕುರಿತು ಘೋಷಿಸಿದರು. ಭಾರತವು ಸ್ವಚ್ಛವಾದಾಗ ಜನತೆಯ ಆರೋಗ್ಯವೂ ಸ್ವಚ್ಛವಾಗುತ್ತದೆ. ಜನತೆಯ ಆರೋಗ್ಯ ಉತ್ತಮಗೊಂಡಾಗ ರಾಷ್ಟ್ರವು ಎಲ್ಲಾ ರಂಗಗಳಲ್ಲಿಯೂ ಅಭಿವೃದ್ಧಿ ಮತ್ತು ಪ್ರಗತಿಯತ್ತ ದಾಪುಗಾಲು ಹಾಕುತ್ತದೆ ಎಂಬ ಸದಾಶಯ ಪ್ರಧಾನಿ ಅವರದ್ದಾಗಿದೆ.

ಒಂದು ಕಾಲದಲ್ಲಿ ಸರ್ಕಾರಗಳು ಬಿಡುಗಡೆ ಮಾಡುತ್ತಿದ್ದ ಅನುದಾನವು ಗ್ರೀಸ್ ನಂತೆ ಹೆಪ್ಪುಗಟ್ಟಿ ಕೆಳಹಂತವನ್ನು ತಲುಪುತ್ತಲೇ ಇರಲಿಲ್ಲ . ಆದರೆ, ಇದೀಗ ಕೇಂದ್ರ ಸರ್ಕಾರವು ಅನುಷ್ಠಾನಕ್ಕೆ ತಂದಿರುವ ನೇರ ಹಣ ವರ್ಗಾವಣಾ ವ್ಯವಸ್ಥೆಯ ಮೂಲಕ ಬಿಡುಗಡೆ ಆಗುತ್ತಿರುವ ಅನುದಾನವು ಅತ್ಯಂತ ಕ್ಷಿಪ್ರವಾಗಿ ಹಾಗೂ ಪಾರದರ್ಶಕವಾಗಿ ಜೇನಿನ ಹನಿಯಂತೆ ತನ್ನ ಗಮ್ಯಸ್ಥಾನವನ್ನು ತಲುಪುತ್ತಿದೆ ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.

ಈ ಮುನ್ನಾ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಪೋ‍ಷಣಾ ಅಭಿಯಾನ ಯೋಜನೆ, ಮಾತೃ ವಂದನಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆಯ ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿ ನೇರವಾಗಿ ಸಂವಾದ ನಡೆಸಿ ಮಾಹಿತಿ ಪಡೆದರು. ಅಲ್ಲದೆ, ಈ ಎಲ್ಲಾ ಯೋಜನೆಗಳನ್ನು ರೂವಾರಿ ಪ್ರಧಾನ ಮಂತ್ರಿ  ನರೇಂದ್ರ ಮೋದಿ ಅವರ ಗುಣಗಾನ ಮಾಡಿದರು.

ಇದಕ್ಕೂ ಮೊದಲು ಮಾತನಾಡಿದ ವಸತಿ ಸಚಿವ ವಿ. ಸೋಮಣ್ಣ ಅವರು ರಾಜ್ಯದಲ್ಲಿ ಇದೇ ಡಿಸೆಂಬರ್ ಮಾಸಾಂತ್ಯದ ಒಳಗೆ ಎಂಟು ಲಕ್ಷ ಮನೆಗಳನ್ನು ನಿರ್ಮಿಸಿ ಅತ್ಯಂತ ಬಡವರು ಮತ್ತು ಕಡು ಬಡವರಿಗೆ ವಿತರಿಸುವ ಗುರಿ ರಾಜ್ಯ ಸರ್ಕಾರ ಹೊಂದಿದೆ ಎಂದು ಪ್ರಕಟಿಸಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಾಜೋಳ, ಗೃಹ ಸಚಿವ ಅರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಬೆಂಗಳೂರು ಕೇಂದ್ರೀಯ ಲೋಕಸಭಾ ಸದಸ್ಯ ಪಿ.ಸಿ. ಮೋಹನ್ ಅವರೂ ಒಳಗೊಂಡಂತೆ ಹಲವು ಗಣ್ಯರು ಈ ವಿಶೇಷ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನಿಯೋಜಿತಗೊಂಡಿರುವ ವಂದಿತಾ ಶರ್ಮ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್ ಅವರೂ ಸೇರಿದಂತೆ  ಹಿರಿಯ ಅಧಿಕಾರಿಗಳು  ಈ ಸಮಾರಂಭದಲ್ಲಿ ಹಾಜರಿದ್ದರು.

Key words: achievement -democracy  – India-CM -Basavaraja Bommai