ದೇಶದಲ್ಲಿ 5,233 ಹೊಸ ಕೋವಿಡ್ ಪ್ರಕರಣಗಳು ಪತ್ತೆ,: ಸಕ್ರಿಯ ಪ್ರಕರಣಗಳ ಸಂಖ್ಯೆ 30 ಸಾವಿರ..

ನವದೆಹಲಿ, ಜೂನ್,8, 2022 (www.justkannada.in): ಭಾರತದಲ್ಲಿ ದೈನಂದಿನ ಕೊರೋನಾ ವೈರಾಣು ಸೋಂಕುಗಳ ಸಂಖ್ಯೆ, 93 ದಿನಗಳ ನಂತರ ೫,೦೦೦ ದಾಟಿದ್ದು, ಕೋವಿಡ್-೧೯ ಪ್ರಕರಣಗಳ ಒಟ್ಟು ಸಂಖ್ಯೆ ೪,೩೧,೯೦,೨೮೨ನ್ನು ಮುಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ೨೮,೮೫೭ಕ್ಕೆ ಹೆಚ್ಚಿದೆ ಎಂದು ಬುಧವಾರ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇಂದು ಬೆಳಿಗ್ಗೆ 8 ಗಂಟೆಗೆ ದಾಖಲಿಸಿರುವ ಹೊಸ ದತ್ತಾಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ೫,೨೩೩ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಏಳು ಹೊಸ ಸಾವುಗಳೊಂದಿಗೆ ಸಾವಿನ ಪ್ರಕರಣಗಳ ಸಂಖ್ಯೆ ೫,೨೪,೭೧೫ಕ್ಕೆ ಏರಿದೆ.

ಸಕ್ರಿಯ ಪ್ರಕರಣಗಳಲ್ಲಿ ಶೇ.೦.೦೭ ರಷ್ಟು  ಒಟ್ಟು ಸೋಂಕುಗಳು ಸೇರಿದ್ದು, ರಾಷ್ಟ್ರಮಟ್ಟದ ಕೋವಿಡ್-೧೯ ಚೇತರಿಕೆ ಪ್ರಮಾಣ ಶೇ.೯೮.೭೨ರಷ್ಟಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಕಳೆದ ೨೪ ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಹೊರೆ ೧,೮೮೧ ರಷ್ಟು ಹೆಚ್ಚಾಗಿದೆ. ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ.೧.೬೭ರಷ್ಟು ದಾಖಲಾಗಿದ್ದರೆ, ವಾರದ ಪಾಸಿಟಿವಿಟಿ ಪ್ರಮಾಣ ಶೇ.೧.೧೨ರಷ್ಟು ದಾಖಲಾಗಿದೆ.

ಸೋಂಕಿನಿಂದ ಚೇತರಿಸಿಕೊಂಡಿರುವವರ ಸಂಖ್ಯೆ ೪,೨೬,೩೬,೭೧೦ಕ್ಕೆ ಏರಿಕೆಯಾಗಿದ್ದು, ಮರಣ ಪ್ರಮಾಣ ಶೇ.೧.೨೧ರಷ್ಟಿದೆ. ದೇಶದಲ್ಲಿ ಈವರೆಗೆ ೧೯೪.೪೩ ಕೋಟಿ ಕೋವಿಡ್ ಲಸಿಕೆಯ ಡೋಸ್‌ ಗಳನ್ನು ಒದಗಿಸಲಾಗಿದೆ.

ಭಾರತದ ಕೋವಿಡ್-19 ಪ್ರಕರಣಗಳ ಸಂಖ್ಯೆ ಆಗಸ್ಟ್ 7, 2020 ರಂದು ೨೦ ಲಕ್ಷ ದಾಟಿತ್ತು. ಆಗಸ್ಟ್ ೩೦ರಂದು ೩೦ ಲಕ್ಷ, ಸೆಪ್ಟೆಂಬರ್ ೫ರಂದು ೪೦ ಲಕ್ಷ ಹಾಗೂ ಸೆಪ್ಟೆಂಬರ್ ೧೬ರಂದು ೫೦ ಲಕ್ಷ ದಾಟಿತು. ಸೆಪ್ಟೆಂಬರ್ ೨೮ಕ್ಕೆ ೬೦ ಲಕ್ಷ ತಲುಪಿ, ಅಕ್ಟೋಬರ್ ೧೧ರ ಹೊತ್ತಿಗೆ ೭೦ ಲಕ್ಷ ತಲುಪಿತು. ಅಕ್ಟೋಬರ್ ೨೯ರಂದು ೮೦ ಲಕ್ಷ ದಾಟಿದ ಪ್ರಕರಣಗಳ ಸಂಖ್ಯೆ ನವೆಂಬರ್ ೨೦ರ ವೇಳೆಗೆ ೯೦ ಲಕ್ಷ ದಾಟಿತು ಮತ್ತು ಡಿಸೆಂಬರ್ ೧೯ರಂದು ಒಂದು ಕೋಟಿ ದಾಟಿತು.

ಕಳೆದ ವರ್ಷ ಮೇ 4ರಂದು ಭಾರತದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ೨ ಕೋಟಿ ದಾಟಿತ್ತು ಮತ್ತು ಜೂನ್ ೩ಕ್ಕೆ ಮೂರು ಕೋಟಿ ದಾಟಿತ್ತು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: 5,233 -new covid-cases-detected – country