ವಿದ್ಯಾರ್ಥಿನಿ ಆತ್ಮಹತ್ಯೆ: ನೀಟ್ ವಿರುದ್ಧ ನಿರ್ಣಯ ಕೈಗೊಳ್ಳುವಂತೆ  ಸರ್ಕಾರಕ್ಕೆ ಹೆಚ್.ಡಿ ಕುಮಾರಸ್ವಾಮಿ ಆಗ್ರಹ.

ಬೆಂಗಳೂರು,ನವೆಂಬರ್,27,2021(www.justkannada.in): ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬಾರದೇ ಸರಕಾರಿ ಸೀಟು ಸಿಗಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನ ಆತ್ಮಹತ್ಯೆಗೆ ಶರಣಾಗಿದ್ದು, ಹೀಗಾಗಿ  ನಮ್ಮ ಮಕ್ಕಳ ಜೀವದ ಜತೆ ಚೆಲ್ಲಾಟ ಆಡುತ್ತಿರುವ ನೀಟ್ ಪರೀಕ್ಷೆ ಬಗ್ಗೆ ನಾವು ಮರು ಆಲೋಚನೆ ಮಾಡಬೇಕಿದೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಈಗಾಗಲೇ ತಮಿಳುನಾಡು ಸರಕಾರ ನೀಟ್ ವಿರುದ್ಧ ನಿರ್ಣಯ ಕೈಗೊಂಡಿದೆ. ನಮ್ಮ ಸರಕಾರವೂ ಇಂತಹ ನಿಲುವಿಗೆ ಬರಲಿ.  ರಾಜ್ಯದಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಸಂಕಲ್ಪ ಅವರ ಹಾದಿ ಹಿಡಿಯುವುದನ್ನು ತಪ್ಪಿಸಬೇಕು ಎಂದು ಮಾಜಿ ಸಿಎಂ ಹೆಚ್,ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಸರಣಿ ಟ್ವಿಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ, ವೈದ್ಯೆ ಆಗಬೇಕು ಎಂದು ಕನಸು ಕಂಡಿದ್ದ ವಿದ್ಯಾರ್ಥಿನಿಯೊಬ್ಬರು ದ್ವಿತೀಯ ಪಿಯುಸಿಯಲ್ಲಿ  ಶೇ.96ರಷ್ಟು ಅಂಕ ಗಳಿಸಿದ್ದರೂ ಅವರಿಗೆ ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬಾರದೇ ಸರಕಾರಿ ಸೀಟು ಸಿಗಲಿಲ್ಲ. ಈ ಕಾರಣಕ್ಕೆ ಆ ಹೆಣ್ಣುಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೊರಬ ತಾಲೂಕಿನ ಚನ್ನಪಟ್ಟಣ ಗ್ರಾಮದ ಸಂಕಲ್ಪ ಎಂಬ ವಿದ್ಯಾರ್ಥಿನಿ ಸಾವಿಗೆ ಶರಣಾಗಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಹೀಗೆ ಜೀವವನ್ನು ಕೊನೆ ಮಾಡಿಕೊಂಡ ಆ ಯುವತಿಯ ದುರ್ಮರಣ ಎಲ್ಲರಿಗೂ ಪಾಠ ಆಗಬೇಕಿದೆ ಎಂದು ಹೇಳಿದ್ದಾರೆ.

ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಹಾಗೂ ಉನ್ನತ ಶಿಕ್ಷಣ ಬಡ, ಸಾಮಾನ್ಯ ಮಕ್ಕಳಿಗೂ ಸಿಗಬೇಕು ಎನ್ನುವ ಕಾಳಜಿಯ ಜತೆಗೆ, ಯಾರೇ ವಿದ್ಯಾರ್ಥಿಗಳು ಸೀಟು ಸಿಗಲಿಲ್ಲ ಎನ್ನುವ ಕಾರಣಕ್ಕೆ ಸಂಕಲ್ಪ ಅವರಂತೆ ಬದುಕನ್ನು ಕೊನೆ ಮಾಡಿಕೊಳ್ಳಬಾರದು.

ಅವಕಾಶಗಳು ಆಕಾಶದಷ್ಟು ಇವೆ. ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಮಾರ್ಗಗಳು ಕೂಡ ಇವೆ. ದೃಢ ಸಂಕಲ್ಪದೊಂದಿಗೆ ಭವಿಷ್ಯ ಕಂಡುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಂಕಲ್ಪ ಅವರಂತೆ ಜೀವ ತೆಗೆದುಕೊಳ್ಳಬಾರದು. ಇದು ನನ್ನ ಕಳಕಳಿಯ ಮನವಿ ಎಂದು ಹೆಚ್.ಡಿಕೆ ಮನವಿ ಮಾಡಿದ್ದಾರೆ.

Key words: Student-suicide-former CM-HD Kumaraswamy –urges- government – against -NEET