ಬೆಂಗಳೂರು,ಸೆಪ್ಟಂಬರ್, 22,2026 (www.justkannada.in) : ಬರ ತಾಲೂಕುಗಳ ಪಟ್ಟಿಗೆ ಮತ್ತೆ ಇಂದು 53 ತಾಲೂಕುಗಳನ್ನ ಸೇರ್ಪಡೆಗೊಳಿಸಿ ಘೋಷಣೆ ಮಾಡಲಾಗುತ್ತದೆ ಎಂದು ಡಿಸಿಎಂ ಡಾ. ಜಿ.ಪರಮೇಶ್ವರ್ ತಿಳಿಸಿದರು.
ವಿಧಾನಮಂಡಲ ವಿಶೇಷ ಅಧಿವೇಶನದಲ್ಲಿ ಬರ ಸಂಬಂಧ ವಿಶೇಷ ಚರ್ಚೆ ನಡೆಯುತ್ತಿದ್ದು ಈ ವೇಳೆ ವಿಧಾನಪರಿಷತ್ ನಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್, ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಕೆಲ ಶಾಸಕರು ಹಾಗೂ ರೈತರು ತಮ್ಮ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿಲ್ಲ ಏಕೆ ಎಂದು ಅಸಮಾಧಾನ ವ್ಯಕ್ತಿಪಡಿಸಿದ್ದರು. ಬಳಿಕ ಮತ್ತೆ 23 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದವು. ಇದೀಗ 53 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡುತ್ತೇವೆ. ಈ ಮೂಲಕ ಒಟ್ಟು 177 ತಾಲೂಕು ಬರಪೀಡಿತ ತಾಲೂಕು ಘೋಷಣೆಯಾಗಲಿದೆ ಎಂದರು.
ಈ ಬಾರಿ ರಾಜ್ಯದಲ್ಲಿ 642 ಮಿಲಿಮೀಟರ್ ಮಳೆ ಮಾತ್ರ ಆಗಿದೆ. ಜೂನ್ ತಿಂಗಳಿನಿಂದ ಈವರೆಗೂ ರಾಜ್ಯದಲ್ಲಿ ಸರಾಸರಿ ಮೈನಸ್ ಶೇ.36ರಷ್ಟು ಮಳೆ ಕೊರತೆಯಾಗಿದ್ದು, ಶೇ.82ರಷ್ಟು ಬೆಳೆ ನಷ್ಟವಾಗಿದೆ. 2020ರಲ್ಲಿ ಕೇಂದ್ರದ ಬರ ಮಾನದಂಡ ಆಧರಿಸಿ ಬರಪೀಡಿತ ಎಂದು ಘೋಷಿಸಬೇಕಿದೆ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದರು.











