ಚುನಾವಣೆ ವೇಳೆ ಗಲಾಟೆ ಹಬ್ಬಿಸುವ ಕೆಲಸ: ಬಿಜೆಪಿ, ಜೆಡಿಎಸ್ ಕುತಂತ್ರ ರಾಜಕಾರಣಕ್ಕೆ ನಿಮ್ಮ ಮಕ್ಕಳನ್ನ ಕಳಿಸಬೇಡಿ-ಎಂ.ಲಕ್ಷ್ಮಣ್.

ಮೈಸೂರು,ಜನವರಿ,30,2024(www.justkannada.in): ರಾಜ್ಯದ ಅಭಿವೃದ್ಧಿ ಕೆಲಸಕ್ಕೆ ಧ್ವನಿ ಎತ್ತದೇ ಕೋಮು ಸೌಹಾರ್ದ ಕದಲುವ ಕೆಲಸದಲ್ಲಿ ಬಿಜೆಪಿ, ಜೆಡಿಎಸ್ ಮಗ್ನರಾಗಿದ್ದಾರೆ. ಚುನಾವಣೆ ವೇಳೆ ಗಲಾಟೆ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ.  ಬಿಜೆಪಿ, ಜೆಡಿಎಸ್ ಕುತಂತ್ರ ರಾಜಕಾರಣಕ್ಕೆ ನಿಮ್ಮ ಮಕ್ಕಳನ್ನ ಕಳಿಸಬೇಡಿ ಎಂದು ಜನರಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮನವಿ ಮಾಡಿದರು.

ಮಂಡ್ಯದ ಕೆರಗೋಡು ಧ್ವಜಸ್ತಂಭ ವಿಚಾರ ಗಲಭೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್  ಶಾಂತಿಯನ್ನು ಕದಡುವ ಕೆಲಸವನ್ನು ಮಾಡುತ್ತಿವೆ. ಜನರು ಬಿಜೆಪಿ ಮತ್ತು ಜೆಡಿಎಸ್ ನವರ ಕುತಂತ್ರ ರಾಜಕಾರಣಕ್ಕೆ ನಿಮ್ಮಮಕ್ಕಳನ್ನ ಕಳಿಸಬೇಡಿ. ಮೊದಲು ಕರಾವಳಿ ಭಾಗದಲ್ಲಿ ನಡೆಯುತ್ತಿತ್ತು. ಈಗ ಹಳೇ ಮೈಸೂರು ಭಾಗದಲ್ಲೂ ಈ ರೀತಿ ಗಲಭೆ ಸೃಷ್ಟಿಸುತ್ತಿದ್ದಾರೆ.ಯಾವ ಧ್ವಜಕ್ಕಾಗಿ ಹೋರಾಟ ಮಾಡುತ್ತೀದ್ದೀರಿ. ರಾಷ್ಟ್ರಧ್ವಜದ ಮೇಲೆ ಇವರಿಗೆ ಗೌರವ ಇಲ್ಲ. ಭಗವತ್ ಧ್ವಜವನ್ನ ಸಂಸತ್ ಭವನದ  ಮೇಲೆ ಹಾರಿಸುತ್ತೇವೆ‌ ಎನ್ನುವುದು ಇವರ ಅಜೆಂಡಾವಾಗಿದೆ. ಕೆರಗೋಡು ಗ್ರಾ.ಪಂ ನೀಡಿರುವ ಅನುಮತಿ ನಿಯಮ ಉಲ್ಲಂಘನೆ ಮಾಡಿ ಹನುಮ ಧ್ವಜವನ್ನ ಹಾರಿಸಿದ್ದಾರೆ. ರಾಷ್ಟ್ರ ಧ್ವಜದ ಕೋಡ್ ಆಫ್ ಕಂಡಕ್ಟ್ ಆಗಿದೆ. ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಕರಾವಳಿಯಲ್ಲಿ ನಡೆಯುತ್ತಿದ್ದ ಕೋಮು ಗಲಭೆ ಪ್ರಯೋಗವನ್ನು ಇಲ್ಲಿ ಪ್ರಯೋಗ ಮಾಡಲು ಬಿಜೆಪಿ, ಜೆಡಿಎಸ್ ನಾಯಕರ ಹುನ್ನಾರ ಇದು ಎಂದು ಕಿಡಿಕಾರಿದರು.

ಮಂಡ್ಯಕ್ಕೆ ಸುಮಾರು 400 ಕ್ಕೂ ಹೆಚ್ಚು ಜನ ಆರ್ ಎಸ್ ಎಸ್ ಕಾರ್ಯಕರ್ತರು ಕರಾವಳಿಯಿಂದ ಬಂದಿದ್ದರು ಎಂಬ ಮಾಹಿತಿ ಇದೆ. ಸಣ್ಣ ವಿಚಾರವನ್ನು ತೆಗೆದುಕೊಂಡು ಈ ರೀತಿ ಗಲಭೆ ಸೃಷ್ಟಿಸುವುದಕ್ಕೆ ನಾಚಿಕೆ ಆಗಬೇಕು. ಕಾಂಗ್ರೆಸ್ ನಾಯಕರ ಫೋಟೋ, ಫ್ಲೆಕ್ಸ್ ಗಳನ್ನು ಹರಿದು ಹಾಕಿ ಒಕ್ಕಲಿಗ v/s ಕುರುಬ, ದಲಿತ v/s ಒಕ್ಕಲಿಗರ ನಡುವೆ ಕೋಮು ಗಲಭೆ ಸೃಷ್ಟಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಉರಿಗೌಡ, ನಂಜೇಗೌಡ ಅಂತ ತಂದರು. ಈಗ ಈ ರೀತಿ ಒಂದೊಂದು ವಿಚಾರಗಳನ್ನು ತಂದು ಗಲಭೆ ಸೃಷ್ಟಿ ಮಾಡುತ್ತಿದ್ದಾರೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ವಿಪಕ್ಷ ನಾಯಕ ಆರ್. ಅಶೋಕ್ ವಿಪಕ್ಷ ನಾಯಕನಾಗಿ ಶ್ಯಾಡೋ ಸಿಎಂ ಆಗಿ ಕೆಲಸ ಮಾಡಬೇಕು. ರಾಜ್ಯದ ಅಭಿವೃದ್ಧಿ ಕೆಲಸಕ್ಕೆ ಧ್ವನಿ ಎತ್ತದೆ ಕೋಮು ಸೌಹಾರ್ದ ಕದಲುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಇಂತಹ ಗಲಭೆಯಲ್ಲಿ ಬಿಜೆಪಿಯವರೇ ಕೆಲವರ ತಲೆ ಉರುಳಿಸಿ ಅದನ್ನ ಕಾಂಗ್ರೆಸ್ ಮೇಲೆ ಹಾಕುವ ವ್ಯವಸ್ಥೆ ಮಾಡುತ್ತಾರೆ. ಯುವಕರು ಅರ್ಥ ಮಾಡಿಕೊಳ್ಳಬೇಕು ಎಂದು ಎಂ.ಲಕ್ಷ್ಮಣ್ ಹೇಳಿದರು.

ಸಂಸದ ಪ್ರತಾಪ್ ಸಿಂಹ ಜನರಿಗೆ ಸುಳ್ಳಿನ ರೈಲು ಬಿಟ್ಟಿದ್ದಾರೆ.

2024 ರ ಫೆಬ್ರವರಿಗೆ ಕುಶಾಲನಗರಕ್ಕೆ ರೈಲು ಬಂದು ನಿಲ್ಲುತ್ತೆ. ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದರು. ಆದರೆ, ಈಗ ಇನ್ನೂ ಸರ್ವೇನೇ ಆರಂಭವಾಗಿಲ್ಲ ಸಂಸದ ಪ್ರತಾಪ್ ಸಿಂಹ ಜನರಿಗೆ ಸುಳ್ಳಿನ ರೈಲು ಬಿಟ್ಟಿದ್ದಾರೆ. ಕೊಡುಗು ಪ್ರತ್ಯೇಕ ಲೋಕಸಭಾ ಕ್ಷೇತ್ರ ಮಾಡುತ್ತೇವೆ. ಏರ್ ಪೋರ್ಟ್ ಅಭಿವೃದ್ಧಿ ಕಾಮಗಾರಿ ಬಗ್ಗೆ ಹಾಗೆ ಹೀಗೆ ಎಂದು ಪುಂಕಾನು ಪುಂಕವಾಗಿ ಹೇಳಿದ್ರಿ. ಇವೆಲ್ಲ ಒಂದು ಕೂಡ ನೆರವೇರಿಲ್ಲ. ಸುಳ್ಳು ಆಶ್ವಾಸನೆಗಳ ಸರದಾರ ಪ್ರತಾಪ್ ಸಿಂಹ.  ಕ್ಷೇತ್ರಕ್ಕೆ ಯಾವ ಯಾವ  ಕಾರ್ಯಕ್ರಮ ತಂದಿದ್ದೀರಿ ಅಂತ ಒಂದು ಶ್ವೇತ ಪತ್ರ ಹೊರಡಿಸಿ ಎಂದು ಎಂ. ಲಕ್ಷ್ಮಣ್ ಸವಾಲು ಹಾಕಿದರು.

ಮಂಡ್ಯದಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಬದಲಿಸಬೇಕು.

ಮಂಡ್ಯದಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಬದಲಿಸಬೇಕು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್, ಸದ್ಯ ಇರುವ ಪೊಲೀಸ್ ಅಧಿಕಾರಿಗಳಲ್ಲಿ ಬಿಜೆಪಿ ಮೈಂಡ್ ಸೆಟ್ ಇದೆ. ನಿನ್ನೆ ಕಾಂಗ್ರೆಸ್ ನಾಯಕರ ಭಾವಚಿತ್ರದ ಫ್ಲೆಕ್ಸ್ ಹರಿದು ಹಾಕಿದ್ದಾರೆ. ಕುರುಬ ಸಮುದಾಯ ಹಾಸ್ಟೆಲ್ ಗೆ ತೆರಳಿ ಸಿದ್ದರಾಮಯ್ಯ ಫೋಟೋ ಹರಿದಿದ್ದಾರೆ. ಒಬ್ಬ ಸಿಎಂ ಫೋಟೊ ಹರಿಯುವಾಗ ಪೊಲೀಸರು ಎಲ್ಲಿದ್ದರು? ಬಿಜೆಪಿ ಮೈಂಡ್ ಸೆಟ್ ನಿಂದ ಪೊಲೀಸರು ಹೊರ ಬಂದಿಲ್ಲ. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಕೆಲ ಅಧಿಕಾರಿಗಳಿಂದ ನಡೆಯುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಇದ್ದ ಪೊಲೀಸ್ ಅಧಿಕಾರಿಗಳೇ ಈಗಲೂ ಇದ್ದಾರೆ. ನಿನ್ನೆ ಪ್ರಕರಣದಲ್ಲಿ ಪೊಲೀಸರು ಎಷ್ಟು ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ? ಎಷ್ಟು ಮಂದಿಯ ಮೇಲೆ ಎಫ್ ಐಆರ್ ಹಾಕಿದ್ದಾರೆ.? ಬಿಜೆಪಿಗರ ಹಾಗೆ ನಾವು ಅವರ ನಾಯಕರ ಭಾವಚಿತ್ರ ಹರಿಯಲು ನಮ್ಮ ಕಾರ್ಯಕರ್ತರಿಗೆ ಕರೆ ಕೊಡಬೇಕಾ…? ಚುನಾವಣೆ ವೇಳೆ ಗಲಾಟೆ ಹಬ್ಬಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಮುಗ್ದ ಮಕ್ಕಳ ಮನಸ್ಸು ಕೆಡಿಸಿ ಗಲಾಟೆ ಹಬ್ಬಿಸುತ್ತಿದ್ದಾರೆ ಎಂದು ಎಂ ಲಕ್ಷ್ಮಣ್ ಅಕ್ರೋಶ ವ್ಯಕ್ತಪಡಿಸಿದರು.

Key words: creating- noise – elections-BJP- JDS –kpcc-M. Laxman.