ಸಿಎಂ ಭೇಟಿ ಮಾಡಿ ಬಾಕಿ ಬಿಲ್ ಬಿಡುಗಡೆಗೆ ಮನವಿ ಸಲ್ಲಿಸಿದ ಪಾಲಿಕೆ ಗುತ್ತಿಗೆದಾರರ ಸಂಘ.

ಬೆಂಗಳೂರು,ಆಗಸ್ಟ್,8,2023(www.justkannada.in):  ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಬಾಕಿ ಬಿಲ್ ಬಿಡುಗಡೆಗೆ ಮನವಿ ಸಲ್ಲಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 28 ತಿಂಗಳ ಹಿಂದೆ ಪೂರ್ಣಗೊಳಿಸಿರುವ ಕಾಮಗಾರಿಗಳ ಬಿಲ್ ಪಾವತಿ ಬಾಕಿ ಇರುತ್ತದೆ. ಚುನಾವಣೆ, ಹೊಸ ಸರ್ಕಾರ ರಚನೆ ಹೀಗೆ 8 ತಿಂಗಳಿನಿಂದ ಬಾಕಿ ಮೊತ್ತ ಬಿಡುಗಡೆ ಆಗಿಲ್ಲ. ಇದರಿಂದ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಂಬ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್. ಅಂಬಿಕಾಪತಿ ತಿಳಿಸಿದರು.

ಸರಕಾರದಿಂದ ಬಿಡುಗಡೆ ಆಗಿರುವ ಅನುದಾನ ಪಾಲಿಕೆಯ ಖಜಾನೆಯಲ್ಲಿ ಇದ್ದರೂ ಗುತ್ತಿಗೆದಾರರಿಗೆ ಬಾಕಿ ಬಿಡುಗಡೆ ಆಗುತ್ತಿಲ್ಲ ಎಂಬುದನ್ನು ಸಿಎಂ ಗಮನಕ್ಕೆ ತಂದವು.  ಇದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿ ಬಿಲ್ ಪಾವತಿ ಸಂಬಂಧ  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯ ಆಯುಕ್ತರೊಂದಿಗೆ ಚರ್ಚಿಸಿ ಆದಷ್ಟು ತ್ವರಿತವಾಗಿ ಬಾಕಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಜಿ.ಎಂ. ರವೀಂದ್ರ, ನಂದಕುಮಾರ್ ಜಿ.ಎಂ. ಡಿ.ಎಂ.ನಾಗರಾಜ್, ಹನುಮಂತಯ್ಯ ಮೊದಲಾದವರು ಉಪಸ್ಥಿತರಿದ್ದರು.

Key words: Corporation -Contractors – CM – request – release – bills.