ನಾಳೆ ಏನಿರುತ್ತೆ..? ಏನಿರೋಲ್ಲಾ..? ಕರೊನಾ ವೈರಸ್ ಕುರಿತು ಸಿಎಂ ಬಿಎಸ್ ವೈ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ಕೈಗೊಂಡ ನಿರ್ಧಾರಗಳೇನು ಗೊತ್ತೆ..?

ಬೆಂಗಳೂರು,ಮಾ,13,2020(www.justkannada.in): ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆ ನಾಳೆಯಿಂದ ಒಂದು ವಾರಗಳ ಕಾಲ ಮಾಲ್ ಗಳು ಸಿನಿಮಾ, ಥಿಯೇಟರ್ ಗಳು, ಕಾಲೇಜುಗಳು ವಿವಿಗಳನ್ನ ಬಂದ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ನಡುವೆ ರಾಜ್ಯದಲ್ಲಿ ಎಲ್ಲಾ ಬಂದ್ ಆಗಲ್ಲ ದಿನನಿತ್ಯ ಸೇವೆಗಳು ಎಂದಿನಂತೆ ಇರುತ್ತವೆ ನಾಳೆ  ಯಥಾ ಪ್ರಕಾರ ರೈಲು ವಿಮಾನ, ಬಸ್  ಸಂಚಾರವಿರುತ್ತದೆ.  ಎಂದಿನಂತೆ ಬ್ಯಾಂಕ್, ಅಂಗಡಿಗಳು ತೆರೆದಿರುತ್ತವೆ.  ಮೆಡಿಕಲ್ ಸ್ಟೋರ್. ಆಸ್ಪತ್ರೆಗಳು ಓಪನ್ ಆಗಿರುತ್ತವೆ. ಇನ್ನು ತರಕಾರಿ ಪೇಪರ್ ಹಾಲು ಸಹ ಸಿಗುತ್ತದೆ. ದೇವಾಲಯ ಚರ್ಚ್ ಮಸೀದಿಗಳು ಸಹ ತೆರೆದುರುತ್ತದೆ,  ದಿನನಿತ್ಯ ಸೇವೆಗಳು ಲಭ್ಯವಿರುತ್ತೆ. ಹೀಗಾಗಿ ಜನರು ಆತಂಕಪಡುವುದು ಬೇಕಾಗಿಲ್ಲ.

ಜತೆಗೆ ಬಾರ್ ರೆಸ್ಟೋರೆಂಟ್ ಗಳು ಸಹ ತೆರೆದಿರುತ್ತವೆ. ಕರೊನಾ ವೈರಸ್ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ  ಉನ್ನತ ಮಟ್ಟದ ಸಭೆ ನಡೆಸಿದರು. ಸಭೆ  ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಿಎಂ ಬಿಎಸ್ ವೈ ತಿಳಿಸಿದ ಮುಖ್ಯಾಂಶಗಳು ಹೀಗಿದೆ ನೋಡಿ…

  1. ನಾಳೆಯಿಂದ ಒಂದು ವಾರದ ಅವಧಿಗೆ ರಾಜ್ಯಾದ್ಯಂತ ಮಾಲ್‍ಗಳು, ಚಿತ್ರಮಂದಿರಗಳು, ನೈಟ್ ಕ್ಲಬ್ ಮುಚ್ಚುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
  2. ಬೇಸಿಗೆ ಶಿಬಿರಗಳು, ಸಭೆ ಸಮಾರಂಭಗಳು, ಕ್ರೀಡಾಕೂಟ, ವಿಚಾರ ಸಂಕಿರಣ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸದಿರುವಂತೆ ಅವರು ಸೂಚಿಸಿದ್ದಾರೆ.
  3. ಸರ್ಕಾರ ನಡೆಸುತ್ತಿರುವ ವಿದ್ಯಾರ್ಥಿನಿಲಯಗಳು, ಸರ್ಕಾರಿ ವಸತಿ ಶಾಲೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ.
  4. ಪರೀಕ್ಷೆಗಳು, ಸರ್ಕಾರಿ ಕಚೇರಿಗಳು, ಅಧಿವೇಶನ ಅಬಾಧಿತವಾಗಿ ನಡೆಯಲಿವೆ.
  5. ವಿಶ್ವವಿದ್ಯಾಲಯ, ಕಾಲೇಜುಗಳಿಗೂ ಒಂದು ವಾರ ರಜೆ ಘೋಷಿಸಲಾಗುವುದು.
  6. ಸಾರ್ವಜನಿಕರು ಸಹಕರಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
  7. ಕರೊನಾ ವೈರಸ್ ಸೋಂಕಿನಿಂದ ಕಲಬುರಗಿಯ ವ್ಯಕ್ತಿಯೊಬ್ಬರು ದುರದೃಷ್ಟವಶಾತ್ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಡಾ. ದೇವಿ ಶೆಟ್ಟಿ ಹಾಗೂ ವಿವಿಧ ವೈದ್ಯಕೀಯ ಸಂಘಟನೆಗಳೊಂದಿಗೆ ಸಭೆ ನಡೆಸಿದ ನಂತರ ಮುಖ್ಯಮಂತ್ರಿಗಳಳು ಈ ನಿರ್ಧಾರವನ್ನು ಪ್ರಕಟಿಸಿದರು.
  8. ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ ಹಾಗೂ ಡಾ. ಅಶ್ವತ್ಥನಾರಾಯಣ, ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಶಿಕ್ಷಣ ಸಚಿವರು ಎಸ್.ಸುರೇಶ್ ಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
  9. ಈ ಸೋಂಕು ತಗುಲದೆ ಇರುವಂತೆ ಮುನ್ನೆಚ್ಚರಿಕೆ ವಹಿಸಲು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು.
  10. ಎಲ್ಲ ಖಾಸಗಿ ಆಸ್ಪತ್ರೆಯವರು ಈ ಸೋಂಕಿನ ಲಕ್ಷಣ ಇರುವ ರೋಗಿಗಳು ಬಂದಲ್ಲಿ ಕಡ್ಡಾಯವಾಗಿ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಈ ಬಗ್ಗೆ ಖಾಸಗಿ ಆಸ್ಪತ್ರೆಗಳ ಸಂಘಟನೆಯವರಿಗೂ ಸೂಚನೆ ನೀಡಲಾಗಿದೆ.
  11. ವಿದೇಶ ಪ್ರಯಾಣದಿಂದ ಬಂದ ಪ್ರಯಾಣಿಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಮತ್ತು ಅವರ ಕುಟುಂಬದವರು ಅವರು ಯಾವುದೇ ದೇಶದಿಂದ ಹಿಂದಿರುಗಿದರೂ, ಕಡ್ಡಾಯವಾಗಿ 14 ದಿನಗಳ ಕಾಲ ಅವರ ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು (ಐಸೋಲೇಷನ್).
  12. ಎಲ್ಲ ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಖಾಸಗಿ ಕ್ಲಿನಿಕ್‍ನವರು ಕಳೆದ 14 ದಿನಗಳಿಂದ ವಿದೇಶದಿಂದ ಹಿಂದಿರುಗಿ ಚಿಕಿತ್ಸೆ ಪಡೆದವರು ಇದ್ದಲ್ಲಿ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು.
  13. ಖಾಸಗಿ ಆಸ್ಪತ್ರೆಗಳು ಎಲ್ಲ ರೀತಿಯಲ್ಲೂ ಸಹಕರಿಸಬೇಕು.
  14. ಐಎಂಎ, ಡಾ. ದೇವಿ ಶೆಟ್ಟಿ, ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಡಾ. ರವೀಂದ್ರ ಅವರು ಸೇರಿದಂತೆ ಖಾಸಗಿ ಆಸ್ಪತ್ರೆಯವರು, ತಜ್ಞ ವೈದ್ಯರೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿದರು. ಕೋವಿಡ್ 19 ಸೋಂಕು ಹರಡದಂತೆ ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಅವರ ಜೊತೆಗೆ ಸಮಾಲೋಚನೆ ನಡೆಸಿದ್ದೇನೆ.
  15. ಸುಧಾ ಮೂರ್ತಿಯವರು ಇನ್‍ಫೋಸಿಸ್ ಫೌಂಡೇಷನ್ ವತಿಯಿಂದ ಈ ಸೋಂಕು ತಡೆಗಟ್ಟುವಲ್ಲಿ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
  16. ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಿ. ಯಾರನ್ನೂ ಮುಟ್ಟಬೇಡಿ. (ಸೋಷಿಯಲ್ ಡಿಸ್ಟೆನ್ಸಿಂಗ್)
  17. ಸೋಂಕು ಪರೀಕ್ಷೆಗೆ ಹೆಚ್ಚುವರಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು.
  18. ಖಾಸಗಿ ಆಸ್ಪತ್ರೆಗಳೊಂದಿಗೆ ಸಮನ್ವಯ ವಹಿಸಲು ಒಂದು ಸಮಿತಿ ರಚಿಸಲಾಗುವುದು.

Key words: corona virus- high-level- meeting-CM BS Yeddyurappa- tomorrow-