ಕಲುಷಿತ ನೀರಿನ ದುರಂತ: ಮರುಕಳಿಸಿದರೆ ಸಿಇಓ ಸಸ್ಪೆಂಡ್- ಸಿಎಂ ಸಿದ್ಧರಾಮಯ್ಯ ಖಡಕ್ ಎಚ್ಚರಿಕೆ

ಬೆಂಗಳೂರು, ಜೂನ್ 12,2023(www.justkannada.in):  ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರಿನ ಅನಾಹುತ ಮರು ಕಳಿಸಿದರೆ ನೇರವಾಗಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಹೊಣೆ ಮಾಡಿ ಅಮಾನತ್ತುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಡೆಯ ಎಚ್ಚರಿಕೆ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದ ವೇಳೆ ಈ ಎಚ್ಚರಿಕೆ ನೀಡಿದರು.

ಮೊದಲ ಅನಾಹುತ ಸಂಭವಿಸಿದಾಗಲೇ ಏಕೆ ಎಚ್ಚೆತ್ತುಕೊಳ್ಳಲಿಲ್ಲ ? ಮತ್ತೆ ಘಟನೆ ಮರುಕಳಿಸಿದೆ. ನೀವು ಏನ್ ಮಾಡ್ತಾ ಇದೀರಿ? ಕಚೇರಿಯಲ್ಲಿ ಕುಳಿತು ಕೆಲಸ ಮಾಡಬಾರದು. ಸ್ಥಳಕ್ಕೆ ಭೇಟಿ ನೀಡಿ ಸಮಗ್ರವಾಗಿ ಅಧ್ಯಯನ ನಡೆಸಿ ಮತ್ತೆ ಕಲುಷಿತ ನೀರಿನ ಅನಾಹುತ ಆಗಬಾರದು. ಮತ್ತೆ ಮರುಕಳಿಸಿದರೆ ನೀವೇ ಹೊಣೆ ಆಗುತ್ತೀರಿ. ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ತನಿಖೆಗೆ ಆದೇಶ

ಕೊಪ್ಪಳ ಜಿಲ್ಲೆ ಸೇರಿ ಎಲ್ಲೆಲ್ಲಿ ಕಲುಷಿತ ನೀರು ಕುಡಿದು ಜನರ ಆರೋಗ್ಯ ಮತ್ತು ಜೀವಕ್ಕೆ ಸಮಸ್ಯೆ ಆಗಿದೆಯೊ ಆ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.

ಈಗಾಗಲೇ ಸ್ಥಳೀಯವಾಗಿ ತನಿಖೆ ನಡೆಯುತ್ತಿದೆ. ಬೆಂಗಳೂರು ಕೇಂದ್ರದಿಂದಲೂ ತಂಡವನ್ನು ಕಳುಹಿಸಿ ತನಿಖೆ ನಡೆಸಲಾಗುವುದು. ಎರಡೂ ವರದಿಗಳು ಬಂದ ಬಳಿಕ ತಪ್ಪಿತಸ್ಥರನ್ನು ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಕಾರ್ಯದರ್ಶಿಗಳು ಮುಖ್ಯಮಂತ್ರಿಗಳಿಗೆ ತಿಳಿಸಿದರು.  ಸಭೆಯಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಅವರು ಉಪಸ್ಥಿತರಿದ್ದರು.

Key words: Contaminated –water- tragedy- CEO – CM -Siddaramaiah -warns