ಜೂ.30ರಂದು ಮೂರು ಎಂಎಲ್ ಸಿ ಸ್ಥಾನಕ್ಕೆ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಹಲವು ಮುಖಂಡರ ನಡುವೆ ಪೈಪೋಟಿ ಶುರು..

ಮೈಸೂರು,ಜೂನ್,12,2023(www.justkannada.in): ರಾಜ್ಯದಲ್ಲಿ ಇತ್ತೀಚೆಗಷ್ಟೆ ವಿಧಾನಸಭಾ ಚುನಾವಣೆ ಮುಗಿದಿದ್ದು,  ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿದೆ.  ಈ  ಬೆನ್ನಲ್ಲೇ ಸದಸ್ಯರ ರಾಜೀನಾಮೆಯಿಂದ ತೆರವಾಗಿರುವ ಮೂರು ವಿಧಾನ ಪರಿಷತ್ ಸದಸ್ಯ ಸ್ಥಾನಗಳಿಗೆ ಜೂ.30ರಂದು ಚುನಾವಣಾ  ನಡೆಸಲು ದಿನಾಂಕ ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಹಲವು ಹಿರಿಯ ಮುಖಂಡರು ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಸದ್ದಿಲ್ಲದೆ ಪೈಪೋಟಿ ಶುರು ಮಾಡಿದ್ದಾರೆ.

ತೆರವಾಗಿರುವ ಮೂರು ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗವು ಜೂನ್ 30 ರಂದು ಚುನಾವಣೆ ನಡೆಸಲು ದಿನಾಂಕ ಪ್ರಕಟಿಸಿದೆ. ಹೀಗಾಗಿ, ನಿಗಮ ಮಂಡಳಿ ಅಧ್ಯಕ್ಷಗಳ ಮೇಲೆ ಕಣ್ಣಿಟ್ಟಿದ್ದ ಅನೇಕರು ಮೈಸೂರು ಜಿಲ್ಲೆಗೆ ಒಂದು ಪರಿಷತ್ ಸ್ಥಾನವನ್ನಾದರೂ ಕೊಡಬೇಕೆಂದು ಹೇಳುವ ಮೂಲಕ ತಮ್ಮನ್ನು ಪರಿಗಣಿಸುವಂತೆ ಬೇಡಿಕೆ ಇಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಎಂಎಲ್ ಸಿ ಟಿಕೆಟ್ ಗಾಗಿ ಎಂ. ಲಕ್ಷ್ಮಣ್ ಸೇರಿ ಹಲವು ಮುಖಂಡರ ಪೈಪೋಟಿ.

ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ,ರಾಜ್ಯ ಬಿಜೆಪಿ ಸರ್ಕಾರಗಳ ವೈಫಲ್ಯ,ಭ್ರಷ್ಟಾಚಾರದ ವಿರುದ್ಧ ದಾಖಲೆಗಳ ಸಮೇತ ಪತ್ರಿಕಾಗೋಷ್ಠಿ ನಡೆಸುವ ಜತೆಗೆ ಪಕ್ಷದ ವಕ್ತಾರ ಹುದ್ದೆಯನ್ನು ಪರಿಣಾಮಕಾರಿಯಾಗಿ ಬಳಸಿ ಗಮನ ಸೆಳೆದಿರುವ ಎಂ.ಲಕ್ಷ್ಮಣ್ ಪರಿಷತ್ ಸದಸ್ಯ ಸ್ಥಾನದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕಿಂತ ಪರಿಷತ್ ಸ್ಥಾನ ಸಿಕ್ಕಿದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದಿಷ್ಟು ಕೆಲಸ ಮಾಡಲು ಅವಕಾಶ ದೊರೆಯಲಿದೆ ಎನ್ನುವ ನಿರೀಕ್ಷೆ ಹೊತ್ತು ಪರೋಕ್ಷವಾಗಿ ನಾಯಕರ ಗಮನಕ್ಕೆ ತಂದಿದ್ದಾರೆ.

ಕಳೆದ 2018ರಲ್ಲಿ ಪಿರಿಯಾಪಟ್ಟಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ.ಬಿ.ಜೆ.ವಿಜಯಕುಮಾರ್ ಅವರು ೨೦೨೩ರ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು. ಆದರೆ ಮಾವಿನಹಳ್ಳಿ ಸಿದ್ದೇಗೌಡರ ಪಾಲಾಗಿ ವಂಚಿತರಾಗಿದ್ದರು. ಕಳೆದ 9 ವರ್ಷಗಳಿಂದ ಮೈಸೂರು ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿಕೊಂಡು ಬಂದಿರುವ ಹಿನ್ನಲೆಯಲ್ಲಿ ತಮಗೆ ಆದ್ಯತೆ ಕೊಡುವಂತೆ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಅವರು ಸಹ ವಿಧಾನಪರಿಷತ್ ನ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.  ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರ ಇಲ್ಲದ ಕಾರಣ ಪರಿಷತ್ ಸದಸ್ಯರನ್ನಾಗಿ ಮಾಡುವಂತೆ  ಮನವಿ ಮಾಡಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ಅವರನ್ನು ಮುಡಾ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆ ಇದ್ದರೂ ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆಂದು ಮೂಲಗಳು ಹೇಳಿವೆ. ಕೆ.ಮರೀಗೌಡ  ಅವರು ಸಿದ್ದರಾಮಯ್ಯ ಅವರ ಪರಮಾಪ್ತರಾಗಿದ್ದು ಎಂಎಲ್ ಸಿ ಟಿಕೆಟ್ ಸಿಗುತ್ತಾ ಕಾದು ನೋಡಬೇಕಿದೆ.

ಹಾಗೆಯೇ ರಾಜ್ಯಮಟ್ಟದ ಮಹಿಳಾ ನಾಯಕರಲ್ಲಿ ಒಬ್ಬರಾಗಿರುವ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿರುವ ಡಾ.ಪುಷ್ಪ ಅಮರನಾಥ್ ಕೂಡ ಪರಿಷತ್ ಸದಸ್ಯ ಸ್ಥಾನದ ಮೇಲೆ ಕಣ್ಣು ಹಾಕಿದ್ದಾರೆ. ಸಕಲೇಶಪುರ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಡಾ.ಪುಷ್ಪ ಅಮರನಾಥ್  ಅವರು ಈಗ ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.  ಇದೇ ರೀತಿ ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಮಹಾಪೌರರಾದ ಅನಂತು,ನಾರಾಯಣ,ಆರಿಫ್ ಹುಸೇನ್,ಮಾಜಿ ಶಾಸಕಿ ಸುನೀತಾವೀರಪ್ಪಗೌಡ, ಬನ್ನೂರು ಕೃಷ್ಣಪ್ಪ ಮೊದಲಾದ ನಾಯಕರು ರೇಸ್‌ ನಲ್ಲಿದ್ದಾರೆ ಎನ್ನಲಾಗಿದೆ.

-V.Mahesh kumar

Key words: MLC – Election -June 30-Competition – many leaders -Mysore district