ಮೈಸೂರು ವಿವಿಯನ್ನು ಸಂಶೋಧನಾ ವಿಶ್ವವಿದ್ಯಾಲಯವೆಂದು ಪರಿಗಣಿಸಿ: ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು, ಅಕ್ಟೊಂಬರ್, 05, 2020: ಮೈಸೂರು ವಿವಿ ನೂರು ವರ್ಷದಲ್ಲಿ ಅನೇಕ ಸಂಶೋಧನೆಗಳನ್ನು ಹೊರತಂದಿದೆ. ಹೀಗಾಗಿ,  ಮೈಸೂರು ವಿವಿಯನ್ನು ಸಂಶೋಧನಾ ವಿವಿ  ಎಂದು ಪರಿಗಣಿಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

ಸೋಮವಾರ ಮೈಸೂರು ವಿವಿ ವಿಜ್ಞಾನಭವನದಲ್ಲಿ ಹಲವು ವಿವಿಗಳ ಪರಿಣಿತರು ಸೇರಿ ಹೊರತಂದ ‘’ಕೋವಿಡ್-19’’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಮೈಸೂರು ವಿವಿಯು ಈಗಿರುವ 48% ಸಿಬ್ಬಂದಿಯಲ್ಲಿಯೇ ಸಂಶೋಧನೆಯಲ್ಲಿ 27 ರ್ಯಾಂಕ್ ಪಡೆದುಕೊಂಡಿದೆ.  100% ಸಿಬ್ಬಂದಿ ನೀಡಿದರೆ ಖಂಡಿತವಾಗಿ ಸಂಶೋಧನೆಯಲ್ಲಿ ಮತ್ತಷ್ಟು ಉತ್ತಮ ರ್ಯಾಂಕ್ ಗಳಿಸುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಬೇರೆ ದೇಶಗಳಲ್ಲಿ ವಿಜ್ಞಾನ ಸಂಶೋಧನೆಗೆ ಒತ್ತು ನೀಡಲಾಗಿದೆ. ಆದರೆ, ನಮ್ಮ ದೇಶದಲ್ಲಿ ಸಂಶೋಧನೆಗೆ ಹೆಚ್ಚಿನ ಹಣ ನೀಡಿಲ್ಲ. ಸಂಶೋಧಕರು ಕಡಿಮೆಯಿದ್ದಾರೆ. ಹೀಗಾಗಿಯೂ, ಭಾರತವು ಸಂಶೋಧನೆಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ.  ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನೆ ಅಗತ್ಯವಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಶೋಧನೆಗೆ ಮತ್ತಷ್ಟು ಒತ್ತು ನೀಡುವ ಸಾಧ್ಯತೆಯಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಮೈಸೂರು ವಿವಿ 104ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅನೇಕ ಸಂಶೋಧನೆಗಳನ್ನು ನಡೆಸಿದೆ.  ಈ ಎಲ್ಲಾ ಸಂಶೋಧನೆಗಳ ನಡುವೆಯೂ ಕೊರೊನಾ ತಡೆಗಟ್ಟಲು, ಅದರಿಂದ ರಕ್ಷಿಸಿಕೊಳ್ಳುವ ಸಂಶೋಧನೆಯಲ್ಲಿ ವಿಶ್ವವೇ ಸೋತಿದೆ ಎಂದರು.

ಮಾನವರು ವಿಜ್ಞಾನದ ಎಲ್ಲಾ ಅಂಶಗಳನ್ನು ಅರಿಯಬಹುದು. ಆದರೆ, ಅದನ್ನು ನಿಯಂತ್ರಿಸುವುದು ಕಷ್ಟ. ಈ ನಿಟ್ಟಿನಲ್ಲಿ ಯಾವುದೋ ದೈವಿ ಶಕ್ತಿ ನಮ್ಮನ್ನು ನಿಯಂತ್ರಿಸುತ್ತಿದೆ ಎಂಬುದು ಕೊರೊನಾ ಸಂಕಷ್ಟದಲ್ಲಿ ಜಗತ್ತಿಗೆ ತಿಳಿದಿದೆ ಎಂದು ತಿಳಿಸಿದರು.

ಶಾಸಕ ತನ್ವೀರ್ ಸೇಠ್  ಮಾತನಾಡಿ, ಕೋವಿಡ್-19 ಕೃತಿಯು ಹಲವು ವಿವಿಗಳ ಪರಿಣಿತರು ಸೇರಿ ಹೊರ ತಂದಿರುವ ಕೃತಿಯಾಗಿದೆ. ನನ್ನ ರಕ್ಷಣೆ ನಾನೇ ಮಾಡಿಕೊಳ್ಳಬೇಕು ಎಂಬ ಸತ್ಯವನ್ನು ಈ ಪುಸ್ತಕ ತಿಳಿಸುತ್ತದೆ ಎಂದರು.

ಕೊರೊನಾ ವಿಶ್ವವನ್ನು ಬೆಚ್ಚಿಬೀಳಿಸಿದೆ.  ಬಿರುಗಾಳಿಯನ್ನು ತಡೆಯುವಂತಹ ತಂತ್ರಜ್ಞಾನವಿದ್ದರೂ, ಕೊರೊನಾ ತಡೆಗಟ್ಟುವಲ್ಲಿ ವಿಫಲರಾಗಿದ್ದೇವೆ. ಧರ್ಮಗಳು ಮನುಷ್ಯರ ಜೀವನಶೈಲಿ ಎನ್ನುವುದಾಗಿದೆ. ವಿಜ್ಞಾನ ಬಹಳ ಮುಖ್ಯವಾಗಿದ್ದು, ವಿಜ್ಞಾನ ಪ್ರತಿ ಮನುಷ್ಯರ ಜೀವನ ಶೈಲಿಯಾಗಬೇಕು. ಹೀಗಾದಾಗ ಮಾತ್ರವೇ ಈ ರೀತಿಯ ವೈರಸ್ ಗಳನ್ನು ತಡೆಗಟ್ಟಬಹುದು ಎಂದರು.

ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಬೇಕಿದೆ. ಜಿಡಿಪಿ ಬಂದ ಸಂದರ್ಭದಲ್ಲಿ ಕೇವಲ ಉತ್ಪಾದನೆಗೆ ಒತ್ತು ನೀಡಲಾಗಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿಲ್ಲ. ಹೊಸ ಶಿಕ್ಷಣ ನೀತಿ ಬಂದಿರುವುದು ಎಲ್ಲೊ ಒಂದು ಕಡೆ ಬದಲಾವಣೆ ತರಬಹುದು ಎಂದು ಹೇಳುತ್ತಾರೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದರೆ ಜಿಡಿಪಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ ಎಂದು ವಿವರಿಸಿದರು.

ವಿಜ್ಞಾನ ವಿಭಾಗಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಕೊರೊನಾದಂತಹ ಸಮಸ್ಯೆಗಳು ಎದುರಾದಾಗ ಈ ಸಮಸ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಏನು ಮಾಡಬೇಕು ಎಂಬುದಾಗಿ ಅರಿವು ಮೂಡಿಸುವುದು ಬಹಳ ಮುಖ್ಯ. ವೈಯಕ್ತಿಕವಾಗಿ ನಾವು ಸುರಕ್ಷಿತವಾಗಿದ್ದರೆ, ಮತ್ತೊಬ್ಬರ ಸುರಕ್ಷತೆ ಬಯಸಲು ಸಾಧ್ಯ. ಈ ದೃಷ್ಟಿಯಲ್ಲಿ ಎಲ್ಲರೂ ಕೊರೊನಾ ವಾರಿಯರ್ಸ್ ಗಳು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಷ್ಯಾದ ಸಂಶೋಧನಾ ವಿಜ್ಞಾನಿ ಡಾ.ಸಯ್ಯಾದ್ ಬೇಕರ್, ಮೈಸೂರು ವಿವಿ ಸೂಕ್ಷ್ಮ ಜೀವವಿಜ್ಞಾನ ಪ್ರಾಧ್ಯಾಪಕ ಪ್ರೊ.ಡಾ.ಎಸ್.ಸತೀಶ್, ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ನಾಗೇಂದ್ರ ಪ್ರಸಾದ್  ಇತರರು ಉಪಸ್ಥಿತರಿದ್ದರು.