ಮೈಸೂರು,ನವೆಂಬರ್,11,2026 (www.justkannada.in): ನಿಗಮ ಮಂಡಳಿಗಳ ನಿರ್ದೇಶಕರು ಸದಸ್ಯರುಗಳ ನೇಮಕ ಮಾಡುತ್ತೇವೆ. ಪಟ್ಟಿ ಸಿದ್ದವಾಗಿದ್ದು, ಸಂಜೆ ಅದನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳುವ ಮೂಲಕ ಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರಿಗೆ ದೀಪಾವಳಿ ಗಿಫ್ಟ್ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಇಂದು 500 ಜನ ಕಾಂಗ್ರೆಸ್ ಕಾರ್ಯಕರ್ತರಿಗೆ ವಿವಿಧ ಅಧಿಕಾರ ಹಂಚಿಕೆ ಮಾಡಲಾಗುತ್ತಿದ್ದು, ನಾನು ಈಗಾಗಲೇ ಪಟ್ಟಿಗೆ ಸಹಿ ಹಾಕಿದ್ದೇನೆ. ವರ್ಗೀಕರಣ ನಡೆಯುತ್ತಿದೆ, ಮುಗಿದ ಕೂಡಲೇ ಬಿಡುಗಡೆಯಾಗುತ್ತದೆ. ಒಟ್ಟು ಮೂರು ಹಂತದಲ್ಲಿ ಅಧಿಕಾರ ಹಂಚಿಕೆ ಮಾಡುತ್ತೇವೆ. ಇಂದು ಸದಸ್ಯರು ಹಾಗೂ ನಿರ್ದೇಶಕರ ನೇಮಕವಾಗುತ್ತದೆ. ಇನ್ನೂ ಎರಡು ಪಟ್ಟಿಯಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೇಮಕವಾಗಲಿದೆ. ಎಲ್ಲವೂ ಅಂತಿಮ ಹಂತದಲ್ಲಿದೆ. ಕೆಲ ಶಾಸಕರಿಗೆ ಸ್ಥಾನ ಕೊಡಬೇಕಿದೆ, ಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಹೌದು ರೀ ನಾವು ಅವರ ಮಕ್ಕಳೇ.
ಕಾಂಗ್ರೆಸ್ ಕಾರ್ಯಕರ್ತರಿಗೆ ನನ್ನ ಮಕ್ಕಳು ಎಂದು ಬೈದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ತಿರುಗೇಟು ನೀಡಿದ ಸಿಎಂ ಡಿಕೆ ಶಿವಕುಮಾರ್, ಹೌದು ರೀ ನಾವು ಅವರ ಮಕ್ಕಳೇ. ಅವರು ದೇವೇಂದ್ರ ತಾನೇ, ಅವರ ಹೆಸರು ಗೊತ್ತಿಲ್ಲ ನನಗೆ. ಅವರು ಮೇಲಿಂದ ಬಂದ ದೇವೇಂದ್ರ ತಾನೇ. ನಾವು ಅವರ ಮಕ್ಕಳೇ ಬಿಡಿ ಎಂದು ಲೇವಡಿ ಮಾಡಿದರು.
ಬಿಜೆಪಿಯಲ್ಲಿ ಅವರು ಯಾರೋ ಇನ್ನೊಬ್ಬ ತುಂಡು ತುಂಡು ಕತ್ತರಿಸುತ್ತೇವೆ ಎನ್ನುತ್ತಾರೆ. ಅದಕ್ಕೆ ನಮ್ಮ ಹುಡುಗರು ಕತ್ತರಿಸಲಿ ಎಂದು ಚಾಕು ಚೂರಿ ಕಳುಹಿಸಿದ್ದಾರೆ. ಬಿಜೆಪಿಯವರು ನಮ್ಮ ಬಗ್ಗೆ ನಮ್ಮ ಪಕ್ಷದ ಬಗ್ಗೆ ಅದನೇನು ಮಾತನಾಡಬೇಕು ಮಾತನಾಡಲಿ ಎಲ್ಲವೂ ನನಗೆ ಗೊತ್ತಿದೆ ಎಂದು ಸಿಎಂ ಡಿಕೆಶಿ ಕಿಡಿಕಾರಿದರು.
ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಬಿಜೆಪಿ ಪ್ರತಿಭಟನೆ ಮಾಡಲಿ. ಆದರೆ , ಪೆಟ್ರೋಲ್ , ಡೀಸೆಲ್ ಗೆ ಎಥೆನಾಲ್ ಬೆರೆಸಿ ವಾಹನಗಳು ಡ್ಯಾಮೇಜ್ ಆಗಿದೆ. ಅದು ಅವರಿಗೆ ಕಣ್ಣು ಕಾಣುತ್ತಿಲ್ಲವಾ? ಎಲ್ಲಿ ತೆಗೆದುಕೊಂಡರೂ , ಎಲ್ಲಿ ಮಿಕ್ಸ್ ಆಗುತ್ತಿದೆ ನೋಡಬೇಕಲ್ವಾ? ಇದು ಕೇಂದ್ರದ ಜವಾಬ್ದಾರಿ ಅಲ್ವಾ? ಇದು ರಾಜ್ಯದ ವಿಚಾರ. ಯಾರೋ ಒಬ್ಬರ ವಿಚಾರ ಅಲ್ಲ. ಕಲಬೆರಕೆ ಕೆಲಸ ಯಾರು ಜವಾಬ್ದಾರಿ. ಸ್ಯಾಂಪಲ್ ನೋಡಿ ಇದರ ಬಗ್ಗೆ ಉತ್ತರ ಕೊಡಲಿ ಎಂದು ಚಾಟಿ ಬೀಸಿದರು.
Appointments, Boards, Corporations:, CM DK Shivakumar, Diwali gift, Congress workers






