ಬಿಎಸ್‌ ವೈ ಒಬ್ಬರೇ ಸಾಕು, ಇನ್ನೂ ಆರು ತಿಂಗಳು ಸರ್ಕಾರ ನಡೆಸಲಿ -ಸಂಪುಟ ವಿಸ್ತರಣೆ ಕುರಿತು ವ್ಯಂಗ್ಯವಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…

ಹಾಸನ,ಆ,3,2019(www.justkannada.in): ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕುರಿತು ವ್ಯಂಗ್ಯವಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ ಒಬ್ಬರೇ ಸಾಕು. ಇನ್ನು  ಆರು ತಿಂಗಳು ಸರ್ಕಾರ ನಡೆಸಲಿ ಎಂದು ಲೇವಡಿ ಮಾಡಿದ್ದಾರೆ.

ಹಾಸನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ವರ್ಗಾವಣೆ ಮಾಡುವುದು ಸಿಎಂ ವಿವೇಚನಾಧಿಕಾರ. ಯಡಿಯೂರಪ್ಪ ಅವರು ಇದರ ಬಗ್ಗೆ ಮಾತನಾಡುತ್ತಾರೆಂದು ನಾನು ಮಾತನಾಡುವುದಿಲ್ಲ. ಆದರೆ ಕೆಲವರನ್ನು ಟಾರ್ಗೆಟ್ ಮಾಡಿ ವರ್ಗಾವಣೆ ಮಾಡಲಾಗುತ್ತಿದೆ. ಮತ್ತೆ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರೂ ಸ್ಥಳ ನಿಯೋಜಿಸಿಲ್ಲ.  ಬಿಎಸ್‌ವೈ ಒಬ್ಬರೇ ಸಾಕು, ಇನ್ನೂ ಆರು ತಿಂಗಳು ಸರ್ಕಾರ ನಡೆಸಲಿ ಎಂದರು.

ನಮ್ಮದು ಪಾಪದ ಸರ್ಕಾರ ಇತ್ತು ಈಗ ಪವಿತ್ರದ ಸರ್ಕಾರ ನಡೆಸುತ್ತಿದ್ದಾರೆ. ನಡೆಸಲಿ ಕಾದು ನೋಡೋಣ, ಏನೇನು ನಡೆಯುತ್ತಿದೆ ಜನರು ನೋಡಿದ್ದಾರೆ ಅವರೇ ತೀರ್ಮಾನ ಮಾಡ್ತಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಇದೇ ವೇಳೇ ರಾಜಕೀಯ ನಿವೃತ್ತಿಯ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನನಗೆ ಎರಡುಬಾರಿ ಸಿಎಂ ಆಗಲು ಅವಕಾಶ ಸಿಕ್ಕಿದ್ದು ದೇವರು ಕೊಟ್ಟ ಅವಕಾಶ. ನಾನು ಆಕಸ್ಮಿಕವಾಗಿ ಈ ರಾಜ್ಯದ ಸಿಎಂ ಆಗಿ ಬಂದವನು. ಈ ರಾಜಕೀಯ ವ್ಯವಸ್ಥೆಯಲ್ಲಿ ನಾನೇ ಹಿಂದೆ ಸರಿಯಬೇಕು ಎಂದು ಕೊಂಡಿದ್ದೇನೆ. ನನಗೆ ರಾಜಕೀಯದಲ್ಲಿ ಮುಂದುವರೆಯಲೇ ಬೇಕೆಂಬ ಹುಚ್ಚಿಲ್ಲ ಎಂದು ಹೇಳಿದರು.

ನನಗೆ ಜನತೆಯ ಹಿತ ಮುಖ್ಯ, ಅಧಿಕಾರಕ್ಕಾಗಿ ಅಪೇಕ್ಷೆ ಪಟ್ಟು ಕುತಂತ್ರದ ರಾಜಕೀಯ ನಡೆಯುತ್ತಿದೆ. ಇವತ್ತು ಒಳ್ಳೆಯವರಿಗೆ ರಾಜಕಾರಣ ಇಲ್ಲ. ಇವತ್ತು ಜಾತಿ, ಪ್ರಭಾವದಿಂದ ರಾಜಕೀಯ ನಡೆಯುತ್ತಿದೆ. ಆದರೆ ನನ್ನ ಕುಟುಂಬವನ್ನ ಪದೇ ಪದೆ ಎಳೆಯಬೇಡಿ ಎಂದು ಮಾಧ್ಯಮಗಳ ವಿರುದ್ದ ಅಸಮಾಧಾನ ಹೊರ ಹಾಕಿದರು.

Key words: BSY -alone -government -six months-Former CM -HD Kumaraswamy -irony