ಸಿಎಂ ಸಿದ್ಧರಾಮಯ್ಯರಿಂದ ಸರ್ವರ ಅಭಿವೃದ್ಧಿಗೆ ಒತ್ತು ನೀಡುವ ಅತ್ಯುತ್ತಮ ಬಜೆಟ್-ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್.

ಮೈಸೂರು,ಜುಲೈ,7,2023(www.justkannada.in): ವಿಭಜನಕಾರಿ ರಾಜಕಾರಣವನ್ನು ಮೆಟ್ಟಿನಿಂತು ಎಲ್ಲರೊಳಿತಿನ ಆಡಳಿತದ ಭರವಸೆಯೊದಗಿಸಿ, ಅದರಂತೆ ನಡೆಯುತ್ತಿರುವ ಮುಖ್ಯಮಂತ್ರಿ   ಸಿದ್ದರಾಮಯ್ಯ ಅವರು ತಮ್ಮ ಐತಿಹಾಸಿಕ 14ನೇ ಬಜೆಟ್‌ನಲ್ಲಿಯೂ ಸರ್ವರ ಅಭಿವೃದ್ಧಿಗೆ ಒತ್ತು ನೀಡಿ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಗುರಿಯಿರುವ ಅತ್ಯುತ್ತಮ ಬಜೆಟ್ ಮುಂದಿಟ್ಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹೆಚ್ಎ ವೆಂಕಟೇಶ್ ಬಣ್ಣಿಸಿದರು.

ರಾಜ್ಯ ಬಜೆಟ್ ಮಂಡನೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಎಚ್.ಎ ವೆಂಕಟೇಶ್,  ಗ್ಯಾರೆಂಟಿ ಯೋಜನೆಗಳ ಜಾರಿಗೆ ತೆರಿಗೆ ಹೊರೆ ಹೇರಲಾಗುವುದು ಎಂಬ ವಿಪಕ್ಷಗಳ ದುಷ್ಟ ಪ್ರಚಾರವನ್ನು ಸ್ಥಬ್ತಗೊಳಿಸಿರುವ ಮುಖ್ಯಮಂತ್ರಿಯವರು   ತೆರಿಗೆ ಹೊರೆಯಿಲ್ಲದ, ಎಲ್ಲಾ ಕ್ಷೇತ್ರಗಳ ಮತ್ತು ಎಲ್ಲರ ಅಭಿವೃದ್ಧಿಯ ಪೂರ್ಣದೃಷ್ಟಿಯನ್ನೊಳಗೊಂಡ ಇದುವರೆಗಿನ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದರು.

ರಾಜ್ಯ ಸರ್ಕಾರವು ಬಸವಣ್ಣನವರು, ಡಾ. ಅಂಬೇಡ್ಕರ್, ನಾಲ್ವಡಿ, ನಾರಾಯಣಗುರು ಇನ್ನಿತರ ಮಹನೀಯರ ಚಿಂತನೆಯಂತೆ ನಡೆಯುತ್ತಿದೆ ಎನ್ನುವುದಕ್ಕೆ ಗ್ಯಾರೆಂಟಿಗಳ ಜೊತೆಗೆ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮೂಲಕ ಒದಗಿಸಿರುವ ಅನುದಾನಗಳು ಸಾಕ್ಷಿ. ಹಿಂದಿನ ಬಿಜೆಪಿ ಸರ್ಕಾರ ತನ್ನ ಒಳಉದ್ದೇಶಗಳನ್ನು ಜಾರಿಗೆ ತರಲೆಂದೇ ತಡೆಹಿಡಿದಿದ್ದ ಅನೇಕ ಪ್ರಗತಿಪರ ಯೋಜನೆಗಳನ್ನು ಸಿದ್ದರಾಮಯ್ಯನವರು ಪುನರಾರಂಭಿಸುವುದಾಗಿ ಪ್ರಕಟಿಸಿರುವುದು ಸ್ವಾಗತಾರ್ಹ.

ಹೊಸ ಆದಾಯದ ಕ್ರೋಢೀಕರಣ, ಹಿಂದಿನ ಸರ್ಕಾರಗಳು ಮಾಡಿದ ಸಾಲ ತೀರುವಳಿಗೆ ಒತ್ತು ನೀಡುವುದು, ಸಾಲ ಮಾಡದೇ ರಾಜ್ಯದ ಆದಾಯದಲ್ಲಿನ  ಸೋರಿಕೆ ತಡೆದು ಇದನ್ನು ಬಳಸುವುದು, ಕೇಂದ್ರ ಸರ್ಕಾರ ನೀಡದೇ ತಡೆ ಹಿಡಿದಿರುವ ಅನುದಾನಗಳನ್ನು ಆಗ್ರಹಪೂರ್ವಕವಾಗಿ ಪಡೆದು, ಇದನ್ನು ಬಡವರ ಕಲ್ಯಾಣ ಕಾರ್ಯಕ್ರಮಗಳತ್ತ ತಿರುಗಿಸುವ ಮಾನ್ಯ ಸಿದ್ದರಾಮಯ್ಯನವರ ಆಲೋಚನೆ ಅತ್ಯದ್ಭುತವಾದುದು. ಇದು ಇಡೀ ದೇಶಕ್ಕೆ ಮಾದರಿಯಾಗುವ ಆರ್ಥಿಕ ನಿಲುವು ಎಂದರೆ ತಪ್ಪಾಗದು ಎಂದು ಹೆಚ್.ಎ ವೆಂಕಟೇಶ್ ಶ್ಲಾಘಿಸಿದ್ದಾರೆ.

ಬಡವರಿಗೆ ಮನೆಗಳ ನಿರ್ಮಾಣ, ಕಲ್ಯಾಣ ಯೋಜನೆಗಳಿಗೆ ಒತ್ತು, ಕೈಗಾರಿಕೆಗಳಿಗೆ ಮನ್ನಣೆ, ಶಿಕ್ಷಣಕ್ಕೆ ಅತಿ ಹೆಚ್ಚು ಅನುದಾನ, ಆರೋಗ್ಯ ಕ್ಷೇತ್ರಕ್ಕೆ ಅಭಯ, ಕಾರ್ಮಿಕರಿಗೆ ಅನುಕೂಲ, ಸ್ವ್ವಿಗ್ಗಿ, ಜೊಮಾಟೋದಂತಹ ಕಂಪನಿಗಳ ಡೆಲಿವರಿ ಬಾಯ್‌ ಗಳಿಗೆ ವಿಮೆ ಮುಂತಾದ ಹತ್ತು ಹಲವು ಆಲೋಚನೆಗಳು ಸಮಾಜಮುಖಿ ಜನನಾಯಕನಿಂದಷ್ಟೇ ಸಾಧ್ಯ. ಸಿದ್ದರಾಮಯ್ಯನವರು ದೂರದೃಷ್ಟಿಯುಳ್ಳ ನಾಯಕ, ದಕ್ಷ ಆಡಳಿತಗಾರ ಹಾಗು ದೇಶಕಂಡ ಅತ್ಯಪೂರ್ವ ಆರ್ಥಶಾಸ್ತ್ರಜ್ಞ ಎನ್ನುವುದು ಈ ಜನಪರ ಬಜೆಟ್‌ನಿಂದಾಗಿ ಮತ್ತೊಮ್ಮೆ ಸಾಬೀತಾಗಿದೆ. ವಿಪಕ್ಷಗಳು ರಾಜಕೀಯ ಕಾರಣಕ್ಕಾಗಿ ಈ ಮಹತ್ವದ ಬಜೆಟ್‌ ಅನ್ನು ವಿರೋಧಿಸದೇ ಇದರ ಸಮರ್ಪಕ ಅನುಷ್ಠಾನಕ್ಕಾಗಿ ಸರ್ಕಾರದ ಜೊತೆ ಸಹಕಾರ ನೀಡುವ ಅಗತ್ಯವಿದೆ ಎಂದು ಮನವಿ ಮಾಡಿದರು.

Key words: Best -budget – CM Siddaramaiah -development – KPCC Spokesperson- H.A. Venkatesh.