ಮತ್ತೆ ಕೊರೋನಾ ವಾರಿಯರ್ ಆದ ಸಚಿವ ಎಸ್.ಟಿ ಸೋಮಶೇಖರ್

ಬೆಂಗಳೂರು,ಆ,13,2020(www.justkannada.in): ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಇದೀಗ ಮತ್ತೆ ಕೊರೋನಾ ವಾರಿಯರ್ ಆಗಿ ಕ್ಷೇತ್ರ ಸಂಚಾರಕ್ಕೆ ಇಳಿದಿದ್ದಾರೆ.

ಕೋವಿಡ್ 19 ಸೋಂಕಿನಿಂದ ಗುಣಮುಖರಾಗುತ್ತಿದ್ದಂತೆ ಕಾರ್ಯಪ್ರವೃತ್ತರಾಗಿರುವ ಸಹಕಾರ ಹಾಗೂ ರಾಜರಾಜೇಶ್ವರಿನಗರ ವಲಯದ ಕೋವಿಡ್ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ,  ಇಂದು ರಾಜರಾಜೇಶ್ವರಿನಗರ ವಲಯದ ವಿವಿಧ ವಿಭಾಗೀಯ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಜೊತೆಗೆ ಕೋವಿಡ್ ಕಮಾಂಡಿಂಗ್ ಸೆಂಟರ್ ಗೂ ಭೇಟಿ ನೀಡಿ ಪರಿಸ್ಥಿತಿಗಳನ್ನು ಅವಲೋಕಿಸಿದರು.

ಮೊದಲಿಗೆ ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತರ ಕಚೇರಿಯಲ್ಲಿ ಝೋನಲ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್,  ಆ್ಯಂಟಿಜನ್ ಟೆಸ್ಟ್ ಸೇರಿದಂತೆ ಎಲ್ಲ ಮಾದರಿಯ ಪರೀಕ್ಷೆಗೆ ಸಂಬಂಧಪಟ್ಟಂತೆ ಕಿಟ್ ಗಳ ಕೊರತೆ ಇದೆಯೇ? ಸಮರ್ಪಕವಾಗಿ ವೈದ್ಯರಿದ್ದಾರೆಯೇ? ಎಲ್ಲ ವಾರ್ಡ್ ಗಳಲ್ಲಿ ಯಾವ ಮಾದರಿಯಲ್ಲಿ ತಯಾರಿ ನಡೆಸಿಕೊಂಡು ಚಿಕಿತ್ಸೆ ನೀಡುತ್ತಿದ್ದೀರಿ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು ಯಾವುದೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.back-corona-warrior-minister-st-somashekhar

ಆ್ಯಂಬುಲೆನ್ಸ್ ವ್ಯವಸ್ಥೆಯನ್ನೂ ಸಮರ್ಪಕವಾಗಿ ನೋಡಿಕೊಳ್ಳಬೇಕು. ಜೊತೆಗೆ ಆ್ಯಂಬುಲೆನ್ಸ್ ಚಾಲಕರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ಈ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗಬಾರದು ಎಂದು ಸಚಿವ ಎಸ್.ಟಿ ಸೋಮಶೇಖರ್ ಸೂಚನೆ ನೀಡಿದರು.

ಟ್ರಯಾಜ್ ಸೋಂಕಿತರಿಗೆ ವ್ಯವಸ್ಥೆ….

ಟ್ರಯಾಜ್ (ಪಾಸಿಟಿವ್ ಬಂದು ಯಾವುದೇ ರೋಗ ಲಕ್ಷಣಗಳು ಇಲ್ಲದಿರುವವರು) ಕೆಟಗರಿಯ ಸೋಂಕಿತರಿಗೆ ಅವರ ಅನುಕೂಲಕ್ಕೆ ತಕ್ಕಂತೆ ಚಿಕಿತ್ಸೆ ಕೊಡಲಾಗುತ್ತಿದೆ. ಮನೆಯಲ್ಲೇ ಚಿಕಿತ್ಸೆ ಪಡೆಯುವವರಿಗೂ ಅವಕಾಶ ಕಲ್ಪಿಸಲಾಗಿದ್ದು, ಆಸ್ಪತ್ರೆ‍ಯಲ್ಲಿ ಚಿಕಿತ್ಸೆ ಅಗತ್ಯವಿರುವವರಿದ್ದರೆ ಅವರಿಗೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಜೊತೆಗೆ ಈ ಸೋಂಕಿತರಿಗೆ ನೆಗೆಟಿವ್ ಪರೀಕ್ಷಾ ವರದಿ ಬರುವವರೆಗೆ ಅವರ ಆರೋಗ್ಯ ಸ್ಥಿತಿಗತಿಗಳನ್ನು 5, 7 ಹಾಗೂ 14 ದಿನಗಳ ಅಂತರದಲ್ಲಿ ಕಾಲ ಕಾಲಕ್ಕೆ ವಿಚಾರಿಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಜ್ಞಾನಭಾರತಿ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಎಸ್.ಟಿ ಸೋಮಶೇಖರ್ , ಇದೇ ವೇಳೆ, ವಾರ್ಡ್ ವಾರು ಸೇರಿದಂತೆ ಯಾವ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಹಾಗೂ ಬೇರೆ ಯಾವ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆರ್ ಆರ್ ನಗರ ವಲಯದ ಜಂಟಿ ಆಯುಕ್ತರಾದ ಡಾ.ನಾಗರಾಜ್, ಉಪವಿಭಾಗಾಧಿಕಾರಿಗಳಾದ ಶಿವಣ್ಣ, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಸೇರಿದಂತೆ ಹಾಸಿಗೆ ವ್ಯವಸ್ಥೆ ನಿರ್ವಹಣೆ, ವೈದ್ಯಕೀಯ ಕಿಟ್ ಗಳ ನಿರ್ವಹಣೆ, ಆಹಾರ ವಿಭಾಗ ನಿರ್ವಹಣೆ, ಹೋಂ ಕ್ವಾರಂಟೇನ್ ನೋಡಲ್ ಅಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Key words: Back-Corona Warrior -Minister -ST Somashekhar.