ಅಮೃತ ಸಿಂಚನ – 60: ನಮ್ಮ ಕೆಲಸ ನಾವೇ ಮಾಡಬೇಕು

ಅಮೃತ ಸಿಂಚನ – 60: ನಮ್ಮ ಕೆಲಸ ನಾವೇ ಮಾಡಬೇಕು

ಆ ಮಹಿಳೆ ಸ್ಥೂಲಕಾಯದವಳು. ಮೊದಲು ಆಕೆ ಹೀಗಿರಲಿಲ್ಲ. ಸಾಕಷ್ಟು ಸಿರಿವಂತ ಕುಟುಂಬ ಆಕೆಯದು. ತನ್ನ ಸ್ಥೂಲಕಾಯವನ್ನು ಬಳುಕುವ ಬಳ್ಳಿ ಯಾಗಿಸಿಕೊಳ್ಳಬೇಕೆಂಬ ಮಹದಾಸೆಯಿಂದ ಆಕೆ ನಾನಾ ರೀತಿಯ ಕಸರತ್ತುಗಳನ್ನು ಮಾಡತೊಡಗಿದಳು. ಬೇರೆ ಬೇರೆ ಜನರು ಹೇಳಿದ ವಿವಿಧ ರೀತಿಯ ಚಿಕಿತ್ಸೆಗಳನ್ನೆಲ್ಲ ಮಾಡಿಸಿಕೊಂಡಳು. ಕಾಯ ಜಗ್ಗಲಿಲ್ಲ, ಕೊಬ್ಬು ಕರಗಲಿಲ್ಲ. ಹೀಗಾದರೆ ಶರೀರವನ್ನು ಹೇಗೆ ಸಣ್ಣಗೆ ಮಾಡಲು ಸಾಧ್ಯ ಹೇಳಿ?

ಏಕೆಂದರೆ,

ಆಕೆ ಮಾಡಬೇಕಾದ ಮನೆಗೆಲಸಗಳನ್ನೆಲ್ಲಾ ಕೆಲಸದ ಹೆಂಗಸು ಮಾಡುತ್ತಿದ್ದಳು. ಬಟ್ಟೆ ಒಗೆಯುವುದು, ಕಸ ಗುಡಿಸುವುದು, ನೆಲ ಸಾರಿಸುವುದು, ಪಾತ್ರೆ ತೊಳೆಯುವುದು, ಮನೆಯೆದುರು ಗುಡಿಸಿ, ನೀರು ಚಿಮುಕಿಸಿ, ರಂಗೋಲಿ ಹಾಕುವುದು – ಹೀಗೆ ಎಲ್ಲವನ್ನೂ ಆ ಕೆಲಸದವಳೇ ಮಾಡುತ್ತಿದ್ದಳು.

ಹೀಗೆ ಈ ಮಹಿಳೆ ತಾನು ಮಾಡಬೇಕಾದ ಕೆಲಸಗಳನ್ನೆಲ್ಲ ಕೆಲಸದವಳ ಕೈಯಲ್ಲಿ ಮಾಡಿಸಿ, ಆಸಮಯದಲ್ಲಿ ಸೋಫಾದ ಮೇಲೆ ಹಾಯಾಗಿ ಕುಳಿತುಕೊಂಡು ಕೆಲಸದವಳಿಗೆ ನಿರ್ದೇಶನ ಕೊಡುತ್ತಿದ್ದಳು.

ಇದರಿಂದ ಫಲಿತಾಂಶವೇನಾಯಿತೆಂದರೆ,

ತಕ್ಕಮಟ್ಟಿಗೆ ಸ್ಥೂಲಕಾಯಳಾಗಿದ್ದ ಕೆಲಸದವಳು ಬಳುಕುವ ಬಳ್ಳಿಯಾದಳು. ಯಜಮಾನಿ ಇನ್ನೂ ನಾಲ್ಕು ಸುತ್ತು ದಪ್ಪವಾದಳು. ಅಡುಗೆಯನ್ನು ಯಜಮಾನಿಯೇ ಮಾಡುತ್ತಿದ್ದಳಾದರೂ ಬೀಸುವ, ರುಬ್ಬುವ, ಕುಟ್ಟುವ ಕೆಲಸಗಳಿಗೆಲ್ಲ ಯಂತ್ರಗಳು ಇರುವುದರಿಂದ ಆಕೆಯ ಶರೀರವೆಂಬ ಯಂತ್ರಕ್ಕೆ ಏನು ಮಹಾ ವ್ಯಾಯಾಮ ಸಿಕ್ಕೀತು?

ನೀತಿ ಏನೆಂದರೆ, ಆದಷ್ಟೂ ನಾವು ಮಾಡಬೇಕಾದ ಕೆಲಸಗಳನ್ನು ನಾವೇ ಮಾಡುತ್ತಾ ಸದಾ ಚಟುವಟಿಕೆಯಿಂದಿರಬೇಕು.

ಮನೆಯ ಕೆಲಸಗಳನ್ನು ಉದಾಸೀನದಿಂದ ಮಾಡದೆ ಬೊಜ್ಜು ಬೆಳೆಸಿಕೊಂಡು, ಆ ಬೊಜ್ಜು ಕರಗಿಸಲು ವಾಕಿಂಗು, ಜಾಗಿಂಗು ಅಂತ ನಾನಾ ರೀತಿಯ ಕಸರತ್ತುಗಳನ್ನು ಮಾಡುವುದರಲ್ಲಿ ಯಾವ ಬುದ್ಧಿವಂತಿಕೆಯಿದೆ?

ವಾಕಿಂಗು, ಜಾಗಿಂಗು ಗಳನ್ನು ಮಾಡುವ ಸಮಯವನ್ನು ಮನೆಗೆಲಸಕ್ಕೆ ವಿನಿಯೋಗಿಸಿಕೊಂಡು ಬೊಜ್ಜು ಕರಗಿಸಿಕೊಳ್ಳುವುದು ಬುದ್ಧಿವಂತಿಕೆ ಅಲ್ಲವೇ? ಮನೆಗೆಲಸದ ಜೊತೆಗೆ ಬೊಜ್ಜು ಕರಗಿಸುವ ವ್ಯಾಯಾಮವೂ ಜೊತೆಯಲ್ಲೇ ಆಗುತ್ತದಲ್ಲವೇ? ಇದೊಂದು ತರಹ ಟೂ-ಇನ್-ವನ್ ಕಾರ್ಯಕ್ರಮ. ಇದರಿಂದ ಮನೆಗೆಲಸದವಳಿಗೆ ಕೊಡುವ ಹಣವೂ ಉಳಿಯುತ್ತದೆ. ಬೊಜ್ಜು ಕರಗಿಸಲು ಮಾಡುವ ಖರ್ಚೂ ಉಳಿಯುತ್ತದೆ.

ನಮ್ಮ ಕೆಲಸಗಳನ್ನು ನಾವೇ ಮಾಡತೊಡಗಿದರೆ ಕೆಲಸಗಳು ನೀಟಾಗಿಯೂ ಚೆನ್ನಾಗಿಯೂ ಆಗುತ್ತವೆ. ಜೊತೆಗೆ ಚೆನ್ನಾಗಿ ಹಸಿವೆಯೂ ಆಗುತ್ತದೆ. ಒಳ್ಳೆಯ ನಿದ್ರೆ ಬರುತ್ತದೆ. ಇದೇ ಸುಖ. ನಾವು ಮಾಡಬೇಕಾದ ಕೆಲಸಗಳನ್ನೆಲ್ಲ ಬೇರೆಯವರಿಗೆ ವಹಿಸಿ, ಎನೂ ಕೆಲಸ ಮಾಡದೆ, ಸುಮ್ಮನೆ ಸೋಮಾರಿಯಾಗಿ ಕಾಲು ಚಾಚಿಕೊಂಡು ಕುಳಿತಿರುವುದು ಖಂಡಿತ ಸುಖವಲ್ಲ, ಅದು ದುಃಖ, ನರಕ! ಕೆಲಸ ಮಾಡಿ ಸವೆದು ಯಾರೂ ಸಾಯುವುದಿಲ್ಲ. ಬದಲಿಗೆ ಕೆಲಸಗಳನ್ನು ಮಾಡದೆ ಮೈ ಬೆಳೆಸಿಕೊಂಡು ಕಾಯಿಲೆ ತಂದುಕೊಂಡು ನರಳಿ ನರಳಿ ಸಾಯುವವರೇ ಹೆಚ್ಚು!

– ಜಿ. ವಿ. ಗಣೇಶಯ್ಯ.