ಅಮೃತ ಸಿಂಚನ – 75: ಜಾಗ್ರತೆ! ಪ್ರತಿಕ್ಷಣವೂ ನೀವು ಪರೀಕ್ಷೆಗೊಳಗಾಗುತ್ತಿರುತ್ತೀರಿ!

ಮೈಸೂರು,ಫೆಬ್ರವರಿ,2,2022(www.justkannada.in):  ನೀವೊಂದು ಪ್ರಸಿದ್ಧ ದೇವಾಲಯಕ್ಕೆ ಹೋಗುತ್ತೀರಿ. ನಿಮ್ಮ ಉದ್ದೇಶ ದೇವರ ದರ್ಶನ, ಸೇವೆ – ಇತ್ಯಾದಿ. ಆದರೆ, ದೇವಾಲಯದ ಅರ್ಚಕರಿಂದ ಹಿಡಿದು ಸಿಬ್ಬಂದಿಯವರೆಗೂ ಇರುವ ಜನ ನಿಮಗೆ ಕಿರುಕುಳ ಕೊಡುತ್ತಾರೆ. ಅರ್ಚಕರು ರೇಗುತ್ತಾರೆ. ಜವಾನ ನಿಮಗೆ “ಅಲ್ಲಿ ನಿಲ್ಲಬೇಡಿ, ಇಲ್ಲಿ ನಿಲ್ಲಬೇಡಿ, ಆ ಕಡೆ ಹೋಗಿ, ಈಕಡೆ ಹೋಗಿ” – ಅಂತೆಲ್ಲಾ ಗದರುತ್ತಾನೆ.

ಈ ಎಲ್ಲ ಸನ್ನಿವೇಶಗಳಿಂದ ನಿಮಗೆ ಸಹಜವಾಗಿಯೇ ಜಿಗುಪ್ಸೆ ಉಂಟಾಗುತ್ತದೆ.ಆ ದೇವಸ್ಥಾನಕ್ಕೆ ಹೋದುದಕ್ಕಾಗಿ ನೀವು ಪಶ್ಚಾತ್ತಾಪ ಪಡುತ್ತೀರಿ. ಇನ್ನೆಂದೂ ಆ ದೇವಸ್ಥಾನವಿರುವ ದಿಕ್ಕಿಗೆ ತಲೆ ಹಾಕಿ ಮಲಗಬಾರದೆಂದು ತೀರ್ಮಾನಿಸುತ್ತೀರಿ.

ಹಾಂ! ಒಂದು ನಿಮಿಷ ಇತ್ತ ಗಮನ ಕೊಡಿ: ನೀವೆಂದಾದರೂ ಇವೆಲ್ಲವನ್ನೂ ಜನರ ಮೂಲಕ ನನ್ನ ಭಕ್ತಿಯ ಪರೀಕ್ಷೆಗಾಗಿ ದೇವರೇ ಮಾಡಿಸಿದ್ದು. ಈ ಸನ್ನಿವೇಶದಲ್ಲಿ ನಾನು ವಿಚಲಿತನಾಗಬಾರದು. ಅರ್ಚಕರು ರೇಗಿದರೆ ಅದಕ್ಕೆ ಪ್ರತಿಕ್ರಿಯಿಸದೆ ಶಾಂತನಾಗಿರಬೇಕು. ಜವಾ ನನು “ಅಲ್ಲಿ ನಿಲ್ಲಬೇಡಿ” ಅಂದಾಗ ಅಲ್ಲ ನಿಲ್ಲಬಾರದು. “ಇಲ್ಲಿ ನಿಲ್ಲಬೇಡಿ” ಅಂದಾಗ ಇಲ್ಲಿ ನಿಲ್ಲಬಾರದು. “ಆ ಕಡೆ ಹೋಗಿ” ಅಂದಾಗ ಆ ಕಡೆ ಹೋಗಬೇಕು. “ಈ ಕಡೆ ಹೋಗಿ” ಅಂದಾಗ ವಿನಯದಿಂದಲೇ ಹೋಗಬೇಕು. “ಏಕೆ, ಏನು” ಅಂತ ಕೇಳಬಾರದು – ಹೀಗೆಂದಾದರೂ ಯೋಚಿಸಿದ್ದೀರಾ?

ಏಕೆ ನಾನು ಹೀಗೆ ಹೇಳಿದೆನೆಂದರೆ, ನಿಮ್ಮ ದೃಷ್ಟಿ ದೇವರ ಕಡೆಗೆ, ಗುರಿ ದೈವ ಸಾನಿಧ್ಯ- ಅಂತಾದಾಗ ಉಳಿದ ಯಾವ ವಿಚಾರಗಳೂ ನಿಮ್ಮ ಗಮನಕ್ಕೆ ಬರಲೇಬಾರದು. ಅಂದರೆ, ನಿಮ್ಮದು ಏಕಾಗ್ರಚಿತ್ತ ವಾಗಿರಬೇಕು. ನಿಮ್ಮ ಮನಸ್ಸು ಮೇಲೆ ಹೇಳಿದ ಎಲ್ಲ ಕಾರಣಗಳಿಂದಾಗಿ ವಿಚಲಿತವಾಗಬಾರದು. ದೇವಾಲಯದ ಸಿಬ್ಬಂದಿ ವರ್ಗದಲ್ಲಿ ಯಾರು ಏನೋ ಅಂದರು ಅಂತ ಬೇಸರಪಟ್ಟುಕೊಳ್ಳಬಾರದು. ಮಾತ್ರವಲ್ಲ, ಅದನ್ನು ಮನಸ್ಸಿನಲ್ಲೂ ಇಟ್ಟುಕೊಳ್ಳಬಾರದು. ಅವರೂ ನಿಮ್ಮ ಹಾಗೆಯೇ ಮನುಷ್ಯರು. ಎಷ್ಟೋ ಜನರಿಂದ ಅವರು ಕಿರಿಕಿರಿಯನ್ನು ಅನುಭವಿಸಿ ಒತ್ತಡಕ್ಕೆ ಒಳಗಾಗಿರಬಹುದು. ಹಾಗಾಗಿ, ಆಡುವ ಮಾತಿನ ಮೇಲೆ ಅವರಿಗೆ ಹತೋಟಿ ತಪ್ಪಲೂ ಬಹುದು. ಅಥವಾ, ಇದು ನಿಮಗೆ ದೇವರು ಇಟ್ಟ ಪರೀಕ್ಷೆಯೂ ಇರಬಹುದಲ್ಲವೇ? ಇಂತಹ ಸಂದರ್ಭಗಳಲ್ಲಿ, ದೇವರೇ ಇಟ್ಟಿರುವ ಪರೀಕ್ಷೆಯಲ್ಲಿ ನೀವು ತೇರ್ಗಡೆಯಾಗಲು ನಾನು ಮೇಲೆ ತಿಳಿಸಿರುವಂತೆ ನಡೆದುಕೊಂಡಲ್ಲಿ ಸಾಧ್ಯವಾಗುವುದು.

ಅಂದಹಾಗೆ, “ಇಂತಹ ಪರೀಕ್ಷೆಗಳಲ್ಲಿ ನಾನು ತೇರ್ಗಡೆಯಾಗುತ್ತೇನೆ” ಎಂಬ ಛಲ, ಅಹಂಕಾರಗಳು ನಿಮ್ಮಲ್ಲಿರಕೂಡದು. ಮತ್ತೆ ನೀವು ವಿನೀತರೂ, ವಿನಮ್ರರೂ ಆಗಿ ಮುಂದುವರಿಯಬೇಕು. “ಇಲ್ಲಿ ಕೂರಬೇಡಿ. ಈ ಜಾಗ ಅತಿಮುಖ್ಯರಿಗಾಗಿ ಮೀಸಲಿದೆ”- ಅಂತ ದೇವಾಲಯದ ಸ್ವಯಂಸೇವಕ ಹೇಳಿದರೆ, “ಆಗಬಹುದು, ದಯವಿಟ್ಟು ಅತ್ಯಂತ ಕಡೆಯ ಮನುಷ್ಯ ಎಲ್ಲಿ ಕೊಡುತ್ತಾನೆಂದು ತಾವು ತೋರಿಸಿದರೆ, ಅವನು ಹಿಂದೆ ನಾನು ಹೋಗಿ ಕೂರುತ್ತೇನೆ” ಅಂತ ವಿನಮ್ರವಾಗಿ ಕೇಳಿಕೊಳ್ಳಬೇಕು. ಏಕೆಂದರೆ, ಕುಳಿತುಕೊಳ್ಳುವ ಸ್ಥಾನದಿಂದಾಗಿ ನೀವು ದೊಡ್ಡವರೆನಿಸಿಕೊಳ್ಳುವುದು ಬೇಡ.

ಅದೊಂದು ಸಾರಿ “ನಮ್ಮೊಡನೆ ಗಾಣಗಾಪುರಕ್ಕೆ ಬನ್ನಿ”- ಅಂತ ಕೆಲವು ಸ್ನೇಹಿತರು ಆಹ್ವಾನಿಸಿದ್ದರು. ನಾನಾಗಲೇ ಒಂದು ಸಾರಿ ದತ್ತಾತ್ರೇಯ ಕ್ಷೇತ್ರವಾದ ಗಾಣಗಾಪುರಕ್ಕೆ ಹೋಗಿ ಬಂದಿದ್ದೇನಾದ್ದರಿಂದ ನಾನು ಜೊತೆಗಿದ್ದರೆ ಅನುಕೂಲ ಅಂತ ಅವರು ಭಾವಿಸಿದ್ದರು.

ನಾನವರಿಗೆ, “ನೋಡಿ, ನಮ್ಮ ಅಹಂಕಾರ, ದುಡ್ಡಿನ ದೌಲತ್ತು – ಇಂತಹವುಗಳನ್ನೆಲ್ಲಾ ಇಲ್ಲಿಯೇ ಬಿಟ್ಟು ನಾವಲ್ಲಿಗೆ ಹೋಗಬೇಕಾಗುತ್ತದೆ. ಧರ್ಮಸ್ಥಳದಲ್ಲೋ, ತಿರುಪತಿಯಲ್ಲೋ ಸಿಗುವ ಅಚ್ಚುಕಟ್ಟಾದ ಕೊಠಡಿ, ಊಟ – ಇತ್ಯಾದಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅಲ್ಲಿಗೆ ಹೋಗಬಾರದು. ಇನ್ನು, ಹೊರನಾಡು, ಶೃಂಗೇರಿಗಳ ಪ್ರಕೃತಿ ವೈಭವಗಳ, ಬೇಲೂರು-ಹಳೇಬೀಡುಗಳ ಶಿಲ್ಪಕಲಾ ಕಾವ್ಯಗಳ ನಿರೀಕ್ಷೆಯನ್ನೂ ಇಟ್ಟುಕೊಂಡು ಅಲ್ಲಿಗೆ ಹೋದರೆ ನಿಮಗೆ ನಿರಾಸೆ ಖಂಡಿತ. ದೇವಸ್ಥಾನದ ವತಿಯಿಂದ ಎರಡು ಹೊತ್ತು ಹಾಕುವ ಊಟವನ್ನು ನೀವು ಮಹಾಪ್ರಸಾದವೆಂದು ಸೇವಿಸಬೇಕು. ಭೀಮ, ಅಮರಜಾ ನದಿಗಳ ಸಂಗಮದಲ್ಲಿ “ಇದು ಪವಿತ್ರ ಗಂಗಾಸ್ನಾನ” ಅಂದುಕೊಂಡು ಸ್ನಾನ ಮಾಡಬೇಕು. ಶುಚಿತ್ವ, ಸೊಫೆಸ್ಟಿಕೇಷನ್ ಇವನ್ನೆಲ್ಲಾ ಊರಲ್ಲೇ ಬಿಟ್ಟು ನೀವು ಈ ಯಾತ್ರೆಗೆ ಹೋಗಬೇಕು. ದತ್ತಾತ್ರೇಯ, ದತ್ತಾತ್ರೇಯ, ದತ್ತಾತ್ರೇಯ – ಇದನ್ನೇ ನೀವಲ್ಲಿ ನೋಡಬೇಕಾದ್ದು, ಕೇಳಬೇಕಾದ್ದು, ಸೇವಿಸಬೇಕಾದ್ದು. ಉಳಿದೆಲ್ಲವೂ ಕೇವಲ ಕ್ಷುಲ್ಲಕ” ಅಂದಿದ್ದೆ.

ಜಾಗ್ರತೆ! ಪ್ರತಿಕ್ಷಣವೂ ನೀವು ಪರೀಕ್ಷೆಗೊಳಗಾಗುತ್ತಿರುತ್ತೀರಿ!!

– ಜಿ. ವಿ. ಗಣೇಶಯ್ಯ.

KEY WORDS: Amritha sichana – 75-time