ಅಮೃತ ಸಿಂಚನ: ವೃಥಾ ದಂಡ ಮಾಡಬೇಡಿ – 62

kannada t-shirts

ವೃಥಾ ದಂಡ ಮಾಡಬೇಡಿ – 62

ಗುರುಗಳು ಗಮನಿಸಿದಾಗ ಬಕೆಟ್ ನೀರಿನಿಂದ ತುಂಬಿ ಹೆಚ್ಚಾಗಿ ಅದೆಷ್ಟೋ ನೀರು ಚರಂಡಿಯ ಪಾಲಾಗಿತ್ತು. ಕೂಡಲೇ ಗುರುಗಳು ನಲ್ಲಿಯನ್ನು ನಿಲ್ಲಿಸಿ, ಶಿಷ್ಯರುಗಳನ್ನೆಲ್ಲಾ ಬಳಿಗೆ ಕರೆದರು.

“ಯಾರು, ನೀರು ತುಂಬಲು ನಲ್ಲಿಯ ಅಡಿ ಬಕೆಟ್ ಇಟ್ಟದ್ದು?” ಅಂತ ಗುರುಗಳು ಕೇಳಿದರು.

“ನಾನೇ ಗುರುಗಳೇ” – ಶಿಷ್ಯರ ನಡುವೆ ನಿಂತಿದ್ದ ಚಿಕ್ಕ ಹನುಮ ಉಲಿದ.

“ನೋಡಿಲ್ಲಿ, ನೀನು ಒಂದು ಬಕೆಟ್ ನೀರು ಬೇಕು ಅಂತ ನಲ್ಲಿಯ ಅಡಿ ಬಕೆಟ್ ತಂದು ಇಟ್ಟಿದ್ದೆ ಅಲ್ಲವೇ? ಆದರೆ, ನಾಲ್ಕಾರು ಬಕೆಟ್ ನೀರು ವ್ಯರ್ಥವಾಗಿ ಚೆಲ್ಲಿ ಚರಂಡಿ ಸೇರಿತಲ್ಲಾ? ಬಕೆಟ್ ತುಂಬಿದ ತಕ್ಷಣ ನಲ್ಲಿಯನ್ನು ನಿಲ್ಲಿಸಿದ್ದಿದ್ದರೆ ಅಷ್ಟು ನೀರು ಚೆಲ್ಲಿ ಹಾಳಾಗುವುದು ತಪ್ಪುತ್ತಿತ್ತಲ್ಲವೇ ?”

ಗುರುಗಳ ಮಾತಿಗೆ ಚಿಕ್ಕ ಹನುಮ ಏನೂ ಉತ್ತರ ಕೊಡದೆ ತಲೆತಗ್ಗಿಸಿಕೊಂಡು ಮೌನವಾಗಿ ನಿಂತಿದ್ದ. ನಂತರ ಗುರುಗಳು ಹೇಳಿದರು: “ನೋಡಿ ಶಿಷ್ಯಂದಿರಾ, ನೀವು ಹತ್ತು ಬಕೆಟ್ ನೀರನ್ನು ಬೇಕಾದರೂ ಬಳಸಿ, ಚಿಂತೆಯಿಲ್ಲ. ಆದರೆ, ಒಂದೇ ಒಂದು ಲೋಟದಷ್ಟು ನೀರನ್ನೂ ವ್ಯರ್ಥ ಮಾಡಕೂಡದು. ನೀರು ವೃಥಾ ಪೋಲು ಮಾಡಿದವ ಮುಂದಿನ ಜನ್ಮದಲ್ಲಿ ಆ ಪಾಪವನ್ನು ಕಳೆಯಲು ನೀರಿಲ್ಲದ ಮರಳುಗಾಡಿನಲ್ಲಿ ಹುಟ್ಟಿ ಬರಬೇಕಾಗಬಹುದು ಹುಷಾರ್!”

“ಕ್ಷಮಿಸಿ ಗುರುಗಳೇ, ಇನ್ನುಮೇಲೆ ನೀರು ಮಾತ್ರ ಅಲ್ಲ ಏನನ್ನೂ ವ್ಯರ್ಥವಾಗದ ಹಾಗೆ ನಿಗಾ ವಹಿಸುತ್ತೇನೆ”- ಅಂದ ಚಿಕ್ಕ ಹನುಮ.

ಗುರುಗಳಿಗೆ ಸಮಾಧಾನವಾಯಿತು. ಅವರು ಇನ್ನೂ ಒಂದು ಮಾತು ಹೇಳಿದರು: “ನೋಡಿ, ನೀವು ಮದುವೆಗೋ, ಗೃಹಪ್ರವೇಶಕ್ಕೋ ಹೋಗುತ್ತೀರಿ. ಊಟಕ್ಕೆ ಕುಳಿತುಕೊಳ್ಳುತ್ತೀರಿ. ಅಗತ್ಯಕ್ಕಿಂತ ಹೆಚ್ಚಿನ ಪದಾರ್ಥಗಳನ್ನು ಹಾಕಿಸಿಕೊಳ್ಳುತ್ತೀರಿ. ನಂತರ ಅಷ್ಟನ್ನೂ ತಿನ್ನಲಿಕ್ಕಾಗದೆ ಅರ್ಧಕ್ಕರ್ಧ ಎಲೆಯಲ್ಲೇ ಬಿಟ್ಟು ಮೇಲೇಳುತ್ತೀರಿ! ನೀವು ತಿಂದ ಹಾಗೂ ಅಲ್ಲ, ಇತರರಿಗೆ ಉಳಿಸಿದ ಹಾಗೂ ಅಲ್ಲ. ಇದು ಯಾವ ದೇವರಿಗೆ ಪ್ರೀತಿ ಹೇಳಿ?….”

ಗುರುಗಳ ಮಾತನ್ನು ತದೇಕಚಿತ್ತರಾಗಿ ಶಿಷ್ಯರು ಕೇಳುತ್ತಿದ್ದರು. ಗುರುಗಳು ಮುಂದುವರಿಸಿದರು: “…. ನೋಡಿ, ಈಗ ಇಂತಹ ಸಂದರ್ಭಗಳಲ್ಲಿ ನಾನೇನು ಮಾಡುತ್ತೇನೆ ಅನ್ನುವುದನ್ನು ಹೇಳುತ್ತೇನೆ ಕೇಳಿ. ಮೊದಲಿಗೆ ಬೇಡದ ಪದಾರ್ಥಗಳನ್ನು ಹಾಕಿಸಿಕೊಳ್ಳುವುದೇ ಇಲ್ಲ. ಆಮೇಲೆ, ಮೊದಲಿಗೆ ಬಡಿಸಿದ ಎಲ್ಲವನ್ನೂ ನೀಟಾಗಿ ತಿಂದುಬಿಡುತ್ತೇನೆ. ಎಷ್ಟೇ ರುಚಿಯಾಗಿದ್ದರೂ ಒಂದು ಪದಾರ್ಥವನ್ನು ಎರಡನೇ ಸಾರಿ ಹಾಕಿಸಿಕೊಳ್ಳುವುದೇ ಇಲ್ಲ. ಹಾಗಾಗಿ ಊಟವಾದ ನಂತರ ನನ್ನ ಎಲೆಯನ್ನು ನೋಡಿದರೆ ಹೊಸದಾಗಿ ಹಾಕಿದ ಹಾಗೆ ಇರುತ್ತೆ. ಇದರಿಂದ ಬೇರೆಯವರು ಏನು ತಿಳಿದುಕೊಂಡಾರು? ‘ಪಾಪ ಈ ಗುರುಗಳು ಊಟ ಮಾಡದೆ ಎಷ್ಟು ದಿನ ಆಗಿತ್ತೋ ಏನೋ? ಎಲೆಯೊಂದನ್ನು ಬಿಟ್ಟು ಉಳಿದೆಲ್ಲವನ್ನೂ ತಿಂದು ಹಾಕಿದ್ದಾರೆ!’ ಅಂದುಕೊಳ್ಳಲೂಬಹುದು. ಅದು ಬಿಟ್ಟು ಬಡಿಸಿದ್ದರಲ್ಲಿ ಅರ್ಧಕರ್ಧ ಎಲೆಯಲ್ಲೇ ಬಿಟ್ಟು ಮೇಲಿದ್ದರೆ, ‘ಅನ್ಯಾಯವಾಗಿ ಆಹಾರವನ್ನು ಹಾಳುಮಾಡಿದ್ದಾರೆ. ಹಾಕಿಸಿಕೊಳ್ಳುವಾಗ ಗೊತ್ತಾಗಲಿಲ್ಲವೇ?’ ಅಂತಲೂ ಜನ ಎಂದಾರು! ಜನ ಏನಾದರೂ ಅಂದುಕೊಳ್ಳಲಿ, ನಾವು ಸರಿದಾರಿಯಲ್ಲಿದ್ದರಾಯಿತು.

ಗುರುಗಳ ಮಾತು ಶಿಷ್ಯರ ಹೃದಯದಲ್ಲಿ ಅಚ್ಚೊತ್ತಿತು.

– ಜಿ. ವಿ. ಗಣೇಶಯ್ಯ.

website developers in mysore