ಅಮೃತ ಸಿಂಚನ – 42: ಮುಂದೆ ಒಳ್ಳೆಯ ಜನ್ಮ ಬೇಕೇ? ಅದಕ್ಕೇನು ಮಾಡಬೇಕು?

Promotion

 

ಮೈಸೂರು,ಜೂ,1,2021(www.justkannada.in):

ಅಮೃತ ಸಿಂಚನ – 42: ಮುಂದೆ ಒಳ್ಳೆಯ ಜನ್ಮ ಬೇಕೇ? ಅದಕ್ಕೇನು ಮಾಡಬೇಕು?

ವಿಶಾಲವಾದ ಬಂಗಲೆ, ಸುತ್ತಾಡಲು ದುಬಾರಿ ಬೆಲೆಯ ವಿದೇಶಿ ಕಾರು, ಬ್ಯಾಂಕಿನಲ್ಲಿಕೊಳೆಯುತ್ತಿರುವ ಹಣ, ಒಳ್ಳೆಯ ಹೆಸರು, ಉತ್ತಮ ಆರೋಗ್ಯ, ಒಳ್ಳೆ ಹೆಂಡತಿ, ಮಾತು ಕೇಳುವ ಮಕ್ಕಳು – ಒಬ್ಬನಿಗೆ ಇವಿಷ್ಟಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು?jk

ಇವೆಲ್ಲಾ ನಿಮ್ಮ ಹಿಂದಿನ ಜನ್ಮದ ಸುಕೃತ ಗಳಿಂದ ಬಂದಂಥವು. ಇಲ್ಲದಿದ್ದರೆ ಇವನ್ನೆಲ್ಲ ಪಡೆಯುವ ಯೋಗ್ಯತೆ ನಿಮಗೆ ಖಂಡಿತ ಇಲ್ಲ ಅಂದುಕೊಳ್ಳೋಣ. ಏಕೆಂದರೆ, ನಿಮಗಿಂತಲೂ ಯೋಗ್ಯರೂ, ಬುದ್ಧಿವಂತರೂ, ಮೇಧಾವಿಗಳೂ, ಜ್ಞಾನಿಗಳೂ ಆದ ಆದೆಷ್ಟೋ ಮಂದಿಗೆ ಇವೆಲ್ಲ ಅನುಕೂಲಗಳು ಸಿಕ್ಕಿಲ್ಲ!

ಇವೆಲ್ಲಾ ಸುಖ ಸೌಲಭ್ಯಗಳು ನಿಮಗೆ ಮುಂದಿನ ಜನ್ಮದಲ್ಲೂ ಇರಬೇಕೇ?  ಹಾಗಿದ್ದರೆ, ಈ ಜನ್ಮದಲ್ಲೂ ಪುಣ್ಯಕರವಾದ ಕೆಲಸಗಳನ್ನೇ ಮಾಡುತ್ತಾ ಹೋಗಿ. ಪಾಪ ಕಾರ್ಯಗಳಿಗೆ ಮನಸ್ಸು ಕೊಡಬೇಡಿ. ಇದರಿಂದ ಮನಸ್ಸಿಗೆ ನೆಮ್ಮದಿಯೂ ಸಿಗುತ್ತದೆ, ಮುಂದಿನ ಜನ್ಮಕ್ಕಾಗಿ ಗಳಿಸಿದ ಹಾಗೂ ಆಗುತ್ತದೆ. ಇದೊಂದು ರೀತಿಯಲ್ಲಿ ಡಬಲ್ ಬೆನಿಫಿಟ್ ಸ್ಕೀಮ್ ಅಲ್ಲವೇ?

ನನ್ನ ಸ್ನೇಹಿತರೊಬ್ಬರಿದ್ದಾರೆ. ಅವರೊಬ್ಬ ಎಂಜಿನಿಯರ್. ರಾಜ್ಯ ಸರ್ಕಾರದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದವರು, ಈಗ ನಿವೃತ್ತರು. ಜೀವನದುದ್ದಕ್ಕೂ ಒಂದು ಪೈಸೆ ಲಂಚವನ್ನೂ ಸಹ ಮುಟ್ಟಿದವರಲ್ಲ. ಭ್ರಷ್ಟಾಚಾರಕ್ಕೆ ಮನಗೊಟ್ಟವರಲ್ಲ. ಹೆಂಡತಿ, ಒಬ್ಬ ಮಗ – ಇವರ ಸಂಸಾರ.

ಭ್ರಷ್ಟಾಚಾರದಲ್ಲಿ ಭಾಗಿಯಾಗದ ಕಾರಣ ವೈಭವದ ಜೀವನ ಇವರಿಗೆ ಸಾಧ್ಯವಾಗಲಿಲ್ಲ. ಇವರ ಹತ್ತಿರ ಕಾರು ಇಲ್ಲ, ಸ್ಕೂಟರ್ ಸಹ ಇಲ್ಲ.  ಇದರಿಂದ ಇವರಿಗೆ ಬೇಸರವೇನೂ ಇಲ್ಲ. ಅವರು ಹೇಳುತ್ತಿದ್ದರು: “ನೋಡಿ, ನಾನು ನ್ಯಾಯಯುತವಾಗಿ ಬದುಕುತ್ತಿದ್ದೇನೆ. ನನಗೆ ಹೆಚ್ಚಿನ ಅನುಕೂಲಗಳಿಲ್ಲದಿದ್ದರೂ ಊಟಕ್ಕೇನೂ ತೊಂದರೆ ಇಲ್ಲ. ನೆಮ್ಮದಿಗೆ ಕೊರತೆಯಿಲ್ಲ. ಅನ್ಯಾಯ ಮಾಡದಿದ್ದುದರಿಂದ, ಲಂಚ ತೆಗೆದುಕೊಳ್ಳದೆ ಇದ್ದುದರಿಂದ, ಸಾಯುವಾಗಲೂ ನೆಮ್ಮದಿ ಯಿಂದಿರುತ್ತೇನೆ. ಸಾಯುವ ಸಂದರ್ಭದಲ್ಲಿ ದುರಾಚಾರಿಗಳಿಗೆ,  “ಇಷ್ಟೆಲ್ಲಾ ಅನ್ಯಾಯ ಮಾಡಿದ್ದೇನೆ. ಬಹಳ ಜನರಿಗೆ ನೋವುಂಟು ಮಾಡಿದ್ದೇನೆ. ಭ್ರಷ್ಟ ಮಾರ್ಗದಿಂದ ನಾಲ್ಕು ತಲೆಮಾರು ಕುಳಿತು ತಿಂದರೂ ಕರಗದಷ್ಟು ಸಂಪತ್ತು ಸಂಪಾದಿಸಿ ಗುಡ್ಡೆ ಹಾಕಿದ್ದೇನೆ. ಸತ್ತ ನಂತರ ನನಗೆ ಮುಂದೇನು ಕಾದಿದೆಯೋ”- ಎಂಬ ಭಯವಿರುತ್ತದೆ. ನನಗೆ ಅದೇನೂ ಇಲ್ಲ!”

ಹೌದು, ಈ ಇಂಜಿನಿಯರ್ ನೆಮ್ಮದಿಯಿಂದಿದ್ದಾರೆ. ಮಗನಿಗೆ ಒಳ್ಳೆಯ ಕೆಲಸ ಸಿಕ್ಕಿದೆ. ಪುಟ್ಟದಾದ ಸ್ವಂತ ಮನೆ ಇದೆ. ಉತ್ತಮ ಆರೋಗ್ಯವಿದೆ. ಇವರು ಅನ್ಯಾಯದ ಸಂಪಾದನೆಗೆ ಇಳಿಯದಿದ್ದುದಕ್ಕೆ ದೇವರು ಇವರ ಕೈ ಬಿಟ್ಟಿಲ್ಲ. ಮುಂದಿನ ಜನ್ಮದಲ್ಲೂ ಇವರಿಗೆ ಒಳಿತಾಗುತ್ತದೆ. “ವಾಮಮಾರ್ಗದ ಸಂಪಾದನೆಗೆ ಮನಸ್ಸು ಕೊಡದ ಹಾಗೆ   ನೋಡಿಕೊಂಡ ದೇವರಿಗೆ ನಾನು ಎಂದಿಗೂ ಕೃತಜ್ಞ”- ಎಂದು  ಈ ಎಂಜಿನಿಯರ್ ದೇವರನ್ನು ಸ್ಮರಿಸುತ್ತಾರೆ. ಇಂತಹವರ ಸಂತತಿ ಹೆಚ್ಚಬೇಕಲ್ಲವೇ?

ನನಗೆ ಅದು ಸಿಗಬೇಕಿತ್ತು, ಇದು ಸಿಗಬೇಕಿತ್ತು, ಅದು ಸಿಕ್ಕಿಲ್ಲ, ಇದು ಸಿಕ್ಕಿಲ್ಲ – ಎಂದೆಲ್ಲ ಹಲುಬುವವರನ್ನು ನೀವು ಕಂಡೇ ಇರುತ್ತೀರಿ. ಯಾರಿಗೆ ಏನು ಕೊಡಬೇಕೋ, ಎಷ್ಟು ಕೊಡಬೇಕೋ ಅಷ್ಟನ್ನು ದೇವರು ಕೊಟ್ಟೇ ಕೊಡುತ್ತಾನೆ ಅಥವಾ ನಿಮ್ಮ ವಿಧಿ ಕೊಡುತ್ತದೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಹಿಂದಿನ ಜನ್ಮದಲ್ಲಿ ನೀವೆಷ್ಟು ಗಳಿಸಿರುತ್ತೀರೋ ಅಷ್ಟು ನಿಮಗೆ ಈ ಜನ್ಮದಲ್ಲಿ ಸಿಗುತ್ತದೆ, ದಕ್ಕುತ್ತದೆ. ಅದಕ್ಕಿಂತ ಹೆಚ್ಚಿನದನ್ನು ನೀವು ಬಯಸಕೂಡದು.

ಬ್ಯಾಂಕಿನಲ್ಲಿ ನಿಮ್ಮ ಅಕೌಂಟಿನಲ್ಲಿ ಎಷ್ಟು ಹಣ ಠೇವಣಿಯಾಗಿರುತ್ತದೆಯೋ ಅಷ್ಟನ್ನು ಮಾತ್ರ ನೀವು ಹಿಂದಕ್ಕೆ ಪಡೆಯಲು ಅರ್ಹರಾಗಿರುತ್ತೀರಿ. ಹೆಚ್ಚಿನ ಮೊತ್ತಕ್ಕೆ ನೀವು ಚೆಕ್ಕನ್ನು ನೀಡುವಂತಿಲ್ಲ ಅಲ್ಲವೇ?

 

– ಜಿ. ವಿ. ಗಣೇಶಯ್ಯ.