ಅಮೃತ ಸಿಂಚನ – 28: ಸ್ಥಾನ -ಮಾನ

ಅಮೃತ ಸಿಂಚನ – 28

ಸ್ಥಾನ – ಮಾನ

ಮೈಸೂರು,ಜನವರಿ,26,2021(www.justkannada.in):  ಕುಳಿತಿರುವ ಪೀಠದ ಕಾರಣದಿಂದ ವ್ಯಕ್ತಿಯೊಬ್ಬನಿಗೆ ಗೌರವ ಸಿಗುವಂತಹ ಸಂದರ್ಭವು ಹೀನಾಯವಾದುದು. ಅದೇ ವ್ಯಕ್ತಿಯೊಬ್ಬನ ಯೋಗ್ಯತೆಯಿಂದ ಕುಳಿತಿರುವ ಪೀಠಕ್ಕೆ ಗೌರವ ಬರುವಂತಹ ಸಂದರ್ಭ ಶ್ರೇಷ್ಠವಾದುದು.jk

ಪೀಠವೂ ಗೌರವಯುತ ದ್ದಾಗಿದ್ದು, ಅದರ ಮೇಲೆ ಆಸೀನನಾಗಿರುವ ವ್ಯಕ್ತಿಯೂ ಗೌರವಾನ್ವಿತನಾಗಿದ್ದಲ್ಲಿ ಚಿನ್ನಕ್ಕೆ ಮೆರುಗು ಬಂದ ಹಾಗೆಯೇ ಸರಿ. ಆದರೆ, ನಮ್ಮ ದೇಶದಲ್ಲಿ ಈಗೇನಾಗಿದೆ? ಪೀಠದ ಗೌರವಕ್ಕೆ ತಕ್ಕಂತಹ ವ್ಯಕ್ತಿಯೇ ಪೀಠದಮೇಲೆ ಆಸೀನರಾಗಿರುತ್ತಾನೆಂಬ ಖಾತರಿ ಏನಿಲ್ಲ. ಆ ಪೀಠದಮೇಲೆ ಅವನು ಇದ್ದಷ್ಟು ಕಾಲ ಮಾತ್ರ -ಅನಿವಾರ್ಯವಾಗಿ- ಅವನಿಗೆ ಗೌರವ ಸಂದಾಯವಾಗುತ್ತಿರುತ್ತದೆ. ಪೀಠವಿಳಿದ ಮೇಲೆ ಅವನನ್ನು ನಾಯಿಯೂ ಮೂಸಿ ನೋಡುವುದಿಲ್ಲ. ಅವನು ಸತ್ತು, ಅವನ ಹೆಣ ಸುಟ್ಟು ಬೂದಿ ಆಗುವುದರೊಳಗೇ ಜನಮಾನಸದಿಂದ ಅವನ ನೆನಪು ಮಾಸಿ ಹೋದರೂ ಆಶ್ಚರ್ಯವಿಲ್ಲ!

ಆದರೆ, ಹಿಂದೆ ಆಗಿಹೋದರು ಬಹಳಷ್ಟು ಜನ ಲೋಕಪೂಜ್ಯರು. ಸಾವಿರಾರು ವರ್ಷಗಳಾದರೂ ಅವರನ್ನು ಜನ ಮರೆತಿಲ್ಲ! ಈಗಿನ ನಾಯಕರು ಹೇಗೆ ಇರಬಾರದು ಎಂಬುದಕ್ಕೆ ಮಾದರಿಯಾದರೆ, ಹಿಂದಿನವರು ಹೇಗಿರಬೇಕೆಂಬುದಕ್ಕೆ ಮಾದರಿಯಾಗಿದ್ದರು.

ಕೃಪೆ-internet

ಹರಿಶ್ಚಂದ್ರ ಪೀಠ ತ್ಯಾಗ ಮಾಡಿ ಹೊರನಡೆದಾಗ ಜನ ಮರುಗಿದ್ದರು: “ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ” ಅಂತ.. ಆದರೆ ಈಗ ಪೀಠತ್ಯಾಗ ಮಾಡಿ ರಾಜಕಾರಣಿಯೊಬ್ಬ ಹೊರನಡೆದರೆ “ಸದ್ಯ, ಪುರದ ಪೀಡೆಯು ಪುರುಷ ರೂಪಿಂದೆ ತೊಲಗುತಿದೆ” ಅಂತ ಜನರೆನ್ನುವಂತಹ ಪರಿಸ್ಥಿತಿ ಬಂದೊದಗಿದೆ!

ಇಂದಿನ ಜನನಾಯಕರ ಧೈರ್ಯ ಮೆಚ್ಚುವಂತಹುದು. ಶ್ರೀರಾಮ, ಹರಿಶ್ಚಂದ್ರ, ಶಿಬಿ, ಯುಧಿಷ್ಠಿರ – ಇತ್ಯಾದಿ ಮಹಿಮಾನ್ವಿತರು ಏರಿದ ಪೀಠವನ್ನು ಇವರು ನಾಚಿಕೆಯಿಲ್ಲದೆ ಏರಿ ಕುಳಿತು ದರ್ಬಾರು ಮಾಡುತ್ತಾರೆ. ಹಿಂದಿನ ಮಹಾಪುರುಷರ ಯಾವ ಯೋಗ್ಯತೆಯೂ ಹೆಚ್ಚಿನವರಿಗೆ ಇರುವುದಿಲ್ಲ!

– ಜಿ. ವಿ. ಗಣೇಶಯ್ಯ.

Amrita sinchana – 28.

Position – Standard