ಅಮೃತ ಸಿಂಚನ – 51 : ಹೆಮ್ಮೆಪಡಬೇಕಾದುದನ್ನು ಮುಚ್ಚಿಡುವುದೇಕೆ?

ಮೈಸೂರು,ಜುಲೈ,25,2021(www.justkannada.in):

ಅಮೃತ ಸಿಂಚನ – 51

ಹೆಮ್ಮೆಪಡಬೇಕಾದುದನ್ನು ಮುಚ್ಚಿಡುವುದೇಕೆ?

ನಮ್ಮ ನಡುವೆ ಒಬ್ಬರಿದ್ದರು. ಪಿ ಎಚ್ ಡಿ ಪದವಿ ಪಡೆದು ಉನ್ನತ ಹುದ್ದೆಯಲ್ಲಿದ್ದವರು. ಕೆಟ್ಟ ಮನುಷ್ಯನೇನಲ್ಲ. ಮಲೆನಾಡಿನ ಹಳ್ಳಿಯಿಂದ ಬಂದಾತ ಇವರು.jk

ಈ ವ್ಯಕ್ತಿ ಹಿಂದೊಮ್ಮೆ ತಮ್ಮ ಹಳ್ಳಿಯ ಹೆಸರು ಹೇಳಿದ್ದು ನನಗೆ ನೆನಪಿತ್ತು. ಇದಾಗಿ ಬಹಳಷ್ಟು ಸಮಯ ಸಂದಿತ್ತು.

ಅದೊಂದು ದಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಾನು ಸ್ನೇಹಿತರೊಬ್ಬರೊಡನೆ ಈ ವ್ಯಕ್ತಿಯ ಹಳ್ಳಿಗೆ ಹೋಗಬೇಕಾಗಿ ಬಂತು. ನನ್ನ ಸ್ನೇಹಿತರು ಈ ವ್ಯಕ್ತಿಯೊಡನೆ ಅವರ ಊರಿನ ಹೆಸರು ಹೇಳಿ,

“ನಿಮ್ಮೂರಿಗೆ ಹೋಗುತ್ತಿದ್ದೇವೆ”- ಎಂದರಂತೆ. ಅದಕ್ಕವರು, “ಆ ಹಳ್ಳಿ ನನಗೆ ತಿಳಿಯದು. ನಮ್ಮೂರ ಹತ್ತಿರದ ಯಾವುದೋ ಹಳ್ಳಿ ಇರಬೇಕು ಅದು”- ಅಂದರಂತೆ. ಇದನ್ನು ತಿಳಿದು ನನಗೆ ಆಶ್ಚರ್ಯವಾಯಿತು, ಇವರು ಯಾಕೆ ಹೀಗೆ ಹೇಳಿದರು ಅನ್ನುವುದೇ ನನಗೆ ಅರ್ಥವಾಗಲಿಲ್ಲ.

ಸದರಿ ಊರಿಗೆ ಹೋದಾಗ ಅಲ್ಲಿ ಈ ಪಿಎಚ್ಡಿ ವ್ಯಕ್ತಿಯ ವಿಚಾರವಾಗಿ ಕೇಳಿದಾಗ ” ಓ ಅವನಾ…. ಅವರ ಮಗ. ಅವನ ಮನೆ ಇಲ್ಲಿಂದ ಒಂದು ಕಿಲೋಮೀಟರ್ ಆಗುತ್ತೆ. ಅವನ ತಮ್ಮಂದಿರು ಈ ಕಾರ್ಯಕ್ರಮದಲ್ಲಿ ಓಡಾಡಿಕೊಂಡಿದ್ದಾರೆ”- ಅಂತಂದು ಒಬ್ಬ ವ್ಯಕ್ತಿಯನ್ನು ಆ ಪಿಎಚ್ ಡಿಯ ತಮ್ಮ ಅಂತ ಅಲ್ಲಿರುವವರೊಬ್ಬರು ಪರಿಚಯ ಮಾಡಿಸಿದರು.

ಈಗ ವಿಚಾರ ನನಗೆ ಸ್ವಲ್ಪ ಸ್ವಲ್ಪವೇ ಅರ್ಥವಾಗುತ್ತಾ ಹೋಯಿತು. ಆ ವ್ಯಕ್ತಿಯು ಈ ಬಡ ಸಂಸಾರದ ತ್ಯಾಗದಿಂದಾಗಿ ಓದಿ ವಿದ್ಯಾವಂತರಾಗಿ ಉನ್ನತ ಹುದ್ದೆಯಲ್ಲಿ ವಿರಾಜಮಾನರಾಗಿದ್ದಾರೆ. ಆದರೆ ತಂದೆ, ತಮ್ಮಂದಿರು ಅಂತಹ ವಿದ್ಯಾವಂತರಲ್ಲದ ಹಳ್ಳಿಗರು. ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ಜೀವನ ಸವೆಸುತ್ತಿರುವ ವ್ಯಕ್ತಿಗಳು. ಇಂತಹವರನ್ನು ತನ್ನ ತಂದೆ-ತಾಯಂದಿರು, ತಮ್ಮಂದಿರು ಅಂತ ಗುರುತಿಸಿಕೊಳ್ಳುವುದು ಅಥವಾ ಅವರ ಗುಡಿಸಲಿನಂತಹ ಮನೆಯನ್ನು ತನ್ನ ಮನೆ ಅಂತ ಹೇಳಿಕೊಳ್ಳುವುದು ತನ್ನ ಗೌರವಕ್ಕೆ, ವ್ಯಕ್ತಿತ್ವಕ್ಕೆ ಕುಂದು ಅಂತ ಈ ಮನುಷ್ಯ ಭಾವಿಸಿರುವ ಹಾಗೆ ಕಾಣುತ್ತದೆ! ಹಾಗಾಗಿ ತನ್ನವರನ್ನು ಯಾರಿಗೂ ಈತ ಪರಿಚಯಿಸುವುದೂ ಇಲ್ಲ, ತನ್ನೂರಿಗೆ ಇತರರನ್ನು ಆಮಂತ್ರಿಸುವುದೂ ಇಲ್ಲ.

ಇದೆಂತಹ ದುರಂತ ನೋಡಿ. ಮೇಲೇರಲು ಬಳಸಿದ ಏಣಿಯನ್ನೇ ಮರೆಯುವಂತಹ ಅಲ್ಪತನ! ತನ್ನವರು ಅವಿದ್ಯಾವಂತರು, ಬಡವರು ಎಂಬ ಸತ್ಯವನ್ನು ಒಪ್ಪಿಕೊಳ್ಳದಂತಹ ಅಲ್ಪತನಕ್ಕೆ ಏನೆನ್ನಬೇಕು?

ಹೀಗಾಗ ಕೂಡದು ಅಲ್ಲವೇ? ಇಲ್ಲಿ ಹೀನೈಸಿಕೊಳ್ಳಲು ವಾಸ್ತವವಾಗಿ ಕಾರಣವೇ ಇಲ್ಲ. ಬದಲಿಗೆ ಈ ವ್ಯಕ್ತಿ ಹೆಮ್ಮೆಪಡಬೇಕು. ಏತಕ್ಕಾಗಿ ಹೆಮ್ಮೆ ಪಡಬೇಕು ಗೊತ್ತೇ? ಅಂತಹ ಕುಗ್ರಾಮದ ಅವಿದ್ಯಾವಂತ ಬಡಕುಟುಂಬದಿಂದ ಮೇಲೆದ್ದು ಬಂದು ಇಲ್ಲಿಯವರೆಗೆ ಆತ ಮಾಡಿದ ಸಾಧನೆ ಇದೆಯಲ್ಲ, ಅದು ದೊಡ್ಡದು. ಹಾಗೂ ಹೆಮ್ಮೆ ಪಟ್ಟುಕೊಳ್ಳುವಂತಹುದು. ನಗರ-ಪಟ್ಟಣಗಳಲ್ಲಿ ಎಲ್ಲ ವಿಧದ ಅನುಕೂಲಗಳ ನಡುವೆ ಮಾಡುವ ಸಾಧನೆಗಿಂತ ಯಾವುದೇ ಸೌಕರ್ಯಗಳಿಲ್ಲದೆ ಈರೀತಿಯ ಸಾಧನೆ ಅಧಿಕವಾದುದೇ ಸರಿ. ಜೊತೆಗೆ “ನನ್ನವರು ಕೂಲಿ-ನಾಲಿ ಮಾಡುವ ಜನ. ಅವರೆಲ್ಲ ಸೇರಿ ನನ್ನ ಏಳಿಗೆಗೆ ಶ್ರಮಿಸಿದ್ದಾರೆ” – ಎಂಬ ವಿಚಾರವು ಕೃತಜ್ಞತೆಗೆ, ಹೆಮ್ಮೆಗೆ ಕಾರಣವಾಗುವ ಸಂಗತಿಯಾಗಿದೆ.

ನಾನು ಎಷ್ಟೋ ಸಾರಿ ಮೈಸೂರಿನ ನನ್ನ ಸ್ನೇಹಿತರೊಡನೆ, ಪರಿಚಿತ ರೊಡನೆ ಹೇಳಿಕೊಳ್ಳುವುದುಂಟು, “ನನ್ನ ಪೂರ್ವಿಕರಾರೂ ವಿದ್ಯಾವಂತರಲ್ಲ. ನನ್ನ ಅಪ್ಪ, ನನ್ನನ್ನು ಸಾಕಿದ ಸೋದರಮಾವ ಎಲ್ಲರೂ ಒಂದೆರಡು ತರಗತಿ ಕಲಿತು ಬಡತನದ ಕಾರಣ ಶಾಲೆ ಬಿಟ್ಟು ಅವರಿವರ ಜಮೀನಿನಲ್ಲಿ ಕೂಲಿ ನಾಲಿ ಮಾಡಿ ನನ್ನನ್ನು ಮುಂದೆ ತಂದರು. ಮಲೆನಾಡಿನ ದಟ್ಟ ಕಾಡಿನ ನಡುವೆ ನಮ್ಮ ಗುಡಿಸಲಿನಂತಹ ಮನೆ ಇರುವುದು. ಹಾಗಾಗಿ ನಾನೊಬ್ಬ ಕಾಡು ಮನುಷ್ಯ”- ಅಂತ!

ಇಷ್ಟೆಲ್ಲ ಕಷ್ಟಗಳ ನಡುವೆಯೂ ಇದು ಹೆಮ್ಮೆಪಟ್ಟುಕೊಳ್ಳಬಹುದಾದ ವಿಚಾರವೇ ವಿನಹ, ಪಟ್ಟಣದ ಆಧುನಿಕರ ಎದುರು ಮುಚ್ಚಿಟ್ಟು ಕೊಳ್ಳಬೇಕಾದ, ನಾಚಿಕೆಪಟ್ಟುಕೊಳ್ಳಬೇಕಾದ ವಿಚಾರ ಖಂಡಿತ ಅಲ್ಲ.

– ಜಿ. ವಿ. ಗಣೇಶಯ್ಯ.