ಅಮೃತ ಸಿಂಚನ – 16 : ಮದುವೆ ಮತ್ತು ಬಾಳ್ವೆ

ಅಮೃತ ಸಿಂಚನ – 16

ಮದುವೆ ಮತ್ತು ಬಾಳ್ವೆ

ಮೈಸೂರು.ಜನವರಿ,21,2021(www.justkannada.in):

ಮಗಳ ಮದುವೆಗೆ “ಆತ” ತಯಾರಿ ನಡೆಸಿದ್ದರು. ಗಂಡು ಅಮೆರಿಕೆಯಲ್ಲಿ ಇಂಜಿನಿಯರ್ ಅಂತೆ. ಒಳ್ಳೆಯ ಕುಲ, ಒಳ್ಳೆಯ ಸಂಬಳ. “ಆತ” ಆತನ ಹೆಂಡತಿ ಸಂತಸದಲ್ಲಿ ಉಬ್ಬಿ ಹೋಗಿದ್ದರು.jk-logo-justkannada-mysore

ಆದರೂ ಮನಸ್ಸಿನ ಆಳದಲ್ಲಿ “ಆತ”ನಿಗೆ ಏನೋ ಭಯ ಸಂಕಟ.

ಅದೊಂದು ದಿನ ಗುರುಗಳಿಗೆ ಬಳಿಗೆ ಆತ ಬಂದರು.

“ಗಂಡಿನ ಕಡೆಯಿಂದ ಸುಮಾರು ಸಾವಿರದ ಐನೂರು ಜನ ಬರ್ತಾರಂತೆ. ಬಂದವರನ್ನೆಲ್ಲಾ ಸರಿಯಾಗಿ ನೋಡಿಕೊಳ್ಳಬೇಕಂತೆ. ಹುಡುಗನಿಗೆ ಕೊಡುವುದನ್ನೆಲ್ಲಾ ಕೊಟ್ಟು, ಒಳ್ಳೆಯ ಛತ್ರದಲ್ಲಿ ಎರಡು ದಿನ ಅದ್ದೂರಿಯಾಗಿ ಮದುವೆ ಮಾಡಿಕೊಡಬೇಕಂತೆ. ಬಹಳ ಕಷ್ಟ ವಾಗ್ತಿದೆ ಗುರುಗಳೇ” ಅಂತ ಆ ಕನ್ಯಾಪಿತೃ ಪೇಚಾಡಿಕೊಂಡರು.

“ಅದು ಸರಿಯಪ್ಪಾ, ನಿಮ್ಮ ಆರ್ಥಿಕ ಶಕ್ತಿಗೆ ತಕ್ಕ ವರನನ್ನು ಹುಡುಕ ಬೇಕಿತ್ತಲ್ಲವೇ? ಅಥವಾ ಖಡಾಖಂಡಿತವಾಗಿ ನಮ್ಮಿಂದ ಇಷ್ಟು ಮಾತ್ರ ಸಾಧ್ಯ ಅಂತ ವರನ ಕಡೆಯವರಿಗೆ ತಿಳಿಸಬೇಕಿತ್ತಲ್ಲವೇ?”

ಗುರುಗಳ ಈ ಪ್ರಶ್ನೆಗೆ ಆತ, “ಉತ್ತಮ ಉದ್ಯೋಗದಲ್ಲಿರುವ ಅಮೆರಿಕೆಯಲ್ಲಿರುವ ಹುಡುಗ ಸಿಕ್ಕಿದ್ದಾನೆ, ಹುಡುಗಿ ಸುಖವಾಗಿರುತ್ತಾಳೆ ಎಂಬ ಸಂಭ್ರಮದಲ್ಲಿ ಇದೆಲ್ಲಾ ನನಗೆ ಹೊಳೆಯಲೇ ಇಲ್ಲ ಗುರುಗಳೇ, ಈಗ ಸಾಲಸೋಲ ಮಾಡಬೇಕಾಗಿದೆ. ಇರುವ ಒಂದು ಮನೆಯನ್ನು ಬ್ಯಾಂಕಿಗೆ ಆಧಾರ ಮಾಡಬೇಕಾಗಿದೆ” ಎಂದರು.

ನಿಮ್ಮಂತಹ ಬಹಳ ಜನರನ್ನು ನಾನು ನೋಡಿದ್ದೇನೆ. ಹಾಸಿಗೆ ಇರುವಷ್ಟು ಕಾಲು ಚಾಚುವ ಬದಲು ಅಂಥವರು ಹಾಸಿಗೆಯನ್ನೂ ಮೀರಿ ಕಾಲುಚಾಚಿ, ಹಾಸಿಗೆಯ ತುದಿ ಹಿಮ್ಮಡಿಗೆ ಎಟುಕುತ್ತಿಲ್ಲವಲ್ಲಾ ಅಂತ ಪ್ರಲಾಪಿಸುತ್ತಿರುತ್ತಾರೆ! ಈಗ ನೋಡಿ, ಸಾಲಸೋಲ ಮಾಡಿ ಹೇಗೋ ಮದುವೆಯನ್ನು ಮಾಡಿಬಿಡುತ್ತೀರಿ. ಆಮೇಲೆ ಪರದಾಡುತ್ತೀರಿ. ಮದುವೆ ಮಾಡಿ ಕೈ ಖಾಲಿ ಮಾಡಿಕೊಂಡರೆ ನಂತರ ನಿಮ್ಮ ಕುಟುಂಬದ ಗತಿ ಏನು? ನೀವೆಲ್ಲ ನಂತರವೂ ಜೀವನ ಸಾಗಿಸಬೇಕಲ್ಲವೇ? ಕೊನೆಗಾಲದವರೆಗೂ ಸಾಲ ತೀರಿಸುತ್ತಲೇ ಇರಬೇಕಾದ ಕರ್ಮ ಯಾಕೆ ಬೇಕು? ಗಡದ್ದಾಗಿ ಮದುವೆ ಊಟ ಮಾಡಿ “ಶಹಬ್ಬಾಸ್” ಅಂತ ಹೇಳಿ ಹೋದವರಾರೂ ಬಂದು, “ನಿಮಗೆ ಸಾಲದ ಹೊರೆ ಇದೆಯೇ? ಜೀವನ ನಡೆಸಲು ಕಷ್ಟವಾಗುತ್ತಿದೆಯೇ? ನನ್ನಿಂದೇನಾದರೂ ಸಹಾಯ ಬೇಕೇ?” ಎಂದು ಕೇಳುವುದಿಲ್ಲ.

” ನೋಡಿ, ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡಿದ ಮಾತ್ರಕ್ಕೆ ಹುಡುಗ-ಹುಡುಗಿ ಸುಖದಿಂದ ಇರುತ್ತಾರೆಂದು ನಿರೀಕ್ಷಿಸುತ್ತೀರಾ? ಮದುವೆಯನ್ನು ಹೇಗೆ ಮಾಡುತ್ತೀರಿ ಎಂಬುದಕ್ಕೂ ವಧೂ-ವರರು ಸುಖವಾಗಿರುವುದಕ್ಕೂ ಯಾವ ಸಂಬಂಧವೂ ಇಲ್ಲ. ಬಹಳ ಅದ್ದೂರಿಯಾಗಿ ಮಾಡಿದ ವಿವಾಹ ವಿವಾಹ ಬಂಧನವು ಮುರಿದು ಬೀಳಬಹುದು. ಹಾಗೆಯೇ, ಬಹಳ ಸರಳವಾಗಿ ಮಾಡಿದ ವಿವಾಹವು ತುಂಬಾ ಯಶಸ್ವಿಯಾಗಲೂ ಬಹುದು.”

ಆತನಿಗೆ ಗುರುಗಳ ಮಾತಿನಿಂದ ಜ್ಞಾನೋದಯವೇನೋ ಆಯಿತು. ಆದರೆ ಕಾಲ ಮಿಂಚಿತ್ತು.

“ಎಲ್ಲ ನಿರ್ಧರಿಸಿಯಾದ ಮೇಲೆ ತಮ್ಮನ್ನು ಭೇಟಿ ಮಾಡಿ ತಪ್ಪು ಮಾಡಿದೆ ಗುರುಗಳೇ, ಮೊದಲೇ ತಮ್ಮನ್ನು ಕಾಣಬೇಕಿತ್ತು” ಎಂದು ಆತ ಬೇಸರವನ್ನು ವ್ಯಕ್ತಪಡಿಸಿದರು.

ಕಾಲ ಮಿಂಚಿಹೋಗಿತ್ತು!

– ಜಿ. ವಿ. ಗಣೇಶಯ್ಯ.