Friday, September 18, 2026

BDA Apartments

ಅಮೃತ ಸಿಂಚನ – 13: ದೇವನೊಬ್ಬ ಶಕ್ತಿ ಹಲವು BDA JK_Adv BDA Adv
Home ಅಮೃತ ಸಿಂಚನ ಅಮೃತ ಸಿಂಚನ – 13: ದೇವನೊಬ್ಬ ಶಕ್ತಿ ಹಲವು

ಅಮೃತ ಸಿಂಚನ – 13: ದೇವನೊಬ್ಬ ಶಕ್ತಿ ಹಲವು

 

ಅಮೃತ ಸಿಂಚನ – 13

ದೇವನೊಬ್ಬ ಶಕ್ತಿ ಹಲವು

ಮೈಸೂರು,ಜನವರಿ,2,2021(www.justkannada.in): ಅದೊಂದು ಸಾರಿ ಖಲೀಮುಲ್ಲಾ ಎಂಬ ಮುಸ್ಲಿಂ ವ್ಯಕ್ತಿ ಗುರುಗಳನ್ನು ಭೇಟಿಯಾದ. ಉಭಯಕುಶಲೋಪರಿಯ ನಂತರ ಆತ ಅಳುಕುತ್ತಾ ಅಳುಕುತ್ತಾ ಗುರುಗಳನ್ನು ಕೇಳಿಯೇಬಿಟ್ಟ: “ಗುರುಗಳೇ ನನ್ನದೊಂದು ಜಿಜ್ಞಾಸೆ…. ನಿಮ್ಮ ಹಿಂದೂಗಳದೆಲ್ಲ ಸರಿ, ಆದರೆ ಅವರು ನೂರಾರು ದೇವರುಗಳನ್ನು ನಂಬುತ್ತಾರೆ. ನಮ್ಮ ಹಾಗೆ ಒಂದು ದೇವರನ್ನು ನಂಬುವುದಿಲ್ಲ.”jk-logo-justkannada-mysore

ಕಣ್ಣು ಮುಚ್ಚಿ ಸ್ವಲ್ಪ ಸಮಯ ಸುಮ್ಮನಿದ್ದು ಗುರುಗಳು ಕೇಳಿದರು:

“ಖಲೀಮುಲ್ಲಾ ಸಾಹೇಬರೇ, ನೀವು ಒಂದು ಕಾಡಿನಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿರುತ್ತೀರಿ ಅಂತಿಟ್ಟುಕೊಳ್ಳಿ. ಆಗ ನಿಮಗೆ ಭಯವಾಗುತ್ತದಾ?”

“ಒಬ್ಬನೇ ಕಾಡಿನಲ್ಲಿ ಹೋಗುತ್ತಿದ್ದರೆ ಭಯವಾಗದೆ ಇರುತ್ತದಾ ಗುರುಗಳೇ?”

“ಭಯವಾಗುತ್ತದೆ ಅಂತಾಯಿತು…. ನಿಮ್ಮ ಜೊತೆಗೆ ಇನ್ನೊಬ್ಬ ಬಂದು ಸೇರಿಕೊಂಡರೆ?”

” ಇಬ್ಬರು ಇರುವುದರಿಂದ ಭಯ ಒಂದಿಷ್ಟು ಕಡಿಮೆ ಆಗ್ತದೆ!”

“ಇನ್ನೂ ನಾಲ್ಕಾರು ಜನ ನಿಮ್ಮೊಟ್ಟಿಗೆ ಬಂದು ಸೇರಿಕೊಂಡರೆ?”

“ಆಗ ಭಯವೇ ಇಲ್ಲದೆ ಧೈರ್ಯವಾಗಿ ನಾನು ನಡೆಯುತ್ತೇನೆ.”

ಹಾಂ! ಹಾಗೆಯೇ ನಾವು ಒಂದು ದೇವರನ್ನು ಮಾತ್ರ ನಂಬಿ ಕುಳಿತುಕೊಳ್ಳುವ ವರಲ್ಲ. ಗಣಪತಿಯನ್ನು ಬೇಡುತ್ತೇವೆ. ಅವನು ಕೈಬಿಟ್ಟರೆ ಶಿವನನ್ನು ಬೇಡುತ್ತೇವೆ. ಅವನೂ ಕೈಬಿಟ್ಟರೆ ವಿಷ್ಣು ಇದ್ದೇಇದ್ದಾನೆ! ಹೀಗೆ ನಮಗೆ ಒಬ್ಬ ದೇವರು ಕೈ ಬಿಟ್ಟರೆ ಇನ್ನೊಬ್ಬ ಇರುತ್ತಾನೆ.. ಅದೇ ನಮಗೆ ಧೈರ್ಯ. ಆದರೆ ನಿಮ್ಮ ಕಥೆ ಹಾಗಲ್ಲ. ಅಲ್ಲಾಹು ನಿಮ್ಮ ಕೈ ಬಿಟ್ಟ ನೆಂದರೆ ನಿಮ್ಮ ಕಥೆ ಮುಗಿದೇ ಹೋಯಿತು! ನಿಮಗೆ ಆಸರೆ ಇನ್ನಾರೂ ಇಲ್ಲ. ಒಬ್ಬನಿಗಿಂತ ಹೆಚ್ಚು ಜನ ಜೊತೆಗಿದ್ದರೆ ಧೈರ್ಯ ಜಾಸ್ತಿ ಅಂತ ನೀವೇ ಒಪ್ಪಿಕೊಂಡಿದ್ದೀರಲ್ಲ! ಆದ್ದರಿಂದ ಒಬ್ಬನಿಗಿಂತ ಹೆಚ್ಚು ಸಂಖೆಯ ದೇವರುಗಳು ಇದ್ದಾಗ ನಮಗೆ ಧೈರ್ಯ ಜಾಸ್ತಿ, ಏನಂತೀರಿ?”amrita-sinchana-13-power-of-a-god-is-many

ಗುರುಗಳ ಮಾತಿಗೆ ಏನು ಹೇಳಬೇಕು ಅಂತ ಖಲೀಮುಲ್ಲಾಗೆ ಗೊತ್ತಾಗಲಿಲ್ಲ. ಕೊನೆಗೆ ಗುರುಗಳೇ ವಿವರಿಸಿದರು:

ಖಲೀಮುಲ್ಲಾಜಿ, ಬೇಸರ ಪಟ್ಟುಕೊಳ್ಳಬೇಡಿ. ನಮಗೂ ನಿಮ್ಮ ಹಾಗೆಯೇ ಇರುವುದೊಂದೇ ದೇವರು. ಅದನ್ನೇ ಋಗ್ವೇದದಲ್ಲಿ ಏಕಮ್ ಸತ್ ವಿಪ್ರಾ: ಬಹುಧಾ ವದಂತಿ ಎಂಬ ಮಂತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.. ಅದನ್ನೇ ಬಸವಣ್ಣನವರು ‘ದೇವನೊಬ್ಬ
ನಾಮ ಹಲವು’ ಅಂತ ಕನ್ನಡಿಸಿದ್ದಾರೆ.”

“ಹಾಗಾದರೆ ಗುರುಗಳೇ, ಅಷ್ಟೊಂದು ಸಂಖ್ಯೆಯ ದೇವರುಗಳೆಲ್ಲ ಏನು?”

“ಅವೆಲ್ಲಾ ಇರುವ ಒಬ್ಬನೇ ದೇವನ ಅನೇಕಾನೇಕ ಶಕ್ತಿಗಳು. ಈಗ ನೋಡಿ, ದೇವನ ಸೃಷ್ಟಿ ಶಕ್ತಿಯನ್ನು ನಾವು ಬ್ರಹ್ಮ ಅಂತ ಕರೆಯುತ್ತೇವೆ. ಅವನ ಕಾಪಾಡುವ ಶಕ್ತಿಯನ್ನು ವಿಷ್ಣು ಅಂತ ಕರೆಯುತ್ತೇವೆ. ಹಾಗೆಯೇ ನಾಶಮಾಡುವ ಅವನ ಶಕ್ತಿಗೆ ಶಿವ ಅಂತ ಕರೆಯುತ್ತೇವೆ. ವಿಶ್ವದಲ್ಲಿನ ಸಕಲ ಚರಾಚರಗಳೂ ದೇವನ ಈ ಮೂರೂ ಶಕ್ತಿಗಳ ಕೈವಾಡದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹಾಗೆಯೇ ಆ ದೇವನ ಗಾಳಿಯ ಶಕ್ತಿಗೆ ವಾಯುದೇವನೆಂದೂ, ಜಲಶಕ್ತಿಗೆ ವರುಣದೇವ ನೆಂದೂ, ಸುಡುವ ಶಕ್ತಿಗೆ ಅಗ್ನಿದೇವನೆಂದೂ ಹೇಳುತ್ತಾರೆ.”

ಗುರುಗಳ ವಿವರಣೆಯಿಂದ ಖಲೀಮುಲ್ಲಾಗೆ ಸಮಾಧಾನವಾಯಿತು.

“ಗುರುಗಳೇ, ಹೀಗೆ ತಮ್ಮಂತೆ ಸಮಂಜಸವಾಗಿ ವಿವರಣೆ ಕೊಡುವುದು ಸಾಧ್ಯವಾದರೆ ತಪ್ಪು ತಿಳಿವಳಿಕೆಗೆ ಅವಕಾಶವೇ ಇಲ್ಲ. ಅಧಿಕ ಪ್ರಸಂಗದಿಂದ ಪ್ರಶ್ನಿಸಿದ್ದಕ್ಕೆ ದಯವಿಟ್ಟು ಕ್ಷಮಿಸಿ” ಅಂತ ಖಲೀಮುಲ್ಲಾ ಕ್ಷಮೆ ಕೇಳಿಕೊಂಡ.

“ಕ್ಷಮಿಸುವಂತಹ ತಪ್ಪೇನನ್ನೂ ನೀವು ಮಾಡಿಲ್ಲ. ಅನುಮಾನವನ್ನು ಪ್ರಶ್ನಿಸಿ ಪರಿಹರಿಸಿ ಕೊಂಡಿದ್ದೀರಿ ಅಷ್ಟೇ.”

ಈ ಮಾತಿನಿಂದ ಖಲೀಮುಲ್ಲಾ ಸಂತಸಗೊಂಡು ಗುರುಗಳಿಂದ ಬೀಳ್ಕೊಂಡ.

– ಜಿ. ವಿ. ಗಣೇಶಯ್ಯ.

Amrita sinchana – 13:  power of a god is many