Sunday, August 16, 2026

BDA Apartments

Home Front Page ಆದಿ ಚುಂಚನಗಿರಿ ಕ್ಷೇತ್ರದಲ್ಲಿ ಜ. 4 ಮತ್ತು 5 ರಂದು ರಾಜ್ಯ ಮಟ್ಟದ ಯುವ ಜನೋತ್ಸವ...

ಆದಿ ಚುಂಚನಗಿರಿ ಕ್ಷೇತ್ರದಲ್ಲಿ ಜ. 4 ಮತ್ತು 5 ರಂದು ರಾಜ್ಯ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮ- ಸಚಿವ ಡಾ.ನಾರಾಯಣಗೌಡ.

ಮಂಡ್ಯ, ಡಿ.30,2021(www.justkannada.in):  ಜನವರಿ 4-5 ರಂದು ನಡೆಯಲಿರುವ ರಾಜ್ಯ ಮಟ್ಟದ ‘ಯುವ ಜನೋತ್ಸವ’ವನ್ನು ಯಶಸ್ವಿಗೊಳಿಸಬೇಕು. ಅದಕ್ಕೆ ಯಾವುದೇ ಕುಂದುಕೊರತೆ ಆಗದ ರೀತಿ ನೋಡಿಕೊಳ್ಳಿ ಎಂದು ರೇಷ್ಮೆ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಯುವ ಜನೋತ್ಸವ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಪೂರ್ವಭಾವಿ ಕ್ರಮಗಳ ಕುರಿತು ಅಧಿಕಾರಿಗಳ ಜೊತೆ ಸಚಿವ ಡಾ.ನಾರಾಯಣಗೌಡ ಅವರು ಸಭೆ ನಡೆಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜನವರಿ 4-5 ರಂದು ಆದಿಚುಂಚನಗಿರಿಯಲ್ಲಿ ರಾಜ್ಯ ಮಟ್ಟದ ಯುವ ಜನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಜನವರಿ 4 ರಂದು ಆದಿ ಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀನಿರ್ಮಲಾನಂದ ನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಡಾ.ನಾರಾಯಣಗೌಡ ಅವರು ಉದ್ಘಾಟಿಸಲಿದ್ದಾರೆ.

ಯುವ ಜನೋತ್ಸವದ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿಗಳ ಬಹುಮಾನ ಮೊತ್ತವನ್ನು ಸಚಿವ ಡಾ. ನಾರಾಯಣಗೌಡ ಅವರು ಹೆಚ್ಚಿಸಲು ಕ್ರಮವಹಿಸಿದ್ದಾರೆ. ವೈಯುಕ್ತಿಕ ಸ್ಪರ್ಧೆಗಳಿಗೆ ಮೊದಲ ಬಹುಮಾನ 15 ಸಾವಿರ,
ಎರಡನೇ ಬಹುಮಾನ 10 ಸಾವಿರ, ಮೂರನೇ ಬಹುಮಾನ 5 ಸಾವಿರ, ಗುಂಪುಗಳಿಗೆ ನೀಡುವ ಮೊದಲ ಬಹುಮಾನ 25 ಸಾವಿರ, ಎರಡನೇ ಬಹುಮಾನ 25 ಸಾವಿರಕ್ಕೆ ಹೆಚ್ಚಳ ಮಾಡಿ ಸಚಿವ ಡಾ.ನಾರಾಯಣಗೌಡ ಅವರು ಆದೇಶಿಸಿದರು.

ಯುವ ಜನೋತ್ಸವಕ್ಕೆ ರಾಜ್ಯದ ಮೂಲೆಮೂಲೆಯಿಂದ ಎರಡರಿಂದ ಮೂರು ಸಾವಿರ ಪ್ರತಿಭಾನ್ವಿತರು ಆಗಮಿಸಲಿದ್ದಾರೆ. ಅವರಿಗೆ ಊಟ, ವಸತಿ ಸೇರಿದಂತೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕೋವಿಡ್ ನಿಯಮಗಳನ್ನು ಪಾಲನೆಯೊಂದಿಗೆ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ, ಪ್ರತಿಭಾನ್ವಿತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಬಹುಮಾನ ಮೊತ್ತವನ್ನು ಹೆಚ್ಚಿಸಲಾಗಿದೆ. ರಾಜ್ಯ ಮಟ್ಟದ ಈ ಯುವ ಜನೋತ್ಸವ ಕಾರ್ಯಕ್ರಮ ಮಂಡ್ಯ ಜಿಲ್ಲೆಯ ಹೆಮ್ಮೆಯಾಗಿದ್ದು, ಇದನ್ನು ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.

ಮಂಡ್ಯದಲ್ಲಿ ನಡೆದರೇ ಇಂಡಿಯಾದಲ್ಲಿ ನಡೆದಂತೆ. ಕಾರ್ಯಕ್ರಮವನ್ನು ಯಶಸ್ವಿಯಾಗೊಳಿಸುವ ಮೂಲಕ ಮಂಡ್ಯದ ಅಸ್ಮಿತೆಯನ್ನು ಎತ್ತಿ ಹಿಡಿಯಬೇಕು ಎಂದು ಸಚಿವರು ಕರೆ ನೀಡಿದರು.

ಯುವ ಜನೋತ್ಸವದಲ್ಲಿ ಭಾಗಿಯಾಗುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲರೂ ಕಡ್ಡಾಯವಾಗಿ ಎರಡು ಡೋಸ್ ವ್ಯಾಕ್ಸಿನ್ ಪಡೆದಿರಬೇಕು. ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಕ್ಲಿನಿಕ್ ಸ್ಥಾಪನೆ, ಆ್ಯಂಬುಲೆನ್ಸ್ ಸೇವೆ, ಊಟ, ವಸತಿ ಸೇರಿದಂತೆ ಯಾವುದೇ ಕುಂದು ಕೊರತೆಯಾಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಶ್ವಥಿ ಅವರು ಸಚಿವರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ, ಜಿಲ್ಲಾಧಿಕಾರಿ ಅಶ್ವಥಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸೇರಿದಂತೆ ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

key words: Adi Chunchanagiri -State Level -yuvajanotsav- Program Minister Dr. Narayana Gowda.