Monday, September 28, 2026

BDA Apartments

ಮೈಸೂರು ದಸರಾ ಉದ್ಘಾಟಿಸುವುದು ನನ್ನ ಬಾಳಿನ ಸುದೈವ : ಎಸ್.ಎಂ.ಕೃಷ್ಣ BDA JK_Adv BDA Adv
Home Front Page ಮೈಸೂರು ದಸರಾ ಉದ್ಘಾಟಿಸುವುದು ನನ್ನ ಬಾಳಿನ ಸುದೈವ : ಎಸ್.ಎಂ.ಕೃಷ್ಣ

ಮೈಸೂರು ದಸರಾ ಉದ್ಘಾಟಿಸುವುದು ನನ್ನ ಬಾಳಿನ ಸುದೈವ : ಎಸ್.ಎಂ.ಕೃಷ್ಣ

 

ಮೈಸೂರು, ಅ.02, 2021 : (www.justkannada.in news ) ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸುತ್ತಿರುವುದು ನನ್ನ ಬಾಳಿನ ಸುದೈವ ಎಂದು ಮಾಜಿ ಮುಖ್ಯಮಂತ್ರಿ, ಹಿರಿಯ ಮುತ್ಸುದ್ಧಿ ಎಸ್.ಎಂ.ಕೃಷ್ಣ ಅವರು ಹೇಳಿದರು.

ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌, ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕಂದಾಯ ಸಚಿವ ಅಶೋಕ್ ಅವರಿಂದ 2021ರ ಸಾಲಿನ ಮೈಸೂರು ದಸರಾ ಉದ್ಘಾಟನೆಯ ಆಮಂತ್ರಣ ಸ್ವೀಕರಿಸಿದ ಬಳಿಕ ಮಾತನಾಡಿದರು.

ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಾಡಿನ ಸರ್ವತೋಮುಖ ಅಭಿವೃದ್ಧಿಯಾಗಲಿ. ನನ್ನ ವ್ಯಕ್ತಿತ್ವದ ಪೋಷಣೆಗೆ ಹಾಗೂ ಅದನ್ನು ರೂಪಿಸಲಿಕ್ಕೆ ಮೈಸೂರು ಮತ್ತು ರಾಮಕೃಷ್ಣ ಆಶ್ರಮ ಬಹಳ ಪ್ರಭಾವವನ್ನು ಬೀರಿದೆ. ನನ್ನ ಶಾಲೆ ಮತ್ತು ಕಾಲೇಜು ದಿನಗಳನ್ನು ಮೈಸೂರಿನಲ್ಲಿ ಕಳೆದಿದ್ದೆ. ಇದೀಗ ದಸರಾ ಉದ್ಘಾಟನೆ ಮಾಡುವ ಸುಯೋಗ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನನ್ನ ಮೇಲೆ ಗೌರವವಿಟ್ಟು ಇಂತಹ ಅವಕಾಶ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌, ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಸಚಿವ ಸಂಪುಟದ ಎಲ್ಲರಿಗೂ ನನ್ನ ಅಭೂತಪೂರ್ವ ಅಭಿನಂದನೆಗಳು. ಸರ್ಕಾರದ ಈ ಆಹ್ವಾನವನ್ನು ವಿನಮ್ರವಾಗಿ ಸ್ವೀಕರಿಸುತ್ತಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌, ದಸರಾ ಉದ್ಘಾಟನೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಚರ್ಚೆ ಬಂದಾಗ ಸರ್ವಸಮ್ಮತದಿಂದ ಬಂದ ಹೆಸರು ಹಿರಿಯ ಮುತ್ಸುದ್ಧಿ ಎಸ್.ಎಂ.ಕೃಷ್ಣ ಅವರದ್ದು ಎಂದು ಹೇಳಿದರು.

ಸಾಮಾನ್ಯ ರಾಜಕಾರಣದಿಂದ ಬಹಳಷ್ಟು ಎತ್ತರಕ್ಕೆ ಬೆಳೆದ ನಮ್ಮ ಪ್ರೀತಿಯ ನಾಯಕರಾದ ಎಸ್.ಎಂ.ಕೃಷ್ಣ ಅವರನ್ನು ಇಂದು ನಾವು, ಸಂಪುಟದ ಸಹೋದ್ಯೋಗಿ ಎಸ್.ಟಿ.ಸೋಮಶೇಖರ್, ಮೈಸೂರು ಮೇಯರ್ ಮತ್ತು ಸಂಸದರು ಇಂದು ಆಗಮಿಸಿ ದಸರಾ ಉದ್ಘಾಟನೆಗೆ ಆಹ್ವಾನಿಸಿದೆವು. ನಮ್ಮ ಆಮಂತ್ರಣವನ್ನು ಸಂತೋಷದಿಂದ ಒಪ್ಪಿಕೊಂಡಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.

ಎಸ್.ಎಂ.ಕೃಷ್ಣ ಅವರಿಗೆ ಮೈಸೂರು ಪೇಟಾ ತೊಡಿಸಿ, ಫಲಪುಷ್ಪ ತಾಂಬೂಲದೊಂದಿಗೆ, ಶಿವಾನಿ ಮರದಲ್ಲಿ ಕೈಯಿಂದ ಕೆತ್ತಲಾದ ಅಂಬಾರಿಯ ವಿಗ್ರಹದ ನೆನಪಿನ ಕಾಣಿಕೆ ನೀಡಿ ಗೌರವಿಸುವ ಮೂಲಕ ದಸರಾ ಉದ್ಘಾಟನೆಗೆ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಕಂದಾಯ ಸಚಿವ ಅಶೋಕ್, ಮೈಸೂರು ಮತ್ತು ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಮೂಡಾ ಅಧ್ಯಕ್ಷರಾದ ಎಂ.ಸಿ.ರಾಜೀವ್, ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಶ್ರೀವತ್ಸವ, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಸಹಕಾರ ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್, ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಅಭ್ಯರ್ಥಿ ಸಿದ್ದರಾಮೇಗೌಡ ಸೇರಿದಂತೆ ನಾನಾ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

key words : mysore-dasara-inaguration-s.m.krishna-karnataka