ಖಾಸಗಿ ಬ್ಯಾಂಕ್‌ನಲ್ಲಿ ಖಾತೆ ತೆರೆದ ನಂತರ ಮೂರು ವರ್ಷಗಳಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ರೂ.೫೫ ಲಕ್ಷ ನಷ್ಟವಾಗಿದೆ: ಸಿಎಜಿ

 

ಬೆಂಗಳೂರು, ಅಕ್ಟೋಬರ್ ೨, ೨೦೨೧ (www.justkannada.in): ಭಾರತದ ಕಂಪ್‌ಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ) ಅವರ ವರದಿಯೊಂದರ ಪ್ರಕಾರ ಖಾಸಗಿ ವಲಯದ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆದ ಕಾರಣದಿಂದಾಗಿ ಬೆಂಗಳೂರು ವಿಶ್ವವಿದ್ಯಾಲಯ (ಬಿಯು) ೨೦೧೭ರಿಂದ ಈವರೆಗೆ ರೂ. ೫೫ ಲಕ್ಷ ನಷ್ಟ ಅನುಭವಿಸಿದೆಯಂತೆ.

ಮಾರ್ಚ್ ೨೦೨೦ರ ಅಂತ್ಯದ ಸಿಎಜಿ ಅನುಸರಣಾ ಲೆಕ್ಕಪರಿಶೋಧನೆಯಲ್ಲಿ ಈ ಅಂಶವನ್ನು ನಮೂದಿಸಲಾಗಿದ್ದು, ಈ ಕುರಿತಂತೆ ಗಮನ ಹರಿಸಿ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಹಾಗೂ ರಾಜ್ಯ ಸರ್ಕಾರದಿಂದ ನಿಗದಿಪಡಿಸಲಾಗಿದ್ದಂತಹ ಮಾರ್ಗಸೂಚಿಗಳು ಹಾಗೂ ವಿಧಾನಗಳನ್ನು ಅನುಸರಿಸದೇ ಇರುವ ಕಾರಣದಿಂದಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಉನ್ನತ ಶಿಕ್ಷಣ ಇಲಾಖೆಗೆ ಸೂಚಿಸಿದೆ.

ಮಾರ್ಚ್ ೨೦೨೧ರಲ್ಲಿ ಈ ವರದಿಯಲ್ಲಿ ತಿಳಿಸಿರುವಂತೆ ಲೆಕ್ಕಪರಿಶೋಧನಾ ಅವಲೋಕನಗಳನ್ನು ಒಪ್ಪಿಕೊಂಡು ರಾಜ್ಯ ಸರ್ಕಾರ, “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ವಿಶ್ವವಿದ್ಯಾಲಯ ಆನ್‌ಲೈನ್ ಶುಲ್ಕ ಸಂಗ್ರಹಿಸುವ ಟೆಂಡರ್‌ನಲ್ಲಿ ಭಾಗವಹಿಸಿ ಅತ್ಯಂತ ಕಡಿಮೆ ಬಿಡ್ ಮಾಡುವ ಮೂಲಕ ಯಶಸ್ವಿಯಾಗಿತ್ತು. ಹಾಗಾಗಿ ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಪ್ರಕಾರವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯದ ಸೇವೆಗಳನ್ನೇ ಬಳಸಿಕೊಳ್ಳಬೇಕಾಗಿತ್ತು. ಆದರೆ ಈ ಸೇವೆಗಳನ್ನು ವಿಶ್ವವಿದ್ಯಾಲಯ ಅನರ್ಹವಾಗಿದ್ದಂತಹ ಆ್ಯಕ್ಸಿಸ್ ಬ್ಯಾಂಕ್‌ಗೆ ವಹಿಸಿದೆ. ಇದು ವಿಶ್ವವಿದ್ಯಾಲಯದ ಕೆಟಿಪಿಪಿ ಕಾಯ್ದೆ, ೧೯೯೯ ಹಾಗೂ ಅದರಡಿ ಬರುವ ನಿಯಮಗಳ ಉಲ್ಲಂಘನೆಯಾಗಿದ್ದು, ವಿಶ್ವವಿದ್ಯಾಲಯದ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳಬೇಕಾಗುತ್ತದೆ,” ಎಂದು ತಿಳಿಸಿತ್ತು.

ಉನ್ನತ ಶಿಕ್ಷಣ ಇಲಾಖೆಯೂ ಸಹ ಆ್ಯಕ್ಸಿಸ್ ಬ್ಯಾಂಕಿನಲ್ಲಿ ಚಾಲ್ತಿ ಖಾತೆ (ಕರೆಂಟ್ ಅಕೌಂಡ್) ತೆರೆಯುವ ಬೆಂಗಳೂರು ವಿಶ್ವವಿದ್ಯಾಲಯದ ಪ್ರಸ್ತಾವನೆಗೆ ಒಪ್ಪಿಗೆ ನೀಡಿರಲಿಲ್ಲ ಎಂದು ತಿಳಿಸಿದೆ.

ಏಕೆ ನಷ್ಟವಾಯಿತು?

ಹಣವನ್ನು ಚಾಲ್ತಿ ಖಾತೆಗೆ ವರ್ಗಾಯಿಸಿದ ನಂತರ ಬೆಂಗಳೂರು ವಿಶ್ವವಿದ್ಯಾಲಯದ ಎಸ್‌ಬಿಐ ಖಾತೆಗೆ ವರ್ಗಾಯಿಸುವಲ್ಲಿ ಆ್ಯಕ್ಸಿಸ್ ಬ್ಯಾಂಕ್‌ಗೆ ತಗುಲಿದಂತಹ ಸರಾಸರಿ ಸಮಯದಿಂದಾಗಿ ರೂ.೧೭.೪೩ ಲಕ್ಷ ಬಡ್ಡಿ ನಷ್ಟವುಂಟಾಗಿದೆ. ಈ ರೀತಿ ವರ್ಗಾವಣೆಯನ್ನು ಏಳು ದಿನಗಳ ಒಳಗಾಗಿ ಮಾಡಬೇಕು. ಆದರೆ ಕಳೆದ ಮೂರು ವರ್ಷಗಳಲ್ಲಿ ಆ್ಯಕ್ಸಿಸ್ ಬ್ಯಾಂಕ್‌ನಿಂದ ಈ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆಯಂತೆ, ಆ ಕಾರಣದಿಂದಾಗಿ ಬಡ್ಡಿ ನಷ್ಟವಾಗಿರುವುದಾಗಿ ವರದಿ ತಿಳಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕೃತ ಖಾತೆಯನ್ನು ಹೊಂದಿದ್ದು ವಹಿವಾಟುಗಳನ್ನು ನಡೆಸುತ್ತಿದೆ. ಇದರ ಹೊರತಾಗಿಯೂ ವಿಶ್ವವಿದ್ಯಾಲಯ ಹಲವು ಬ್ಯಾಂಕ್‌ಗಳಿಂದ ಕ್ಲೋಸ್ಡ್ ಕೊಟೇಷನ್‌ಗಳನ್ನು ಆಹ್ವಾನಿಸಿದೆ. ಇತರೆ ಬ್ಯಾಂಕ್‌ಗಳು ಆಕರ್ಷಕ ಕೊಡುಗೆಗಳನ್ನು ನೀಡಲು ಮುಂದೆ ಬಂದಿದ್ದರೂ ಸಹ ವಿಶ್ವವಿದ್ಯಾಲಯ ಅವುಗಳನ್ನು ಪರಿಗಣಿಸದೇ ಆ್ಯಕ್ಸಿಸ್ ಬ್ಯಾಂಕ್‌ಗೇ ಆದ್ಯತೆ ನೀಡಿರುವದನ್ನು ಲೆಕ್ಕಪರಿಶೋಧನೆ ವರದಿಯಲ್ಲಿ ಪ್ರಶ್ನಿಸಲಾಗಿದೆ. ಖಾಸಗಿ ವಲಯದ ಬ್ಯಾಂಕ್‌ಗೆ ಏಕೆ ವಿಶ್ವವಿದ್ಯಾಲಯ ಆದ್ಯತೆ ನೀಡಿತು ಎಂಬ ಅಂಶ ದಾಖಲಾಗಿಲ್ಲ. ಸ್ವೀಪ್ ಇನ್/ ಸ್ವೀಪ್ ಔಟ್ ಖಾತೆಯ ಬದಲಾಗಿ ಚಾಲ್ತಿ ಖಾತೆ (current account) ತೆರೆದಿರುವುದು ಮಾರ್ಗಸೂಚಿಗಳ ಉಲ್ಲಂಘನೆಯಷ್ಟೇ ಅಲ್ಲದೆ, ಒಟ್ಟು ರೂ.೩೭.೭೯ ಲಕ್ಷ ಬಡ್ಡಿ ನಷ್ಟವಾಗಿರುವುದು ಕಂಡು ಬಂದಿದೆ.

ಬೆಂಗಳೂರು ವಿಶ್ವವಿದ್ಯಾಲಯ ಎಲ್ಲಾ ರೀತಿಯ ಆನ್‌ಲೈನ್ ಶುಲ್ಕಗಳನ್ನು ಪಡೆಯಲು ಫೆಬ್ರವರಿ ೨೦೧೭ರಲ್ಲಿ ಆ್ಯಕ್ಸಿಸ್ ಬ್ಯಾಂಕಿನಲ್ಲಿ ಚಾಲ್ತಿ ಖಾತೆಯನ್ನು ತೆರೆದಿದೆ ಹಾಗೂ ಆನ್‌ಲೈನ್ ಮೂಲಕ ಸಂಗ್ರಹವಾಗುವ ಮೊತ್ತವನ್ನು ವಿಶ್ವವಿದ್ಯಾಲಯದ ಖಾತೆಗೆ ವರ್ಗಾಯಿಸುವ ಸಮಯವನ್ನು ನಿಗಧಿಪಡಿಸುವುದಕ್ಕೆ ಸಂಬಂಧಿಸಿದಂತೆ ಒಂದು ಒಪ್ಪಂದವನ್ನೂ ಮಾಡಿಕೊಂಡಿರುವುದು ಕಂಡು ಬಂದಿದೆ. ಆದರೆ ಮೇಲೆ ತಿಳಿಸಿರುವಂತಹ ಮಾರ್ಗಸೂಚಿಗಳ ಪ್ರಕಾರ ಖಾತೆಯನ್ನು ತೆರೆದ ಕಾರಣದಿಂದಾಗಿ ವಿಶ್ವವಿದ್ಯಾಲಯ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅನುಮತಿಯನ್ನು ಪಡೆಯಬೇಕಾಗಿತ್ತು. ಆದರೆ ಯಾವುದೇ ಅನುಮೋದನೆಯನ್ನೂ ಪಡೆದಿಲ್ಲ.

ಸಿಂಡಿಕೇಟ್ ಸದಸ್ಯರಿಂದ ಆಕ್ಷೇಪ

ಈ ಕುರಿತಂತೆ ಒಂದು ವರ್ಷದ ಹಿಂದೆಯೇ ಕೆಲವು ಸಿಂಡಿಕೇಟ್ ಸದಸ್ಯರು ಹಾಗೂ ಹಣಕಾಸು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಉಪಕುಲಪತಿಗಳ ಮುಂದಾಳತ್ವದಲ್ಲಿ ರಚಿಸಲಾಗಿದ್ದಂತಹ ಸಮಿತಿಯೂ ಸಹ ಕಳೆದ ಒಂದು ವರ್ಷದಿಂದ ಸಭೆ ಸೇರಿಲ್ಲ ಎಂದು ಆರೋಪಿಸಲಾಗಿದೆ.
ಈ ಕುರಿತಂತೆ ಮಾತನಾಡಿದ ಓರ್ವ ಸದಸ್ಯರು ಹೇಳಿರುವಂತೆ, “ಈ ಹಿಂದೆ ಆನ್‌ಲೈನ್ ಪಾವತಿಗಳು ಎಸ್‌ಬಿಐ ಖಾತೆಗೆ ಬರುತಿತ್ತು, ಹಾಗೂ ವಿಶ್ವವಿದ್ಯಾಲಯ ಅದನ್ನು ಆ್ಯಕ್ಸಿಸ್ ಬ್ಯಾಂಕ್‌ಗೆ ಬದಲಾಯಿಸಿತು. ಆಗಿನಿಂದ ವಿಶ್ವವಿದ್ಯಾಲಯಕ್ಕೆ ಹಣಕಾಸಿನ ನಷ್ಟ ಉಂಟಾಗುತ್ತಿದೆ ಎಂದು ನಾವು ಆಕ್ಷೇಪಿಸುತ್ತಿದ್ದೆವು. ಆದರೆ ಆ ಕುರಿತು ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ,” ಎಂದು ತಿಳಿಸಿದ್ದಾರೆ.


ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

key words : bangalore-university-lost-rs-55-lakh-in-three-years-after-opening-a/c-with-private-bank-cag