ಮೈಸೂರು, ನವೆಂಬರ್,11,2026 (www.justkannada.in): ಮೈಸೂರು ಕರ್ನಾಟಕದ ನಂಬರ್ 1 ಸ್ವಚ್ಛ ನಗರ ಪಟ್ಟ ಗಳಿಸಲು ಪೌರಕಾರ್ಮಿಕರ ಪಾತ್ರ ಕಾರಣವಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶ್ಲಾಘಿಸಿದರು.
ನಾಳೆ ಪ್ರಧಾನಿ ನರೇಂದ್ರಮೋದಿ ಮೈಸೂರಿಗೆ ಆಗಮನ ಹಿನ್ನೆಲೆ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬೆಂಗಳೂರಿನಲ್ಲಿ ಪಿಂಕ್ ಲೈನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ನರೇಂದ್ರ ಮೋದಿಯವರು ಮೈಸೂರಿಗೆ ಬರುತ್ತಾರೆ. ಕಾರಿನಲ್ಲಿ ರೋಡ್ ಶೋ ಇರುತ್ತದೆ. ಮೊದಲು ಲಲಿತ್ ಮಹಲ್ ಹೆಲಿಪ್ಯಾಡ್ ನಿಂದ ರೋಡ್ ಶೋ ನಡೆಸುತ್ತಾರೆ. ಹೆಲಿಪ್ಯಾಡ್ ನಿಂದ ಪ್ಲಾನೆಟೋರಿಯಂ ತನಕ ಜನರು ನಿಲ್ಲಲು ಅವಕಾಶವಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಆ ಬಳಿಕ ತಾರಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ತಾರಾಲಯ ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮವಿದೆ. ಈ ತಂತ್ರಜ್ಞಾನದ ವಿಶ್ವದ ಮೊದಲ ತಾರಾಲಯ ಇದಾಗಿದ್ದು, 8 ಸಾವಿರ ಜನ ವಿದ್ಯಾರ್ಥಿಗಳು ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಈ ಬಗ್ಗೆ ಜಿಲ್ಲಾಡಳಿತ ಪಾಸ್ ವಿತರಣೆ ಮಾಡಲಿದೆ ಎಂದು ತಿಳಿಸಿದರು.
ಮೈಸೂರಿಗೆ ಕರ್ನಾಟಕದ ನಂಬರ್ 1 ಸ್ವಚ್ಛ ನಗರ ಪಟ್ಟ
ಮೈಸೂರು ಕರ್ನಾಟಕದ ನಂಬರ್ 1 ಸ್ವಚ್ಛ ನಗರ ಪಟ್ಟ ಗಳಿಸಲು ಪೌರಕಾರ್ಮಿಕರ ಪಾತ್ರ ಕಾರಣವಾಗಿದೆ. ಕರ್ನಾಟಕದಲ್ಲಿ ನಂಬರ್ 1 ಸ್ವಚ್ಚನಗರ ಸ್ಥಾನ ಗಳಿಸುವುದು ಕೂಡ ಸುಲಭವಲ್ಲ. ಪೌರ ಕಾರ್ಮಿಕರ ಪರಿಶ್ರಮದ ಫಲವಾಗಿ ಮೈಸೂರು ರಾಜ್ಯದ ನಂಬರ್ ಒನ್ ಸ್ವಚ್ಚ ನಗರವಾಗಿ ಹೊರಹೊಮ್ಮಿದೆ. ಜೊತೆಗೆ ಮಹಾನಗರ ಪಾಲಿಕೆಯು ಪ್ರಮುಖ ಪಾತ್ರ ವಹಿಸಿದೆ ಎಂದು ಸಂಸದ ಯದುವೀರ್ ತಿಳಿಸಿದರು.
ದೇಶದ ಸ್ವಚ್ಚ ನಗರಗಳ ಪಟ್ಟಿಯಲ್ಲಿ ಮೈಸೂರು ಸ್ಥಾನ ಪಡೆಯದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ವಿವಿಧ ಮಾನದಂಡಗಳನ್ನು ಅನುಸರಿಸಿ ಸ್ಥಾನವನ್ನು ನೀಡುತ್ತಾರೆ. ನಮ್ಮಲ್ಲಿ ಇರುವ ಕೆಲವೊಂದು ಲೋಪಗಳನ್ನು ಸರಿಪಡಿಸಿಕೊಳ್ಳಬೇಕಿದೆ. ರಿಂಗ್ ರಸ್ತೆ, ಎಕ್ಸೆಲ್ ಪ್ಲಾಂಟ್ ನಲ್ಲಿ ಕಸ ವಿಲೇವಾರಿ ಸಮಸ್ಯೆ ಇದೆ. ಇದನ್ನು ಸರಿಪಡಿಸಲು ಪ್ರಯತ್ನಗಳು ಸಾಗಿವೆ. ಇದರಲ್ಲಿ ಸಾರ್ವಜನಿಕರ ಪಾತ್ರ ಕೂಡ ಪ್ರಮುಖವಾಗಿದೆ. ಜನರು ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ಬಿಡಬೇಕು ಎಂದು ಮನವಿ ಮಾಡಿದರು.
ನಮ್ಮ ಪೊಲೀಸರು ಗ್ರೌಂಡ್ ಲೆವೆಲ್ ನಲ್ಲಿ ಕೆಲಸ ಮಾಡುತ್ತಿಲ್ವಾ ಅನಿಸುತ್ತೆ
ನಂಜನಗೂಡಿನಲ್ಲಿ ಕೇರಳಂ ಮೂಲದ ಡ್ರಗ್ಸ್ ಆರೋಪಿ ವಾಸ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ನಮ್ಮ ಪೊಲೀಸರ ಬಗ್ಗೆ ಅಪಾರವಾದ ಗೌರವವಿದೆ. ಆದರೆ ಡ್ರಗ್ಸ್ ವಿಚಾರದಲ್ಲಿ ನಮ್ಮ ಪೊಲೀಸ್ ಇಲಾಖೆಯ ಬಗ್ಗೆ ಹಲವು ರೀತಿಯ ಅನುಮಾನ ಮೂಡುತ್ತದೆ. ಈ ಬಗ್ಗೆ ನಮ್ಮ ಪೊಲೀಸರಿಗೆ ಮಾಹಿತಿ ಇಲ್ವಾ? ನಮ್ಮ ಪೊಲೀಸರು ಗ್ರೌಂಡ್ ಲೆವೆಲ್ ನಲ್ಲಿ ಕೆಲಸ ಮಾಡುತ್ತಿಲ್ವಾ ಅನಿಸುತ್ತೆ. ಇದು ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ. ದೆಹಲಿ, ಮಹಾರಾಷ್ಟ್ರ, ಗುಜರಾತ್, ಕೇರಳಂ ಪೊಲೀಸರು ಇಲ್ಲಿಗೆ ಬಂದು ಡ್ರಗ್ಸ್ ಪತ್ತೆ ಹಚ್ಚುತ್ತಾರೆ. ಆದರೆ ನಮ್ಮ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ಕೊಡುತ್ತಿಲ್ಲವಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರ ಚಿಂತಿಸಬೇಕು. ಪೊಲೀಸರಿಗೆ ಮುಕ್ತ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.






